ಜಿಲ್ಲೆ

ಹೇಮೆ ನೀರಿಗೆ ಸೇರುತ್ತಿದೆ ಯುಜಿಡಿ ತ್ಯಾಜ್ಯ ; ಆರೋಗ್ಯದ ಮೇಲೆ ಗಂಭೀರ ಪರಿಣಾಮ ; ತಿಪಟೂರಿನಲ್ಲಾಗುವ ಸಮಸ್ಯೆಗೆ ಪರಿಹಾರ ಯಾವಾಗ?

Tumakuru

ತಿಪಟೂರು: ಮಳೆ ಬಂದರೆ ಬಾಯ್ತೆರೆಯುವ ಒಳಚರಂಡಿ (ಯುಜಿಡಿ) ಪೈಪ್‌ಲೈನ್‌ನ ತ್ಯಾಜ್ಯ ನೀರು ಹೇಮೆ ನಾಲೆ ಸೇರುತ್ತಿರುವುದು ಆತಂಕ ಹುಟ್ಟಿಸಿದೆ. ಹೇಮಾವತಿ ನಾಲಾ ವಲಯದ ಇಂಜಿನಿಯರ್‌ಗಳು, ನಗರಸಭೆ ಅಧಿಕಾರಿಗಳು ಈ ಬಗ್ಗೆ ತಾತ್ಸಾರ ತೋರುತ್ತಿರುವುದು ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಅಪಾಯಕ್ಕೆ ದಾರಿಯಾಗಿದೆ.

ನಗರದ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ಹಾದುಹೋಗಿರುವ ಯುಜಿಡಿ ಪೈಪ್‌ಲೈನ್ ಹೆಚ್ಚು ಮಳೆ ಸುರಿದಾಗಲೆಲ್ಲ ಬಾಯ್ತೆರೆಯಲಿದೆ. ಅಲ್ಲದೆ, ಯುಜಿಡಿ ಮೊದಲ ಹಂತದಲ್ಲಿ ಈಡೇನಹಳ್ಳಿಯಲ್ಲಿ ಸ್ಥಾಪಿಸಲಾಗಿರುವ ಜಾಕ್‌ವೆಲ್ ಸ್ಥಾವರದಿಂದ ಸಮರ್ಪಕವಾಗಿ ನೀರಿನ ಪಂಪ್ ಆಗದ ಕಾರಣ ಹೆಚ್ಚಿನ ತ್ಯಾಜ್ಯಯುಕ್ತ ನೀರು ಈಡೇನಹಳ್ಳಿ ರುದ್ರಭೂಮಿ ಎದುರಿನ ಸಣ್ಣ ಹಳ್ಳದ ಮೂಲಕ ರೈಲ್ವೆ ಲೈನ್ ಪಕ್ಕದಲ್ಲಿ ಹಾದು, ಹಿಂಡಿಸ್ಕೆರೆ ಹಾಗೂ ಹುಲ್ಲುಕಟ್ಟೆ ಮಧ್ಯೆ ಹಾದು ಹೋಗಿರುವ ಹೇಮಾವತಿ ನಾಲೆಗೆ ಸೇರ್ಪಡೆಯಾಗುತ್ತಿದೆ. ಕುಡಿಯುವ ನೀರಿನ ನಾಲೆಗೆ ಕಲುಷಿತ ನೀರು ಬೆರೆಯುತ್ತಿದ್ದು ಅಪಾಯಕಾರಿ ಎನಿಸಿದೆ.

ಸುಮಾರು ಒಂದು ಲಕ್ಷ ಜನಸಂಖ್ಯೆ ಗಮನದಲ್ಲಿಟ್ಟುಕೊಂಡು, ಸಾಂಕ್ರಾಮಿಕ ರೋಗ ತಡೆಗಟ್ಟುವ ನಿಟ್ಟಿನಲ್ಲಿ 65 ಕೋಟಿ ರೂಪಾಯಿ ವೆಚ್ಚದಲ್ಲಿ ಮೂರು ಹಂತದ ಯುಜಿಡಿ ಯೋಜನೆ ರೂಪಿಸಲಾಗಿದ್ದು, ನಗರದಲ್ಲಿ ನಿತ್ಯ ಸಂಗ್ರಹವಾಗುವ 3.5 ಎಂ.ಎಲ್.ಡಿ. (35 ಲಕ್ಷ ಲೀಟರ್) ನೀರನ್ನು ಸಂಸ್ಕರಿಸುವ ಸಲುವಾಗಿ ನಗರ ಸಮೀಪದ ಕಲ್ಲೇಗೌಡನ ಪಾಳ್ಯದ ಹೂವಿನಕಟ್ಟೆ ಬಳಿ ಯುಜಿಡಿ ತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪಿಸಲಾಗಿದೆ. \

ಮೊದಲನೆ ಹಂತದಲ್ಲಿ ಈಡೇನಹಳ್ಳಿಯಲ್ಲಿರುವ ಜಾಕ್‌ವೆಲ್‌ನಲ್ಲಿ ಕಠಿಣ ಪ್ರಮಾಣದ ತ್ಯಾಜ್ಯವನ್ನು ಬೇರ್ಪಡಿಸಿ, ಉಳಿದ ನೀರನ್ನು ಕಲ್ಲೇಗೌಡನ ಪಾಳ್ಯದ ಬಳಿ ಇರುವ ಯುಜಿಡಿ ಸಂಸ್ಕರಣಾ ಘಟಕಕ್ಕೆ ಪಂಪ್ ಮಾಡಲಾಗುತ್ತೆ. ಈ ಸ್ಥಾವರದಲ್ಲಿ ವಿವಿಧ ಹಂತದಲ್ಲಿ ನೀರಿನಲ್ಲಿರುವ ತ್ಯಾಜ್ಯವನ್ನು ಬೇರ್ಪಡಿಸಿ, ಕುಡಿಯಲು ಹೊರತುಪಡಿಸಿ, ಉಳಿದೆಲ್ಲ ಬಳಕೆಗೆ ಯೋಗ್ಯ ನೀರನ್ನು ಸಮೀಪದ ಹೂವಿನ ಕಟ್ಟೆಗೆ ಬಿಡಲಾಗುತ್ತದೆ. ಉಳಿದ ಗಟ್ಟಿ ತ್ಯಾಜ್ಯ (ಸ್ಲರಿ)ವನ್ನು ರಸ ಗೊಬ್ಬರವಾಗಿ ಬಳಸಬಹುದಾಗಿದೆ. ಆದರೆ, ಯು.ಜಿ.ಡಿ. ಹಾದುಹೋಗಿರುವ ಮಾರ್ಗ ಮಧ್ಯೆ ಮ್ಯಾನ್ ಹೋಲ್‌ಗಳನ್ನು ಸೂಕ್ತವಾಗಿ ಭದ್ರಪಡಿಸದೆ ಇರುವುದು ಹಾಗೂ ಈಡೇನಹಳ್ಳಿಯಲ್ಲಿನ ಜಾಕ್‌ವೆಲ್‌ನ ನೀರು ಸಮರ್ಪಕವಾಗಿ ಮುಂದಿನ ಸ್ಥಾವರಕ್ಕೆ ಪಂಪ್ ಆಗದ ಕಾರಣ ಹೆಚ್ಚುವರಿ ನೀರು ಹಳ್ಳದಲ್ಲಿ ಹರಿದು, ನಂತರ ಹೇಮಾವತಿ ಕುಡಿಯುವ ನೀರಿನ ನಾಲೆಗೆ ಸೇರ್ಪಡೆಯಾಗುತ್ತಿರುವುದು ಆತಂಕಕ್ಕೀಡು ಮಾಡಿದೆ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಳ್ಳುವ ಮೂಲ ಹೇಮೆ ಕಲುಷಿತಗೊಳಿಸುವುದನ್ನು ತಡೆಗಟ್ಟಬೇಕಿದೆ.

ಮಳೆಗಾಲ ಪ್ರಾರಂಭವಾಗಿದ್ದು ಸಂಬಂಧಪಟ್ಟವರು ಮುನ್ನೆಚ್ಚರಿಕೆ ವಹಿಸಿ ಯುಜಿಡಿ ಹಾದು ಹೋಗಿರುವ ಮ್ಯಾನ್ ಹೋಲ್‌ಗಳನ್ನು ಸ್ವಚ್ಛಗೊಳಿಸಿ, ಸರಾಗವಾಗಿ ನೀರಿನ ಹರಿವಿಗೆ ಪ್ರಯತ್ನಿಸಬೇಕು. ಈಡೇನಹಳ್ಳಿಯ ಜಾಕ್ ವೆಲ್‌ನಿಂದ ಹೆಚ್ಚಿನ ಪ್ರಮಾಣದ ನೀರನ್ನು ಪಂಪ್ ಮಾಡಿದರೆ ತ್ಯಾಜ್ಯ ನೀರು ರಸ್ತೆಗೆ ಬಂದು ಹಳ್ಳ ಸೇರುವುದು ತಪ್ಪುತ್ತೆ. ಕುಡಿಯುವ ನೀರಿಗೆ ತ್ಯಾಜ್ಯ ಸೇರಿದರೆ ಕಷ್ಟ. ಈ ಬಗ್ಗೆ ಗಮನ ಹರಿಸುವುದು ಎಲ್ಲರ ಜವಾಬ್ದಾರಿ. ಎಚ್.ಜಿ.ಸುಧಾಕರ್, ನಗರಸಭೆ ಮಾಜಿ ಸದಸ್ಯ ಈಡೇನಹಳ್ಳಿಯಲ್ಲಿರುವ ಜಾಕ್‌ವೆಲ್ ದುರಸ್ಥಿಗೊಳಿಸಲಾಗಿದೆ. ಮಳೆ ಬಂದಾಗಲೆಲ್ಲ ಈ ಸಮಸ್ಯೆ ಕಾಡುತ್ತಿದೆ. ಯುಜಿಡಿ ಪೈಪ್‌ಲೈನಿನಲ್ಲಿ ನೀರು ಸರಾಗವಾಗಿ ಹರಿಯಲು ಶೀಘ್ರದಲ್ಲಿ ಪರ್ಯಾಯ ವ್ಯವಸ್ಥೆ ಮಾಡಲಾಗುವುದು. ಉಮಾಕಾಂತ್ ನಗರಸಭೆ ಆಯುಕ್ತ ತಿಪಟೂರು