ಜಿಲ್ಲೆ

ಕಳ್ಳಂಬೆಳ್ಳ ಕೆರೆಗೆ ಹರಿದ ಹೇಮೆ ; ಶಿರಾ ತಾಲೂಕು ಜನರ ಮೊಗದಲ್ಲಿ ಸಂತಸ

ಶಿರಾ: ಮದಲೂರು ಕೆರೆಗೆ ಹೇಮೆ ನೀರು ಹರಿಯುವ ವಿವಾದದ ಕಿಚ್ಚು ಎದ್ದಿರುವ ಸಂದರ್ಭದಲ್ಲೇ ಗುರುವಾರ ಮಧ್ಯಾಹ್ನದಿಂದ ಕಳ್ಳಂಬೆಳ್ಳ ಕೆರೆಗೆ ಹೇಮಾವತಿ ನಾಲೆ ಮೂಲಕ ನೀರು ಹರಿಯಲಾರಂಭಿಸಿದೆ.

ಇತ್ತೀಚೆಗೆ ಕೆಡಿಪಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಜೆ.ಸಿ.ಮಾಧುಸ್ವಾಮಿ ಅವರು ಮದಲೂರು ಕೆರೆಗೆ ಹೇಮೆ ನೀರು ಹರಿಸಿದರೆ ಜೈಲಿಗೆ ಕಳುಹಿಸಿತ್ತೀನಿ ಎಂಬ ಎಚ್ಚರಿಕೆಯನ್ನು ಅಧಿಕಾರಿಗಳಿಗೆ ಕೊಟ್ಟಿದ್ದು ಆಡಳಿತ ಹಾಗೂ ವಿರೋಧ ಪಕ್ಷಗಳ ನಡುವಿನ ವಾಗ್ಯುದ್ಧಕ್ಕೆ ವೇದಿಕೆ ಒದಗಿಸಿತ್ತು. ಇಂತಹ ಸಂದರ್ಭದಲ್ಲಿ ಶಿರಾದತ್ತ ಹೇಮೆ ನೀರು ಹರಿಯುತ್ತಿರುವುದು ಬಿಜೆಪಿ ಜನಪ್ರತಿನಿಧಿಗಳ ಸಂಭ್ರಮಕ್ಕೆ ಕಾರಣವಾಗಿದೆ.

ಹೇಮಾವತಿ ನಾಲೆ ಪಟ್ರಾವತನಹಳ್ಳಿ ಎಸ್ಕೇಪ್ ಗೇಟ್‌ನಿಂದ ಕಳ್ಳಂಬೆಳ್ಳ ಕೆರೆಗೆ ಹರಿಯುತ್ತಿದ್ದ ನೀರಿಗೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರೊಡಗೂಡಿ ತೂಬಿನ ಬಳಿ ಶಾಸಕ ಡಾ.ಸಿ.ಎಂ.ರಾಜೇಶಗೌಡ ಗಂಗಾಪೂಜೆ ಸಲ್ಲಿಸಿದರು. ಈ ವೇಳೆ ಮಾತನಾಡಿದ ಅವರು ಪ್ರಸ್ತುತ ಕ್ಷೇತ್ರದ ರಾಜಕೀಯ ಕೇಂದ್ರವಾಗಿರುವ ಮದಲೂರು ಕೆರೆಗೆ ನೀರು ಹರಿಸಲು ಬಿಜೆಪಿ ಬದ್ಧವಾಗಿದೆ. ಈ ನಿಟ್ಟಿನಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಅವರಂತೆ ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಹಕಾರ ನೀಡಲಿದ್ದಾರೆ. ಉಪ ಚುನಾವಣೆಯಲ್ಲಿ ನೀಡಿದ್ದ ಭರವಸೆಯಂತೆ ಮದಲೂರು ಕೆರೆಗೆ 50 ದಿನಗಳ ಕಾಲ ನೀರು ಹರಿಸಲಾಗಿತ್ತು. ಈ ಬಾರಿಯೂ ಸರ್ಕಾರದಿಂದ ಹೆಚ್ಚುವರಿ ನೀರನ್ನು ಪಡೆದು ಮದಲೂರು ಕೆರೆಗೆ ಹೇಮೆ ನೀರು ಹರಿಸಲಿದ್ದೇವೆ ಎಂದರು.

ಮದಲೂರು ಕೆರೆ ರಾಜಕೀಯವಾಗಿ ಬಳಕೆಯಾಗಿದ್ದೇ ಹೆಚ್ಚು. ರಾಜಕೀಯ ಚಿತ್ರಣ ಮದಲೂರು ಕೆರೆ ಮೇಲೆ ಅವಲಂಬಿತವಾಗಿತ್ತು. ತಮ್ಮ ಸರ್ಕಾರ ಬಂದ ನಂತರ ಕಳೆದ ವರ್ಷ ಮದಲೂರು ಕೆರೆಗೆ ನೀರು ಹರಿಸಿದ್ದೇವೆ. ಹಿಂದೆಲ್ಲಾ ಡಿಸೆಂಬರ್ ವೇಳೆಗೆ ಶಿರಾಕ್ಕೆ ನೀರು ಹರಿಸಲಾಗುತ್ತಿತ್ತು. ನಾವು ಜುಲೈನಲ್ಲೇ ನೀರು ಹರಿಸುತ್ತಿದ್ದೇವೆ. ಹಾಗಾಗಿ, ಹೆಚ್ಚುವರಿ ನೀರು ಕೇಳಲು ನಮಗೆ ಅವಕಾಶ ಇದೆ. ಅದರಂತೆ ಈ ಬಾರಿ ಹೆಚ್ಚುವರಿ ನೀರನ್ನು ಪಡೆದುಕೊಂಡು ಮದಲೂರಿಗೆ ನೀರು ಹರಿಸಲಿದ್ದೇವೆ ಎಂದು ರಾಜ್ಯ ತೆಂಗು ನಾರಿನ ಅಭಿವೃದ್ಧಿ ಮಂಡಲಿ ಅಧ್ಯಕ್ಷ ಬಿ.ಕೆ.ಮಂಜುನಾಥ್ ಭರವಸೆಯಿತ್ತರು. ಪೌರಾಯುಕ್ತ ಶ್ರೀನಿವಾಸ್, ಮುಖಂಡ ಮದಲೂರು ನರಸಿಂಹಮೂರ್ತಿ, ಸಂತೇಪೇಟೆ ನಟರಾಜು, ಸುಧಾಕರಗೌಡ, ಬಸವರಾಜು, ಮಾಲಿಮರಿಯಪ್ಪ, ಕೋಟೆ ರವಿ, ರಘು, ಎಇಇ ಸೇತುರಾಂ ಸಿಂಗ್ ಮತ್ತಿರರು ಇದ್ದರು.