ತಿಕೋಟಾ ಪಟ್ಟಣದಲ್ಲಿ ವೀರ ಯೋಧರಾಜು ಕರ್ಜಗಿ ಪಾರ್ಥಿವ ಶರೀರವನ್ನು ಮೆರವಣಿಗೆ ಮಾಡಲಾಯಿತು. 
ಜಿಲ್ಲೆ

ವೀರ ಜವಾನ್ ರಾಜು ಕರ್ಜಗಿ ಅಮರ್ ರಹೆ..!

ದತ್ತಾತ್ರೇಯ ಪಿ ಕುಲಕರ್ಣಿ

ತಿಕೋಟಾ: ಭಾರತ ಮಾತೆಯ ಉದ್ಘೋಷ, ತಿರಂಗಾ ಧ್ವಜಗಳ ಹಾರಾಟ, ದೇಶ ಭಕ್ತಿಗೀತೆಗಳ ಅನುರಣನ, ಮನತುಂಬಿದ ಗುಣಗಾನದ ನಡುವೆ ಸಕಲ ಸರ್ಕಾರಿ ಗೌರವಗಳೊಂದಿಗೆ ವೀರಯೋಧ ರಾಜು ಕರ್ಜಗಿ ಅವರ ಅಂತಿಮ ಸಂಸ್ಕಾರ ನೆರವೇರಿತು.

ಜಮ್ಮು- ಕಾಶ್ಮೀರದಲ್ಲಿ ಭಾರತೀಯ ಸೇನೆ ಮಹಾರ್ ರೆಜಿಮೆಂಟ್- 13ರ ಯುನಿಟ್-51 ರ ರಾಷ್ಟ್ರೀಯ ರೈಫಲ್ ಬಟಾಲಿಯನ್‌ನಲ್ಲಿ ಹವಾಲ್ದಾರ್ ಆಗಿ ಸೇವೆ ಸಲ್ಲಿಸುತ್ತಿದ್ದ ತಿಕೋಟಾದ ರಾಜು ಗಿರಿಮಲ್ಲ ಕರ್ಜಗಿ ಜೂನ್ 1ರಂದು ವೀರಮರಣ ಹೊಂದಿದ ಸುದ್ದಿ ಕೇಳಿ ಇಡೀ ಗ್ರಾಮ ದುಃಖದಲ್ಲಿ ಮುಳುಗಿತ್ತು.

ಜಮ್ಮು ಕಾಶ್ಮಿರದ ಶ್ರೀನಗರದಿಂದ ವಿಮಾನದ ಮೂಲಕ ಜೂ. 2 ರಂದು ರಾತ್ರಿ 9-19 ಗಂಟೆಗೆ ಯೋಧನ ಪಾರ್ಥಿವ ಶರೀರ ಹೈದ್ರಾಬಾದ್‌ಗೆ ತರಲಾಗಿತ್ತು. ಹೈದ್ರಾಬಾದ್‌ನಿಂದ ರಸ್ತೆ ಮಾರ್ಗವಾಗಿ ಜೂ. 3ರಂದು ಬೆಳಗ್ಗೆ 8-15ಕ್ಕೆ ಸ್ವಗ್ರಾಮವಾದ ತಿಕೋಟಾಕ್ಕೆ ತರುತ್ತಿದ್ದಂತೆ ಇಡೀ ಗ್ರಾಮವೇ ಕಂಬನಿ ಮಿಡಿಯಿತಲ್ಲದೇ ಸೆಲ್ಯೂಟ್ ಹೊಡೆದು ಯೋಧನಿಗೆ ನಮನ ಸಲ್ಲಿಸಿತು. ಪಾರ್ಥಿವ ಶರೀರಕ್ಕೆ ಅದ್ದೂರಿ ಸ್ವಾಗತ ಕೋರಲಾಯಿತು. ಭಾರತೀಯ ಸೇನಾಧಿಕಾರಿಗಳು, ಜಿಲ್ಲೆಯ ಪೊಲೀಸ್ ಸಿಬ್ಬಂದಿ ಹಾಗೂ ಜಿಲ್ಲಾಡಳಿತ ಪಾರ್ಥಿವ ಶರೀರವನ್ನು ಬರಮಾಡಿಕೊಂಡಿತು. ‘ವೀರ ಜವಾನ್ ಅಮರ ರಹೇ, ಭಾರತ ಮಾತಾಕಿ ಜೈ, ಯೋಧ ರಾಜು ಕರ್ಜಗಿಗೆ ಜಯವಾಗಲಿ….’ ಹೀಗೆ ಹಲವು ಉದ್ಘೋಷಗಳು ಮೈ-ಮನ ಪುಳಕಿತಗೊಳಿಸಿದವು. ಪೊಲೀಸ್ ವಾದ್ಯ ವೃಂದದಿಂದ ದೇಶಭಕ್ತಿ ಗೀತೆಗಳ ಸಂಗೀತ ಮೊಳಗಿಸಲಾಯಿತು.

ಮುಗಿಲು ಮುಟ್ಟಿದ ಆಕ್ರಂದನ

ತಿಕೋಟಾದ ವಾಡೇ ಆವರಣದಲ್ಲಿ ವೀರ ಯೋಧ ರಾಜುವಿನ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ತಹಸೀಲ್ದಾರ್ ಕಚೇರಿಯ ಆವರಣದಲ್ಲಿ ಇರಿಸಲಾಗಿತ್ತು. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಮನೆಗೆ ಆಸರೆಯಾಗಿದ್ದ ಮಗ ರಾಷ್ಟ್ರಧ್ವಜ ಹೊದ್ದು ಮಲಗಿದ್ದನ್ನು ಕಂಡು ತಾಯಿ ಅಕ್ಕುಬಾಯಿ, ಒಡಹುಟ್ಟಿದವರ ರೋದನ ಮುಗಿಲು ಮುಟ್ಟಿತ್ತು. ಪತ್ನಿ ಸುಧಾರಾಣಿ ಅವರು ಪತಿ ಅಗಲಿಕೆಯಿಂದಾಗಿ ಗರಬಡಿದವರಂತೆ ಕಂಗಾಲಾಗಿ ಕುಳಿತಿದ್ದರು.
ಗ್ರಾಮಸ್ಥರು ರಾಜುವಿನ ಗುಣಗಾನಗೈದರು. ಮಕ್ಕಳು, ಮಹಿಳೆಯರು, ವೃದ್ಧರಾದಿಯಾಗಿ ಸರ್ವರೂ ರಾವುವಿನ ಮುಖದರ್ಶನ ಪಡೆದು ಕಂಬನಿ ಮಿಡಿದರು. ಆತ್ಮಕ್ಕೆ ಶಾಂತಿ ಕೋರಿದರು. ಕುಟುಂಬಸ್ಥರಿಗೆ ನೋವು ಭರಿಸುವ ಶಕ್ತಿ ದೊರಕಲಿ ಎಂದು ಪ್ರಾರ್ಥಿಸಿದರು. ಇಂಥ ಪುತ್ರ ಮನೆ-ಮನೆಗಳಲ್ಲಿ ಜನಿಸಲಿ ಎಂದು ಆಶಿಸಿದರು. ದೇಶ ಸೇವೆ ಮಾಡುವ ಅವಕಾಶ ತಮಗೂ ಸಿಗಲಿ ಎಂದು ಬಯಸಿದರು. ರಾಜುವಿನ ಸಾಧನೆ ಸ್ಮರಿಸಿಕೊಂಡು ಕುಟುಂಬಸ್ಥರು ರೋಧಿಸುತ್ತಿದ್ದ ದೃಶ್ಯ ಕಂಡು ಕರಳು ಚುರ್ ಎನ್ನಿಸಿತು.

ಬೃಹತ್ ಮೆರವಣಿಗೆ

ಪಟ್ಟಣದ ಎಲ್ಲೆಡೆ ಯೋಧ ರಾಜು ಅವರ ಕಟೌಟ್‌ಗಳನ್ನು ರಾರಾಜಿಸಿದವು. ಸುತ್ತಲಿನ ಗ್ರಾಮಗಳ ಸಾವಿರಾರು ಜನತೆ ಹಾಗೂ ಶಾಲೆ ಕಾಲೇಜುಗಳ ವಿದ್ಯಾರ್ಥಿಗಳು ಆಗಮಿಸಿ ಯೋಧನ ಅಂತಿಮ ದರ್ಶನ ಪಡೆದರು. ರಾಜಕೀಯ ನಾಯಕರು, ಗಣ್ಯರು ಸೇರಿ ಹಲವರು ಯೋಧನ ಪಾರ್ಥಿವ ಶರೀರದ ಮೇಲೆ ಹೂಗುಚ್ಚ ಇರಿಸಿ ಅಂತಿಮ ನಮನ ಸಲ್ಲಿಸಿದರು.

ವಾಡೆ ಆವರಣದಿಂದ ತೆರೆದ ವಾಹನದಲ್ಲಿ ಯೋಧ ರಾಜು ಕರ್ಜಗಿ ಅವರ ಪಾರ್ಥೀವ ಶರೀರವನ್ನು ಇಟ್ಟು ಪಟ್ಟಣದ ಪ್ರಮುಖ ರಸ್ತೆಗಳ ಮುಖಾಂತರ ಮೆರವಣಿಗೆ ಮಾಡಲಾಯಿತು. ವಿಜಯಪುರ ಜಿಲ್ಲಾ ಮಾಜಿ ಸೈನಿಕರ ಕಲ್ಯಾಣ ಸಂಘ, 36 ಕರ್ನಾಟಕ ಎನ್‌ಸಿಸಿ ಬೆಟಾಲಿಯನ್, ಸೈನಿಕ ಶಾಲೆ ವಿಜಯಪುರ, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ವತಿಯಿಂದ ಶ್ರದ್ಧಾಂಜಲಿ ಪರೇಡ್ ನಡೆಸಿ ವೀರಯೋಧನಿಗೆ ಗೌರವ ಸಲ್ಲಿಸಲಾಯಿತು. ಪೊಲೀಸ್ ಇಲಾಖೆ ಗಾರ್ಡ್ ಹಾಫ್ ಹಾನರ್ ಕುಶಾಲು ತೋಪು ಸಿಡಿಸಿ ಸರ್ಕಾರಿ ಗೌರವಗಳೊಂದಿಗೆ ಹುತಾತ್ಮ ವೀರಯೋಧನಿಗೆ ಗೌರವ ಸಲ್ಲಿಸಿತು. ಸ್ವಾಮೀಜಿಗಳು, ಅಧಿಕಾರಿಗಳು, ಜನಪ್ರತಿನಿಧಿಗಳು, ಗಣ್ಯರು ಪುಷ್ಪನಮನ ಸಲ್ಲಿಸಿದರು.

ತಿಕೋಟಾ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಧ್ಯಾಹ್ನ 2 ಗಂಟೆಗೆ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು. ಅಂತ್ಯಕ್ರಿಯೆ ವೇಳೆ ತಾಯಿ, ಪತ್ನಿ ಹಾಗೂ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತು. ಗ್ರಾಮಸ್ಥರಲ್ಲಿ ಶೋಕದ ಛಾಯೆ ಮೂಡಿತ್ತು.

ಅಂತಿಮ ಸಂಸ್ಕಾರದ ನಂತರ ರಾಷ್ಟ್ರಧ್ವಜವನ್ನು ಸೇನಾಧಿಕಾರಿ ಸುಬೇದಾರ್ ಬಲ್ಬೀರ್ ಸಿಂಗ್ ಹುತ್ತಾತ್ಮ ಯೋಧನ ಪತ್ನಿ ಸುಧಾ ಕರ್ಜಗಿ ಅವರಿಗೆ ಭಾರತೀಯ ತ್ರಿವರ್ಣ ಧ್ವಜವನ್ನು ಹಸ್ತಾಂತರಿಸಿದರು.

ವಿಧಾನ ಪರಿಷತ್ ಸದಸ್ಯ ಸುನೀಲ್ಗೌಡ ಪಾಟೀಲ, ವಿಜಯಪುರ ಜಿಲ್ಲಾ ಮಾಜಿ ಸೈನಿಕರ ಕಲ್ಯಾಣ ಸಂಘದ ಅಧ್ಯಕ್ಷರಾದ ರಾಮಪ್ಪ ಎಲ್.ಕೆ., ಪ್ರಧಾನ ಕಾರ್ಯದರ್ಶಿ ವಿದ್ಯಾಧರ ಪಾಟೀಲ, ಉಪಾಧ್ಯಕ್ಷ ಕಾಶಿಲಿಂಗ, ತಿಕೋಟಾ ತಾಲೂಕು ಸೈನಿಕ ಸಂಘ ಅಧ್ಯಕ್ಷ ಶ್ರೀಶೈಲ ಬೂಸಗೊಂಡ, ಸಿಪಿಐ ಆನಂದ ರಾವ್, ತಹಸೀಲ್ದಾರ್ ಪಿ.ಎಸ್. ಚನ್ನಗೊಂಡ, ಪಿಎಸ್‌ಐ ಉಳ್ಳಾಗಡ್ಡಿ ಗಣ್ಯರು, ಗ್ರಾಮಸ್ಥರು, ವಿದ್ಯಾರ್ಥಿಗಳು ಇದ್ದರು.