ಸಿ.ಟಿ.ರವಿ 
ಜಿಲ್ಲೆ

ಲಾಠಿ ಹಿಡಿದು ದನ ಕಾಯುವುದು ಶ್ರೇಷ್ಠ ಕೆಲಸ

ಆನಂದಕುಮಾರ ಅಂಗಡಿ

ಹುಬ್ಬಳ್ಳಿ : ಶ್ರೀಕೃಷ್ಣ ಪರಮಾತ್ಮ ದನ ಕಾಯುವ ಕೆಲಸ ಮಾಡಿದ್ದ. ದೇಶಭಕ್ತರಾದ ಆರ್​ಎಸ್​ಎಸ್ ಕಾರ್ಯಕರ್ತರು ದನ ಕಾಯುವುದನ್ನು ಶ್ರೇಷ್ಠ ಕೆಲಸ ಎಂದು ಭಾವಿಸುತ್ತಾರೆ ಎನ್ನುವ ಮೂಲಕ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ, ಲಾಠಿ ಹಿಡಿಯುವ ಆರ್​ಎಸ್​ಎಸ್ ಸ್ವಯಂ ಸೇವಕರನ್ನು ದನ ಕಾಯುವವರು ಎಂದು ಟೀಕಿಸಿದ ಕಾಂಗ್ರೆಸ್ ಮುಖಂಡರಿಗೆ ತಿರುಗೇಟು ನೀಡಿದರು.

ಗುರುವಾರ ಇಲ್ಲಿಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಕೂಡ ದನ ಕಾಯುವ ಕೆಲಸ ಮಾಡಿದ್ದೇನೆ. ಕಾಂಗ್ರೆಸ್​ನವರಿಗೆ ಕಾಯಕವೇ ಕೈಲಾಸ ಎಂಬ ಮಾತಿನಲ್ಲಿ ನಂಬಿಕೆ ಇಲ್ಲ. ಅವರದೇನಿದ್ದರೂ ಭ್ರಷ್ಟಾಚಾರ, ಲೂಟಿ, ಮೋಸ ಮಾಡುವುದು. ಇಂತಹವರಿಗೆ ದನ ಕಾಯುವುದರ ಬಗ್ಗೆ ಏನು ಗೊತ್ತು ಎಂದು ವ್ಯಂಗ್ಯವಾಡಿದರು.

ಅರಿವು ಇಲ್ಲದವರಿಗೆ ಅರಿವು ಮೂಡಿಸಬಹುದು. ಆದರೆ, ಜಾಣ ಕುರುಡ ಮತ್ತು ಜಾಣ ಕಿವುಡರಿಗೆ ಅರಿವು ಮೂಡಿಸುವುದು ಕಷ್ಟ. ಶಾಖೆಗಳಿಗೆ ಬಂದರೆ ಗೊತ್ತಾಗುತ್ತದೆ ಆರ್​ಎಸ್​ಎಸ್ ಏನು ಹಾಗೂ ಅದರ ಕಾರ್ಯಗಳು ಏನೇನು ಎಂಬುದರ ಬಗ್ಗೆ. ದೇಶಭಕ್ತರಿಗೆ ಆತ್ಮವಿಶ್ವಾಸ ಮೂಡಿಸುವ ಕೆಲಸವನ್ನು ಲಾಠಿ ಮಾಡುತ್ತದೆ. ದೇಶಕ್ಕಾಗಿ ದುಡಿಯಬೇಕು ಎಂಬ ಅರಿವನ್ನು ಜನಸಾಮಾನ್ಯರಲ್ಲಿ ಮೂಡಿಸುವ ಕೆಲಸವನ್ನು ಆರ್​ಎಸ್​ಎಸ್ ಮಾಡುತ್ತಿದೆ ಎಂದರು.

ರಾಜ್ಯದಲ್ಲಿ ಸ್ಥಾಪನೆಗೊಳ್ಳಬೇಕಿದ್ದ ಗೂಗಲ್ ಎಐ ಘಟಕ ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯತನದಿಂದಾಗಿ ವಿಶಾಖಪಟ್ಟಣಕ್ಕೆ ಹೋಗಿದೆ. ಉದ್ಯಮ, ಉದ್ಯಮಿಗಳಿಗೆ ಸರಿಯಾದ ಸೌಲಭ್ಯ ಕಲ್ಪಿಸುವ ಯೋಗ್ಯತೆ ಈ ಸರ್ಕಾರಕ್ಕೆ ಇಲ್ಲ. ಹೀಗಾಗಿ, ಅವೆಲ್ಲ ಬೇರೆ ರಾಜ್ಯಗಳಿಗೆ ಸ್ಥಳಾಂತರಗೊಳ್ಳುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಹಾರ ಚುನಾವಣೆಯಲ್ಲಿ ಎನ್​ಡಿಎ ಮೈತ್ರಿಕೂಟ ಅಧಿಕಾರಕ್ಕೆ ಬರುವುದು ಖಚಿತ. ಕಾಂಗ್ರೆಸ್​ನವರು ತಮ್ಮ ಸೋಲಿಗೆ ಕಾರಣ ಹುಡುಕುವುದರಲ್ಲಿದ್ದಾರೆ. ಪ್ರಶಾಂತ ಕಿಶೋರ ಅವರದ್ದು ಪ್ರಯೋಗ ಮಾತ್ರ. ಅವರೊಬ್ಬ ಕಿಂಗ್ ಮೇಕರ್ ಎಂದು ಕಾಂಗ್ರೆಸ್​ನವರು ಹೇಳಿಕೊಳ್ಳುತ್ತಿದ್ದಾರೆ. ಕಿಂಗ್ ಮೇಕರ್ ಎಂದಿಗೂ ಕಿಂಗ್ ಆಗುವುದಿಲ್ಲ ಎಂದು ಲೇವಡಿ ಮಾಡಿದರು.