ಜಿಲ್ಲೆ

ನಾಡಿನ ಪರಂಪರೆ, ಸಂಸ್ಕೃತಿ ರಕ್ಷಣೆ ಎಲ್ಲರ ಹೊಣೆ: ಮಾಜಿ ಸಚಿವ ಡಿ.ಸುಧಾಕರ್ ಅಭಿಪ್ರಾಯ

ಹಿರಿಯೂರು: ನಾಡಿನ ಭವ್ಯ ಪರಂಪರೆ, ಕಲೆ, ಕಲಾವಿದರು, ಭಾಷೆ ಹಾಗೂ ಸಂಸ್ಕೃತಿ ರಕ್ಷಣೆ ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯ ಎಂದು ಮಾಜಿ ಸಚಿವ ಡಿ.ಸುಧಾಕರ್ ಹೇಳಿದರು.

ನಗರ ರೋಟರಿ ಭವನದಲ್ಲಿ ಸೋಮವಾರ ಶಂಕರ್‌ನಾಗ್ ಅಭಿಮಾನಿಗಳ ಕಲಾ ವೇದಿಕೆ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ, ಶಂಕರ್‌ನಾಗ್ ಅವರ 67 ನೇ ಜನ್ಮದಿನ ಉದ್ಘಾಟಿಸಿ ಮಾತನಾಡಿದರು.

ಕಲಾವಿದರು ನಾಡಿನ ಸಂಸ್ಕೃತಿ, ಭಾಷೆ, ಇತಿಹಾಸ ಉಳಿಸಿ- ಬೆಳೆಸಲು ಶ್ರಮಿಸುತ್ತಿದ್ದು, ಕಲೆ, ಕಲಾವಿದರನ್ನು ಗೌರವಿಸಬೇಕು ಎಂದರು.

ಡಾ. ರಾಜ್‌ಕುಮಾರ್ ಸಾಂಸ್ಕೃತಿಕ ಕಲಾ ಸಂಘದ ಜಿಲ್ಲಾಧ್ಯಕ್ಷ ಪರಶುರಾಮ್ ಗುರಪ್ಪ ಮಾತನಾಡಿ, ಪುನೀತ್ ರಾಜ್‌ಕುಮಾರ್ ಅವರು ಸಮಾಜ ಸೇವೆ, ಶಿಕ್ಷಣ, ಸಾಂಸ್ಕೃತಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡು ನಾಡು ಮೆಚ್ಚುವಂತೆ ಸಾಧನೆ ಮಾಡಿದ್ದಾರೆ. ಅವರ ಬದುಕು, ವ್ಯಕ್ತಿತ್ವ ನಮ್ಮೆಲ್ಲರಿಗೂ ಸ್ಫೂರ್ತಿಯಾಗಿದೆ ಎಂದರು.

ರಾಜ್ಯಮಟ್ಟದ ಕವಿಗೋಷ್ಠಿ ಏರ್ಪಡಿಸಲಾಗಿತ್ತು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕಲಾವಿದರನ್ನು ಗೌರವಿಸಲಾಯಿತು.