ಜಿಲ್ಲೆ

ಪಾರಂಪರಿಕ ಕಟ್ಟಡಗಳ ಸಂರಕ್ಷಣೆಗೆ ಪಾರಂಪರಿಕ ಸಮಿತಿ ಕಟ್ಟುನಿಟ್ಟಿನ ಕ್ರಮ

ಮೈಸೂರು: ಮೈಸೂರಲ್ಲಿ ಸರ್ಕಾರಿ, ಖಾಸಗಿ ಒಡೆತನದ ಪಾರಂಪರಿಕ ಕಟ್ಟಡಗಳ ಸಂರಕ್ಷಣೆಗೆ ಸಮತೋಲದಿಂದ ಕಾರ್ಯನಿರ್ವಹಿಸಬೇಕು. ಜನರಿಗೂ ಪಾರಂಪರಿಕ ಮೌಲ್ಯ ತಿಳಿಸುವುದರೊಂದಿಗೆ ಅವುಗಳನ್ನು ಉಳಿಸಿಕೊಂಡು ಹೋಗಬೇಕಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಹೇಳಿದರು.


ನಗರದ ದಸರಾ ವಸ್ತು ಪ್ರದರ್ಶನದ ಆವರಣದಲ್ಲಿರುವ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಸಭಾಂಗಣದಲ್ಲಿ ಗುರುವಾರ ‘ಪಾರಂಪರಿಕ ಕಟ್ಟಡಗಳ ವೈಶಿಷ್ಟತೆ, ಪ್ರಾಮುಖ್ಯತೆ ಮತ್ತು ಪಾರಂಪರಿಕ ಕಟ್ಟಡಗಳ ಸಂರಕ್ಷಿಸುವ ವಿಧಾನ ಮತ್ತು ಅವಶ್ಯಕತೆ ಕುರಿತು ಇಂಜಿನಿಯರ್, ವಾಸ್ತುಶಿಲ್ಪಿಗಳಿಗೆ ಆಯೋಜಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.


ಪಾರಂಪರಿಕ ಕಟ್ಟಡಗಳ ಸಂರಕ್ಷಣೆಯಿಂದ ನಗರ, ರಾಜ್ಯಕ್ಕೆ ಉತ್ತಮ ಹೆಸರು ಬರುವಂತೆ ಮಾಡಬೇಕು. ನಮ್ಮಲ್ಲಿ ಪಿಂಕ್ ಸಿಟಿ ಎನ್ನುವ ಪರಿಕಲ್ಪನೆ ಇದೆ. ಕಟ್ಟಡಗಳಿಗೆ ಇಂತಹದ್ದೇ ಬಣ್ಣ ಬಳಕೆ ಮಾಡಬೇಕೆಂಬ ನಿಯಮವೂ ಇತ್ತು. ಅದರ ಮಹತ್ವ ಅರಿಯುವುದಲ್ಲಿ ವಿಫಲರಾಗಿದ್ದು, ಆ ಕಾರಣದಿಂದ ಸ್ಥಳೀಯ ಸಂಸ್ಥೆಗಳಿಂದ ಬೇಕಾಬಿಟ್ಟಿಯಾಗಿ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಿದರೆ, ಪಾರಂಪರಿಕ ಮೌಲ್ಯವನ್ನು ಸಾಯಿಸಿದಂತಾಗುತ್ತದೆ. ಇದನ್ನು ಅಧಿಕಾರಿಗಳು ಅರ್ಥ ಮಾಡಿಕೊಳ್ಳಬೇಕು ಮತ್ತು ಅದರ ಪ್ರಾಮುಖ್ಯತೆಯನ್ನು ತಿಳಿದುಕೊಳ್ಳಬೇಕು ಎಂದರು.

ಪಾರಂಪರಿಕ ಕಟ್ಟಡ ಸಂರಕ್ಷಿಸಿ


ಪಾರಂಪರಿಕತೆಯಲ್ಲಿ ಶ್ರೀಮಂತಿಕೆ ಹೊಂದಿರುವ ಮೈಸೂರಿನ ಪಾರಂಪರಿಕ ಕಟ್ಟಡಗಳ ಸಂರಕ್ಷಣೆಗೆ ಪಾರಂಪರಿಕ ಸಮಿತಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.


ಪಾರಂಪರಿಕತೆ ಕಾಪಾಡುವ ನಿಟ್ಟಿನಲ್ಲಿ ನಮ್ಮಲ್ಲಿ ಪಾರಂಪರಿಕ ಸಮಿತಿ ಅಸ್ತಿತ್ವದಲ್ಲಿದೆ. ಈ ಸಮಿತಿ 2020-21ರ ನಂತರ ಹೊರಡಿಸಿರುವ ಮಾರ್ಗಸೂಚಿಯಂತೆ ಪಾರಂಪರಿಕತೆ ಮಹತ್ವ ಕಾಪಾಡುವುದಕ್ಕೆ ಸಹಕಾರಿಯಾಗಿದೆ. ಆದರೆ, ಈ ಸಮಿತಿ ಕೇವಲ ಸಲಹಾತ್ಮಕ ಸಮಿತಿಯಾಗಿ ಸೀಮಿತವಾಗಿರದೆ, ರೂಪಿಸಿರುವ ನಿಯಮವನ್ನು ಗಂಭೀರವಾಗಿ ಜಾರಿಗೊಳಿಸುವ ಅವಶ್ಯಕತೆ ಇದೆ ಎಂದರು.


ರಾಜ್ಯ ಹಾಗೂ ದೇಶದ ಯಾವುದೇ ನಗರಗಳಿಗೆ ಹೋಲಿಕೆ ಮಾಡಿದರೆ ಮೈಸೂರಿನ ಪ್ರತಿ ಗಲ್ಲಿ ಗಲ್ಲಿಯಲ್ಲೂ ಪಾರಂಪರಿಕತೆ ಅಡಗಿದೆ. ಇವುಗಳು ತನ್ನದೇ ಆದ ಇತಿಹಾಸ ಹೇಳುತ್ತವೆ. ಎಲ್ಲ ದೃಷ್ಟಿಕೋನದಲ್ಲೂ ಮೈಸೂರು ಪಾರಂಪರಿಕತೆ ಎದ್ದು ನಿಲ್ಲುವುದರೊಂದಿಗೆ ಶ್ರೀಮಂತಿಕೆ ಹೊಂದಿರುವ ನಗರವಾಗಿದೆ ಎಂದರು.


ಮೈಸೂರು ನಗರದಲ್ಲಿ ನೈಸರ್ಗಿಕವಾಗಿರುವ ಪಾರಂಪರಿಕತೆ, ಆರ್ಕಿಟೆಕ್ಚರ್, ನೈಸರ್ಗಿಕ ಸಂಪತ್ತು ಹೇರಳವಾಗಿದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಪಾರಂಪರಿಕತೆ ಮೌಲ್ಯ ಕಡಿಮೆಯಾಗುತ್ತಿದೆ. ಇದನ್ನು ಅಧಿಕಾರಿ ವರ್ಗ, ಇಂಜಿನಿಯರ್ ಸೇರಿದಂತೆ ನಾವೆಲ್ಲರೂ ಅವಲೋಕನ ಮಾಡಬೇಕಾಗಿದೆ. ಜವಾಬ್ದಾರಿಯುತ ಸ್ಥಾನದಲ್ಲಿರುವವರು ಹೆಚ್ಚಿನ ಮಹತ್ವ ನೀಡಬೇಕಾಗಿದೆ ಎಂದು ಹೇಳಿದರು.


ವಿನೋಬಾ ರಸ್ತೆಯಲ್ಲಿ ಜಲದರ್ಶಿನಿ, ಜಲಸನ್ನಿಧಿ, ಆರ್.ಸಿ.ಕಚೇರಿಯ ಪಾರಂಪರಿಕ ಕಟ್ಟಡಗಳಿವೆ. ಈ ಸಾಲಿನ ಬಳಿಕ ಕೆಲವು ವಾಣಿಜ್ಯ ಕಟ್ಟಡಗಳನ್ನು ಕಾಣಬಹುದು. ಇದರಿಂದ ಪಾರಂಪರಿಕ ಮೌಲ್ಯಕ್ಕೆ ಧಕ್ಕೆಯಾದಂತೆ ಕಂಡುಬರುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.


ಮೈಸೂರಲ್ಲಿ ಪಾರಂಪರಿಕ ಕಟ್ಟಡಗಳೊಂದಿಗೆ ಪಾರಂಪರಿಕ ರಸ್ತೆಗಳೂ ಇವೆ. ಈ ಪಾರಂಪರಿಕ ರಸ್ತೆಗಳಿಗೆ ಹೊಂದಿಕೊಂಡಂತೆ ಇರುವ ನಿವೇಶನಗಳಲ್ಲಿ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡುವಾಗ ಪಾರಂಪರಿಕತೆಗೆ ಒತ್ತು ನೀಡುವಂತೆ ಮನವರಿಕೆ ಮಾಡಿಕೊಡಬೇಕು. ಕಟ್ಟಡದ ಮುಂಭಾಗದ ಫಸಾಡ್ ಅನ್ನು ಪಾರಂಪರಿಕ ಶೈಲಿಯಲ್ಲಾದರೂ ನಿರ್ಮಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಪಾರಂಕರಿಕತೆ ಉಳಿಸುವ ನಿಟ್ಟಿನಲ್ಲಿ ಗಂಭೀರವಾದ ಕ್ರಮ


ಖಾಸಗಿ ಒಡೆತನದ ಪಾರಂಪರಿಕ ಕಟ್ಟಡಗಳಿದ್ದರೆ ನೂರೆಂಟು ನಿಯಮಗಳನ್ನು ಹಾಕಿ ಅವರಿಗೆ ತೊಂದರೆ ನೀಡುವುದರ ಬದಲಾಗಿ, ಅವರ ಪ್ಲಾನ್‌ನೊಂದಿಗೆ ಹೆರಿಟೇಜ್ ಪ್ಲಾನ್ ಏನಿದೆ ಎಂದು ಮನವರಿಕೆ ಮಾಡಿಕೊಡಬೇಕು. ಸಂರಕ್ಷಣೆ ವಿಚಾರದಲ್ಲಿ ಅನುಮತಿ ನಿರಾಕರಿಸುವ ಅಥವಾ ಪರಿಶೀಲಿಸದೆ ಏಕಾಏಕಿ ಅನುಮತಿ ಕೊಡುವುದು ಆಗಬಾರದು. ಪಾರಂಕರಿಕತೆ ಉಳಿಸುವ ನಿಟ್ಟಿನಲ್ಲಿ ಗಂಭೀರವಾದ ಕ್ರಮ ಕೈಗೊಳ್ಳಬೇಕು. ಇದರ ಮಹತ್ವನ್ನು ಖಾಸಗಿಯವರಿಗೆ ತಿಳಿಸಿಕೊಡಬೇಕು ಎಂದರು.


ಸರ್ಕಾರಿ ಸ್ವಾಮ್ಯದ ಕಟ್ಟಡಗಳ ಸಂರಕ್ಷಣೆಗೆ ಸರ್ಕಾರದ ವತಿಯಿಂದ ಅನುದಾನ ತರುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ತಿಳಿಸಿದರು.
ಪಾರಂಪರಿಕ ಮೌಲ್ಯ ಅರ್ಥ ಮಾಡಿಕೊಳ್ಳದಿದ್ದರೆ ಮೈಸೂರಲ್ಲಿ ಕೆಲಸ ಮಾಡಲು ಅನರ್ಹರಾಗಬೇಕಾಗುತ್ತದೆ. ಇಂಜಿನಿಯರ್ ವಿಭಾಗದ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಪಾರಂಪರಿಕ ರಸ್ತೆಗಳಲ್ಲಿ ಕಟ್ಟಡ ಕಟ್ಟುವಾಗ ಪಾರಂಪರಿಕ ಶೈಲಿ ಅನುಸರಿಸಿದರೆ, ಈ ಹಿಂದಿನ ಪಾರಂಪರಿಕತೆ ಉಳಿಸಿಕೊಂಡು, ಮುಂದಿನ ಪೀಳಿಗೆಗೆ ಬೆಳೆಸಿಕೊಂಡು ಹೋಗಲು ಸಾಧ್ಯ ಎಂದರು.


ಎಲ್ಲ ದೃಷ್ಟಿಕೋನದಿಂದಲೂ ಗಮನಹರಿಸಿ ಮೈಸೂರಿನ ಪಾರಂಪರಿಕತೆ ಉಳಿಸಿಕೊಳ್ಳಬೇಕು. ಪಾಲಿಕೆ, ಮುಡಾ ಇಂಜಿನಿಯರ್‌ಗಳು ಪಾರಂಪರಿಕತೆಯ ಮಹತ್ವ ಅರಿಯಬೇಕು. ಪಾರಂಪರಿಕ ರಾಜಧಾನಿ ಮಹತ್ವವನ್ನು ಇನ್ನಷ್ಟು ಉತ್ತುಂಗಕ್ಕೆ ಏರಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

ಪಾರಂಪರಿಕ ಕಟ್ಟಡಗಳ ನಿರ್ವಹಣೆಯ ಕೊರತೆ


ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಆಯುಕ್ತ ಎ.ದೇವರಾಜು ಮಾತನಾಡಿ, ಮೈಸೂರಲ್ಲಿ ಅನೇಕ ಪಾರಂಪರಿಕ ಕಟ್ಟಡಗಳು ಸರ್ಕಾರಿ ಇಲಾಖೆಯ ಸುಪರ್ಧಿಯಲ್ಲಿವೆ. ಆದರೆ, ನಿರ್ವಹಣೆಯ ಕೊರತೆ ಎದ್ದು ಕಾಣುತ್ತಿದೆ. ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ಪ್ರಯೋಗಾಯಲದ ಕಟ್ಟಡ ಕುಸಿತ ಇದಕ್ಕೆ ಒಂದು ಉದಾಹರಣೆ ಎಂದು ಹೇಳಿದರು.


ಛಾವಣಿ ಮೇಲೆ ಮಳೆ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ನೀರು ಸರಾಗವಾಗಿ ಹರಿದು ಹೋದರೆ ಕಟ್ಟಡದ ಛಾವಣಿಗೆ ಹಾನಿಯಾಗಲ್ಲ. ಇಂತಹ ನಿರ್ವಹಣೆ ಮಾಡುವುದಕ್ಕೆ ಕ್ರಮ ಕೈಗೊಳ್ಳುವುದಿಲ್ಲ. ಈ ಕಾರಣದಿಂದ ಪಾರಂಪರಿಕ ಕಟ್ಟಡಗಳ ಸಂರಕ್ಷಣೆಗೆ ಹಿನ್ನಡೆಯಾಗುತ್ತಿದೆ ಎಂದು ವಿಷಾದಿಸಿದರು.
ಹೆರಿಟೇಜ್ ಮಾಟರ್ಸ್ ಸಂಸ್ಥೆ ಆರ್ಕಿಟೆಕ್ಚರ್ ಶರತ್‌ಚಂದ್ರ ಪ್ರಾತ್ಯಕ್ಷಿಕೆ ಮೂಲಕ ವಿಷಯ ಕುರಿತು ಮಾತನಾಡಿದರು. ಪರಂಪರೆ ಇಲಾಖೆಯ ಉಪನಿರ್ದೇಶಕಿ ಸಿ.ಎನ್.ಮಂಜುಳಾ, ಎಇಇ ಪಾರ್ಕೇಶ್ ಉಪಸ್ಥಿತರಿದ್ದರು.