ಕಡೂರು: ಆಸಂಧಿ ಗ್ರಾಮದ ಶ್ರೀ ಲಕ್ಷ್ಮೀ ರಂಗನಾಥಸ್ವಾಮಿ ದೇವಾಲಯದ ಪುನರ್ ನಿರ್ಮಾಣದ ಕಾರ್ಯದಲ್ಲಿ ತಲಕಾಡು ಗಂಗರ ಕಾಲದ ಶಾಸನ ಸಹಿತ ಭಗ್ನ ವೀರಗಲ್ಲೊಂದು ಇತಿಹಾಸ ಸಂಶೋಧಕ ಹಿರೇನಲ್ಲೂರು ಪಾಂಡುರಂಗ ಪತ್ತೆಹೆಚ್ಚಿದ್ದಾರೆ.
ವೀರಗಲ್ಲು, 4.8 ಅಡಿ ಉದ್ದ, 3.3 ಅಡಿ ಅಗಲ ಮತ್ತು 0.6 ಅಡಿ ದಪ್ಪದ ಗ್ರಾನೈಟ್ ಕಲ್ಲಿನಿಂದ ಕೂಡಿದೆ. ಎಡಭಾಗದ ಕೆಳಗೆ ಮತ್ತು ಶಿರೋಭಾಗ ಭಗ್ನವಾಗಿದೆ. ವೀರಗಲ್ಲು ಅಗ್ರಭಾಗದಲ್ಲಿ ನೇಗಿಲು ಹೋಲುವ ಚಿತ್ರಣವಿದೆ. ಅದರ ಕೆಳಗೆ ಪೂರ್ವ ಹಳೆಗನ್ನಡ ಗಂಗರ ಲಿಪಿಯ ಎರಡು ಸಾಲಿನ ತ್ರುಟಿತ ಶಾಸನವಿದೆ. ಫಲಕದ ಎಡಭಾಗದಲ್ಲಿ ಹಾರಿಬರುತ್ತಿರುವ ಶತ್ರುಪಕ್ಷದ ಖಡ್ಗಧಾರಿ ಅಶ್ವಯೋಧ ಮತ್ತು ಅವನ ಪಕ್ಕದಲ್ಲಿ ನುಗ್ಗಿಬರುತ್ತಿರುವ ಇನ್ನೊಬ್ಬ ಖಡ್ಗಧಾರಿ ಯೋಧನ ವಿರುದ್ಧ ಹೋರಾಡುತ್ತಿರುವ ಚಿತ್ರಣವಿದೆ. ಯೋಧನ ಕಾಲಬಳಿ ಯುದ್ಧದಲ್ಲಿ ಮಡಿದವರ ಶವಗಳಿವೆ. ಕಾಳಗದಲ್ಲಿ ಗಂಗರ ಪರವಾಗಿ ಹೋರಾಡಿ ಮಡಿದ ಆಸಂಧಿಯ ವೀರನೊಬ್ಬನ ಪರಾಕ್ರಮವನ್ನು ಸಾರುತ್ತದೆ.
ಪಾಳೆಗಾರರ ಆಡಳಿತದಲ್ಲಿ ಶ್ರೀ ಲಕ್ಷ್ಮೀರಂಗನಾಥ ದೇವಾಲಯ ನಿರ್ಮಿಸುವಾಗ ಅಥವಾ ಜೀರ್ಣೋದ್ಧಾರದ ಸಮಯದಲ್ಲಿ ದೇವಾಲಯದ ಗೋಡೆಯೊಳಗೆ ಸೇರಿಸಿ ಮರಳು ಗಾರೆ ಹಾಕಿ ಮುಚ್ಚಿದ್ದರಿಂದ ವೀರಗಲ್ಲು ಶಿಲ್ಪಗಳ ಮೇಲೆ ಪಾಳೇಗಾರರ ಕಾಲದ ಮರಳು, ಸುಣ್ಣದ ಅಂಟು ಸೇರಿಸಿದ ಗಾರೆ ಅಂಟಿಕೊಂಡಿದೆ ಎಂದು ಇತಿಹಾಸ ಸಂಶೋಧಕ ಹಿರೇನಲ್ಲೂರು ಪಾಂಡುರಂಗ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ದೇವಸ್ಥಾನದ ಅರ್ಚಕ ಕೃಷ್ಣ್ಣಯ್ಯ, ಎ.ಆರ್.ಮಧುಸೂದನ್ ಹಾಗೂ ಹಡುಗಲು ಹರೀಶ್ ಇದ್ದರು.