ಜಿಲ್ಲೆ

ಹೇಮೆ ಹರಿದರೆ ದ್ವೀಪದಂತಾಗುವ ಗುಮ್ಮನಹಳ್ಳಿ ; ನೀರಿನಲ್ಲಿಯೇ ಹೊಲ ಗದ್ದೆಗಳಿಗೆ ಹೋಗುವ ಸ್ಥಿತಿ ; ಸಮಸ್ಯೆಗೆ ಸ್ಪಂದಿಸದ ತಾಲೂಕು ಆಡಳಿತ

ಶಿರಾ : ನಗರದಿಂದ ಕೂಗಳತೆ ದೂರದಲ್ಲಿರುವ ಈ ಗ್ರಾಮಕ್ಕೆ ‘ಹೇಮೆ’ ಶಾಪವಾಗಿ ಕಾಡುತ್ತಿದ್ದಾಳೆ. ಪ್ರತಿ ಬಾರಿ ಶಿರಾಕ್ಕೆ ನೀರು ಹರಿಸಿದ ಸಂದರ್ಭದಲ್ಲಿ ಈ ಗ್ರಾಮ ಜಲದಿಗ್ಭಂದನವಾಗಲಿದೆ. ಈ ಬಗ್ಗೆ ಯಾವೊಬ್ಬ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಗಮನಹರಿಸದೇ ಇರುವುದು ವಿಪರ್ಯಾಸ.

ಹೌದು, ಈ ಶಾಪಗ್ರಸ್ತ ಗ್ರಾಮವೇ ಗುಮ್ಮನಹಳ್ಳಿ. ಹೇಮೆ ನೀರು ಹರಿಯುವ ಪ್ರತೀ ಬಾರಿಯೂ ಸೇತುವೆ ಮೇಲೆ ಹರಿಯುತ್ತದೆ. ಆ ನೀರಲ್ಲೇ ನಿತ್ಯದ ಕೆಲಸಕ್ಕಾಗಿ ಸಂಚರಿಸಬೇಕಾದ ಸ್ಥಿತಿ ಇದೆ. ಈ ಗ್ರಾಮದ ಹಳ್ಳದ ಮೂಲಕ ಶಿರಾ ದೊಡ್ಡಕೆರೆಗೆ ನೀರು ಹರಿಯಲಿದ್ದು. ಪ್ರತಿ ಬಾರಿ ಹೇಮೆ ಹರಿಯಲಾರಂಭಿಸಿದಾಗ ಇಡೀ ಗ್ರಾಮ ದ್ವೀಪವಾಗಲಿದೆ. ಅದಲ್ಲದೆ, ಮಳೆ ಪ್ರಮಾಣ ಹೆಚ್ಚಾದರೂ ಹಳ್ಳ ಹರಿಯಲಿದ್ದು ಇಲ್ಲಿನ ಜನರ ಬದುಕು ನೀರಿನ ಜತೆಯೇ ಸಾಗುವಂತಾಗಿದೆ.

ಗ್ರಾಮಸ್ಥರು ಹೊಲಗದ್ದೆಗಳಿಗೆ ಸಂಚರಿಸುವ ರಸ್ತೆ ಇದಾಗಿದ್ದು 20 ವರ್ಷಗಳ ಹಿಂದೆಯೇ ಈ ರಸ್ತೆಗೆ ಸೇತುವೆ ನಿರ್ಮಾಣ ಮಾಡಲಾಗಿದೆಯಾದರೂ ಹೇಮಾವತಿ ನೀರು ಬಿಟ್ಟಾಗ ಮೊದಲು ಕಳ್ಳಂಬೆಳ್ಳ ಕೆರೆ ತುಂಬುತ್ತೆ. ನಂತರ ಆ ಕೆರೆಯಿಂದ ಶಿರಾ ದೊಡ್ಡಕೆರೆಗೆ ಬರುವ ನೀರು ಸೇತುವೆ ತುಂಬಿ ರಸ್ತೆ ಮಧ್ಯೆ ಹರಿಯಲಿದೆ. ಹಾಗಾಗಿ, ಇಲ್ಲಿನ ರೈತರು ಹೊಲಗಳಿಗೆ ಹೋಗಲು, ದನಕರುಗಳನ್ನು ಕರೆದೊಯ್ಯಲು ಹಾಗೂ ಕಾಳು ಕಡ್ಡಿ, ಹುಲ್ಲು ಮೇವು ತರಲು ಬಟ್ಟೆಗಳನ್ನು ತೋಯಿಸಿಕೊಂಡೇ ಸಾಗಬೇಕು. ಹಳ್ಳದ ನೀರಿನಿಂದಾಗಿ ಕೂಲಿ ಕೆಲಸಕ್ಕೆ, ತೆನೆ ಕೊಯ್ಲು ಕೆಲಸಕ್ಕೆ ಮಹಿಳೆಯರು ಬಾರದ ಪರಿಸ್ಥಿತಿ ಇದೆ ಎನ್ನುತ್ತಾರೆ ಗ್ರಾಮಸ್ಥರು.

ಇನ್ನಾದರೂ ತಾಲೂಕು ಆಡಳಿತ ಇತ್ತ ಕಡೆ ಗಮನಹರಿಸಿ ಜನರ ಸಮಸ್ಯೆಗೆ ಸ್ಪಂದಿಸಲಿದೆಯೇ ಕಾದುನೋಡಬೇಕಿದೆ.

ಸಂಚಾರ ಅಸಾಧ್ಯ : ಈ ರಸ್ತೆ ಶಿರಾ ಬೈಪಾಸ್‌ನಿಂದ ಮಧುಗಿರಿ ರಸ್ತೆಗೆ ಸಂಪರ್ಕ ಕಲ್ಪಿಸುತ್ತದೆ. ಗುಮ್ಮನಹಳ್ಳಿ, ಗುಮ್ಮನಹಳ್ಳಿ ಗೊಲ್ಲರಹಟ್ಟಿ, ಪದ್ಮಾಪುರ ಹಾಗೂ ತಗ್ಗಿಹಳ್ಳಿಗಳಿಗೆ ಸಮೀಪದ ಸಂಪರ್ಕವನ್ನು ಈ ರಸ್ತೆ ಕಲ್ಪಿಸುತ್ತೆ. ಕಳೆದ 2 ತಿಂಗಳ ಹಿಂದೆ ಸುರಿದ ನಿರಂತರ ಮಳೆ ಹಾಗೂ ಹೇಮಾವತಿ ನೀರಿನಿಂದಾಗಿ ಎತ್ತಿನಗಾಡಿ ಅಲ್ಲದೆ ಯಾವುದೇ ವಾಹನಗಳಿಗೂ ಸಂಚಾರ ಅಸಾಧ್ಯವಾಗಿದೆ.

ಹೇಮೆ ನೀರು ಹರಿಸುವ ಸಂದರ್ಭದಲ್ಲಿ ಗ್ರಾಮಕ್ಕೆ ಜಲದಿಗ್ಭಂದನ ಹಾಕಿದಂತಾಗುತ್ತದೆ. ಇನ್ನು ಮಳೆ ಸುರಿದು, ಹಳ್ಳ-ಕೊಳ್ಳ ತುಂಬಿ ಹರಿದರೂ ಸೊಂಟದುದ್ದ ನೀರಲ್ಲೇ ಓಡಾಡಬೇಕು. ಈ ಬಗ್ಗೆ ಹತ್ತಾರು ಬಾರಿ ಜನಪ್ರತಿನಿಧಿಗಳ ಗಮನ ಸೆಳೆದರೂ ಯಾರೂ ಸ್ಪಂದಿಸಿಲ್ಲ. ಸೀಗಲಹಳ್ಳಿ ವೀರೇಂದ್ರ, ಗ್ರಾಮಸ್ಥ ಕಸಬಾ, ಬುಕ್ಕಾಪಟ್ಟಣ ಸೇರಿ 3-4 ಕಡೆ ಸೇತುವೆ ಮೇಲೆ ಹೇಮೆ ನೀರು, ಮಳೆ ನೀರು ಹರಿದು ಜನರ ಓಡಾಟಕ್ಕೆ ತೀವ್ರ ತೊಂದರೆ ಆಗುತ್ತಿರುವುದು ಗಮನಕ್ಕೆ ಬಂದಿದೆ. ಒಂದೆರಡು ಕಡೆ ಪಿಡಬ್ಲೂೃಡಿ ರಸ್ತೆ ಮೇಲೂ ನೀರು ಉಕ್ಕಿ ಹರಿಯುತ್ತಿದೆ. ಇನ್ನು ಗುಮ್ಮನಹಳ್ಳಿಯಲ್ಲಿ ಹೇಮೆ ನೀರು ನೈಸರ್ಗಿಕವಾಗಿ ಹರಿಯಲಿದ್ದು ಇದನ್ನೇ ಬೇರೆಡೆ ತಿರುಗಿಸಲು ಸಾಧ್ಯವಿಲ್ಲ. ಇಂಜಿನಿಯರ್‌ಗಳಿಂದ ವರದಿ ತರಿಸಿಕೊಂಡು ಸೇತುವೆ ಎತ್ತರಿಸುವ ಬಗ್ಗೆ ಗಮನಹರಿಸಲಾಗುವುದು. ಮಮತಾ, ತಹಸೀಲ್ದಾರ್