ತುಮಕೂರು: ಜಿಲ್ಲೆಗೆ ಈ ಬಾರಿ ಹೇಮೆ ನೀರನ್ನು ಕೃಷಿ ಚಟುವಟಿಕೆಗೂ ಮೀಸಲಿಡಲಾಗಿದೆ. ಹೇಮಾವತಿ ನಾಲಾ ವಲಯದ 1.99 ಲಕ್ಷ ಎಕರೆ ಪ್ರದೇಶಕ್ಕೆ ನೀರು ಒದಗಿಸಲು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ.
ಹೇಮಾವತಿ ಎಡದಂಡೆ ನಾಲೆ ಅಡಿ ಚನ್ನರಾಯಪಟ್ಟಣ ಬಳಿ ಟಿಸಿಲೊಡೆಯುವ ಹೇಮೆ ತುಮಕೂರು, ನಾಗಮಂಗಲ ಕಡೆಗೆ ಹರಿಯುತ್ತದೆ. ತುಮಕೂರು ನಾಲೆ ಉದ್ದ 240 ಕಿ.ಮೀ.ಇದ್ದು, ಜಿಲ್ಲೆಯ ತಿಪಟೂರು, ತುರುವೇಕೆರೆ, ಗುಬ್ಬಿ, ಕುಣಿಗಲ್ ತಾಲೂಕಿನಲ್ಲಿ 2.37 ಲಕ್ಷ ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ಮೀಸಲಿಡಲಾಗಿದೆ. ಆದರೆ, ಪ್ರತೀ ವರ್ಷ ಒಂದಲ್ಲಾ ಒಂದು ಸಮಸ್ಯೆಯಿಂದ ಕುಡಿಯುವ ನೀರಿಗೂ ತತ್ವಾರ ಎದುರಾಗುತ್ತಿದ್ದಲ್ಲದೆ, ಕೃಷಿಗೆ ಬಳಸಲು ನೀರನ್ನು ಈವರೆಗೆ ಹರಿಸಿಲ್ಲ.
ಗೊರೂರು ಅಣೆಕಟ್ಟೆ ಭರ್ತಿ: ಹಾಸನ ಜಿಲ್ಲೆಯ ಗೊರೂರು ಹೇಮಾವತಿ ಜಲಾಶಯ ಬಹುತೇಕ ಭರ್ತಿಯಾಗಿದೆ. ಸದ್ಯ 36.61 ಟಿಎಂಸಿ ನೀರು ಸಂಗ್ರಹವಾಗಿದ್ದು 5462 ಕ್ಯುಸೆಕ್ ಒಳಹರಿವಿದೆ. ಆ.13 ರಿಂದ ಜಿಲ್ಲೆಗೆ ನೀರು ಬಿಡಲಾಗಿದ್ದು ಮೊದಲಿಗೆ ಹಂತ, ಹಂತವಾಗಿ ಕುಡಿಯುವ ನೀರು ಯೋಜನೆಗಳ ಕೆರೆಗಳ ನೀರು ತುಂಬಿಸಲು ಕ್ರಮವಹಿಸಲಾಗಿದೆ.
ಜಿಲ್ಲೆಯಲ್ಲಿ ಹೇಮಾವತಿ ಯೋಜನೆಯಡಿ 187 ಕಿ.ಮೀ., ನಾಲಾ ವ್ಯಾಪ್ತಿವರೆಗೆ ನೀರು ಹರಿಸಲಿದ್ದು, ಯೋಜನೆಯ ಟೈಲ್‌ಎಂಡ್ (ಕೊನೆಭಾಗ) ಕುಣಿಗಲ್ ಭಾಗಕ್ಕೆ ಈ ಬಾರಿ ನೀರು ಹರಿಸಲಾಗುತ್ತಿದೆ. ಆ.10 ರಂದು ನಡೆದ ನೀರಾವರಿ ಸಲಹಾ ಸಮಿತಿ (ಐಸಿಸಿ) ಸಭೆ ಬಳಿಕ ವೇಳಾಪಟ್ಟಿ ನಿಗದಿಪಡಿಸಿ ನೀರು ಹರಿಸಲು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅಧ್ಯಕ್ಷತೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಹಾಗಾಗಿ, ಆ.13 ರಿಂದ 23ರವರೆಗೆ ಕುಣಿಗಲ್ ಜತೆಗೆ ಶಿರಾ ಭಾಗಕ್ಕೆ 10 ದಿನಗಳ ನೀರು ಹರಿಸಲಾಗಿದೆ.
ಕುಡಿಯುವ ನೀರಿಗೆ ಆದ್ಯತೆ: ಮೊದಲ ಹಂತದಲ್ಲಿ ಕುಡಿಯುವ ನೀರಿನ ಯೋಜನೆಗಳ ವ್ಯಾಪ್ತಿಯ ಕೆರೆ ತುಂಬಿಸಲು ಆದ್ಯತೆ ನೀಡಲಾಗಿದೆ. ಕಾವೇರಿ ನೀರಾವರಿ ನಿಗಮದಡಿ 29 ಹಾಗೂ 13 ಗ್ರಾಮೀಣ ಕುಡಿಯುವ ನೀರಿನ ಯೋಜನೆಯಡಿ ಬರುವ ಕೆರೆಗಳನ್ನು ತುಂಬಿಸಲಾಗುವುದು. 1600 ಕ್ಯುಸೆಕ್ ನೀರು ನಾಲೆಯಲ್ಲಿ ಹರಿಯುತ್ತಿದ್ದು, ಶಿರಾ, ಕುಣಿಗಲ್ ಬಳಿಕ ಆ.24 ರಿಂದ ಸೆ.3ರವರೆಗೆ 0-173 ಕಿ.ಮೀ.,ನಾಲಾ ವ್ಯಾಪ್ತಿಯಲ್ಲಿ ಬರುವ ಬುಗಡನಹಳ್ಳಿ ಜಲಸಂಗ್ರಹಾಗಾರ, ಸಿ.ಎಸ್.ಪುರ ಕೆರೆಗಳು ಸೇರಿ ಈ ನಾಲಾ ವ್ಯಾಪ್ತಿಯಲ್ಲಿ ಬರುವ ಕೆರೆಗಳಿಗೆ ನೀರು ವಿತರಿಸಲಾಗುವುದು. ಜ.31ರವರೆಗೆ ವೇಳಾಪಟ್ಟಿಯಂತೆ ತಾಲೂಕುವಾರು ಹಂಚಿಕೆಯಾಗಿರುವ ನೀರಿನ ಅನುಗುಣವಾಗಿ ಸಮರ್ಪಕವಾಗಿ ನೀರು ವಿತರಿಸಲಾಗುವುದು.
1.99 ಲಕ್ಷ ಎಕರೆ ಕೃಷಿಗೆ ನೀರು: ಕುಡಿಯುವ ನೀರಿನ ಯೋಜನೆಯ ಕೆರೆಗಳನ್ನು ಹೊರತುಪಡಿಸಿ 253 ಕೆರೆಗಳಿಗೆ ನೀರು ತುಂಬಿಸಬೇಕಿದೆ. ಜಿಲ್ಲೆಯ ತಿಪಟೂರು, ತುರುವೇಕೆರೆ, ಗುಬ್ಬಿ, ಕುಣಿಗಲ್ ತಾಲೂಕಿನಲ್ಲಿ 2.37 ಲಕ್ಷ ಎಕರೆ ಅಚ್ಚುಕಟ್ಟು ಪ್ರದೇಶ ಘೋಷಿಸಿದ್ದು ಹೇಮೆ ನೀರನ್ನು ಕೃಷಿಗೆ ಒದಗಿಸುವುದು ಜಿಲ್ಲಾಡಳಿತಕ್ಕೆ ಪ್ರತೀ ಬಾರಿ ಸವಾಲೆನಿಸಿದೆ. ಕಳೆದ ಬಾರಿ ಕೆರೆ ಅಕ್ಕಪಕ್ಕದ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಒದಗಿಸಿ ಕೈಚೆಲ್ಲಲಾಗಿತ್ತು. ಈ ಬಾರಿ ಹೇಮಾವತಿ ಜಲಾಶಯ ಪ್ರದೇಶ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ಜಲಾಶಯ ಬಹುತೇಕ ಭರ್ತಿಯಾಗಿದೆ. ರಾಜಕೀಯ ಪ್ರಭಾವಕ್ಕೆ ಒಳಗಾಗದೆ ಸೂಕ್ತ ವೇಳಾಪಟ್ಟಿ ತಯಾರಿಸಿ ನೀರು ವಿತರಣೆ ಮಾಡುತ್ತಿರುವುದರಿಂದ ಯಾವ ತಾಲೂಕಿಗೂ ಅನ್ಯಾಯವಾಗುವುದಿಲ್ಲ. ಜತೆಗೆ 1,99,399.4 ಎಕರೆ ಅಚ್ಚುಕಟ್ಟು ಪ್ರದೇಶಕ್ಕೂ ಹೇಮೆ ಹರಿಸಲು ಜಿಲ್ಲಾಡಳಿತ ಕ್ರಮವಹಿಸಿದೆ. ಈ ಬಾರಿ ಉತ್ತಮ ಮಳೆ ಜತೆಗೆ ಹೇಮೆ ನೀರು ಅಚ್ಚುಕಟ್ಟು ಪ್ರದೇಶಕ್ಕೆ ಹರಿದಿದ್ದೇ ಆದರೆ, ರೈತರ ಮೊಗದಲ್ಲಿ ಮಂದಹಾಸ ಮೂಡಲಿದೆ.
ಪ್ರಭಾವಕ್ಕೊಳಗಾಗದೆ ವೇಳಾಪಟ್ಟಿ : ಈ ಹಿಂದೆ ಪ್ರಭಾವಿ ಶಾಸಕರು ಜಿಲ್ಲಾಡಳಿತದ ಒತ್ತಡ ಹೇರಿ ಅಸಮರ್ಪಕವಾಗಿ ಹೇಮೆ ನೀರು ಹಂಚಿಕೆ ಮಾಡುತ್ತಿದ್ದರಿಂದ ಹೇಮಾವತಿ ನಾಲಾ ವಲಯ ವ್ಯಾಪ್ತಿಯಲ್ಲಿ ಸರಿಯಾಗಿ ನೀರು ವಿತರಣೆ ಆಗುತ್ತಿರಲಿಲ್ಲ. ಈ ಬಾರಿ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಯಾರ ಪ್ರಭಾವಕ್ಕೂ ಮಣಿಯದೆ ತಲಾ 10 ದಿನಗಳಂತೆ ಕುಡಿಯುವ ನೀರಿನ ಯೋಜನೆಗಳಿಗೆ ನೀರು ಹರಿಸಲು ವೇಳಾಪಟ್ಟಿ ತಯಾರಿಸಿದ್ದು, ಅದರಂತೆ ನೀರು ವಿತರಣೆಯಲ್ಲಿ ಹೇಮಾವತಿ ಇಲಾಖೆ ಅಧಿಕಾರಿಗಳು ತೊಡಗಿದ್ದಾರೆ.
ಹೇಮಾವತಿ ಜಲಾಶಯ ವ್ಯಾಪ್ತಿಯಲ್ಲಿ ಉತ್ತಮ ಮಳೆ ಬೀಳುತ್ತಿರುವುದರಿಂದ ಈ ಬಾರಿಯಾದರೂ ಜಿಲ್ಲೆಗೆ ನಿಗದಿಯಾಗಿರುವ 25 ಟಿಎಂಸಿ ನೀರನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳಬೇಕಿದೆ. ಕುಡಿಯುವ ನೀರಿನ ಯೋಜನೆಗಳ ಜತೆಗೆ ನೀರಾವರಿ ಯೋಜನೆಗಳ ಕೆರೆ ತುಂಬಿಸಲು ಸರ್ಕಾರ ಪ್ರಯತ್ನ ಮಾಡಬೇಕು. ಜಲಾನಯನ ಪ್ರದೇಶ ವ್ಯಾಪ್ತಿಯ ಎಲ್ಲ ಕೆರೆಗಳನ್ನು ತುಂಬಿಸಿ ಅಚ್ಚುಕಟ್ಟುಗಳಿಗೆ ನೀರು ಕೊಡಬೇಕು. ಕಳೆದ ಬಾರಿ ಶಿರಾ, ಕುಣಿಗಲ್ ಭಾಗಕ್ಕೆ ನೀರು ಕೊಡುವಲ್ಲಿ ಅನ್ಯಾಯವಾಗಿದೆ. ಅದನ್ನು ಸರಿಪಡಿಸಬೇಕು. ಎ.ಗೋವಿಂದರಾಜು ಅಧ್ಯಕ್ಷ, ಜಿಲ್ಲಾ ರೈತ ಸಂಘ