ತುಮಕೂರು: ಹೇಮಾವತಿ ಎಕ್ಸ್ಪ್ರೆಸ್ ಲಿಂಕ್ ಕೆನಾಲ್ ಅನ್ನು ಶತಾಯಗತಾಯ ನಿರ್ಮಿಸುವ ತರಾತುರಿಯಲ್ಲಿರುವ ರಾಜ್ಯ ಸರ್ಕಾರವು ತಾಂತ್ರಿಕ ಸಮಿತಿಯನ್ನು ರಚಿಸಿದೆ. ನಿವೃತ್ತ ಮುಖ್ಯ ಇಂಜಿನಿಯರ್ ಅರವಿಂದ ಡಿ.ಕಣಗಿಲೆ ನೇತೃತ್ವದ ತಾಂತ್ರಿಕ ಸಮಿತಿಗೆ ಮೂವರು ನಿವೃತ್ತ ಅಧಿಕಾರಿಗಳನ್ನು ಸದಸ್ಯರನ್ನಾಗಿ ಹಾಗೂ ಸದಸ್ಯ ಕಾರ್ಯದರ್ಶಿಯನ್ನಾಗಿ ತುರುವೇಕೆರೆ ಹೇಮಾವತಿ ನಾಲಾ ವೃತ್ತದ ಸೂಪರಿಡೆಂಟ್ ಇಂಜಿನಿಯರ್ರನ್ನು ನೇಮಿಸಲಾಗಿದೆ.
ಮಾಗಡಿ ಹಾಗೂ ಕುಣಿಗಲ್ ತಾಲೂಕಿಗೆ ಕುಡಿಯುವ ನೀರು ಒದಗಿಸುವ ಉದ್ದೇಶಕ್ಕಾಗಿ ಹೇಮಾವತಿ ತುಮಕೂರು ಶಾಖಾ ನಾಲೆ 70 ಕಿ.ಮೀ., ಯಿಂದ ಪೈಪ್ಲೇನ್ ಅಳವಡಿಸುವ ಮೂಲಕ ಶ್ರೀರಂಗ ಏತ ನೀರಾವರಿಗೆ ನೀರನ್ನು ಖಾತ್ರಿ ಪಡಿಸುವ ಯೋಜನೆ ಅನುಷ್ಠಾನ ಕುರಿತು ತಾಂತ್ರಿಕ ಸಮಿತಿಯ ಮೊದಲ ಸಭೆಯನ್ನು ಜುಲೈ 9ರಂದು ಕರೆಯಲಾಗಿದೆ. ಜಲಸಂಪನ್ಮೂಲ ಸಚಿವರ ಒತ್ತಡದಲ್ಲಿರುವ ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕರು ತಾಂತ್ರಿಕ ಸಮಿತಿ ಸಭೆ ಕುರಿತು ಸಮಿತಿ ಸದಸ್ಯರಿಗೆ ಕೊಟ್ಟಿರುವ ಸೂಚನಾ ಪತ್ರದಲ್ಲಿ ದಿನಾಂಕ: 09-05-2024 ಎಂದು ತಪ್ಪಾಗಿ ಮುದ್ರಿಸಿರುವುದು ಕಂಡುಬಂದಿದೆ.
ಜಿಲ್ಲೆಯಲ್ಲಿ ತೀವ್ರಗೊಂಡ ಹೋರಾಟ: ಜಿಲ್ಲೆಯಾದ್ಯಂತ ಹೇಮಾವತಿ ಎಕ್ಸ್ಪ್ರೆಸ್ ಲಿಂಕ್ ಕೆನಾಲ್ ವಿರೋಧಿಸಿ ಹೋರಾಟ ತೀವ್ರಗೊಂಡಿದ್ದ ಹಿನ್ನೆಲೆಯಲ್ಲಿ ಜಲಸಂಪನ್ಮೂಲ ಸಚಿವರು ಆದ ಡಿಸಿಎಂ ಡಿ.ಕೆ.ಶಿವಕುಮಾರ್ ಅಧ್ಯಕ್ಷತೆಯಲ್ಲಿ ಕಳೆದ ತಿಂಗಳು ಜಿಲ್ಲೆಯ ಜನಪ್ರತಿನಿಧಿಗಳ ಸಭೆ ಕರೆದಿದ್ದರು. ಈ ಸಭೆಯಲ್ಲಿ ಯೋಜನೆ ಸಾಧಕಬಾಧಕಗಳ ಪರಿಶೀಲನೆಗೆ ತಾಂತ್ರಿಕ ಸಮಿತಿ ರಚಿಸುವುದಾಗಿ ಹೇಳಿದ್ದರು. ಆದರೆ, ಇದೀಗ ಯೋಜನೆ ಅನುಷ್ಠಾನ ಕುರಿತು ತಾಂತ್ರಿಕ ಸಮಿತಿ ಸಭೆ ಕರೆದಿರುವುದು ಜಿಲ್ಲೆಯಲ್ಲಿ ಮತ್ತೊಂದು ಸುತ್ತಿನ ಹೋರಾಟಕ್ಕೆ ಆಸ್ಪದ ನೀಡಿದೆ.
ಹೇಮೆ ನೀರು ಬಿಡಿ
ಹೇಮಾವತಿ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆ ಸುರಿಯುತ್ತಿರುವುದರಿಂದ ಗೊರೂರು ಅಣೆಕಟ್ಟೆಯಿಂದ ತುಮಕೂರು ಜಿಲ್ಲೆಗೆ ನೀರು ಬಿಡುವಂತೆ ಮಾಜಿ ಸಚಿವ ಸೊಗಡುಶಿವಣ್ಣ ಆಗ್ರಹಿಸಿದ್ದಾರೆ. 37.103 ಟಿಎಂಸಿ ಹೇಮಾವತಿ ಜಲಾಶಯ ಸಂಗ್ರಹ ಸಾಮರ್ಥ್ಯವನ್ನು ಹೊಂದಿದ್ದು ಈಗ ಸರಿ ಸುಮಾರು 17 ಟಿಎಂಸಿ ನೀರು ಸಂಗ್ರಹವಾಗಿದೆ ಎಂದು ಮೂಲಗಳು ತಿಳಿಸಿವೆ. ಜಿಲ್ಲೆಯಲ್ಲಿ ಬಹುತೇಕ ಕೆರೆಗಳು ಖಾಲಿಯಾಗಿದ್ದು ನೀರನ್ನು ಈ ಕೂಡಲೇ ಹರಿಸಲು ಕ್ರಮ ವಹಿಸುವಂತೆ ರಾಜ್ಯ ಸರ್ಕಾರವನ್ನು ಮನವಿ ಮಾಡಿದ್ದಾರೆ. ತುಮಕೂರು ಹೇಮಾವತಿ ಶಾಖಾ ನಾಲೆಯು ಆಧುನೀಕರಣಗೊಂಡಿರುವ ಹಿನ್ನೆಲೆಯಲ್ಲಿ ಯೋಜನೆ ಕೊನೆಭಾಗವಾದ ಕುಣಿಗಲ್ನಿಂದ ನೀರು ಹರಿಸಿ ಆ ಕೆರೆಗಳನ್ನು ಮೊದಲ ಹಂತದಲ್ಲೇ ತುಂಬಿಸಲು ಪ್ರಕಟಣೆಯಲ್ಲಿ ಶಿವಣ್ಣ ಆಗ್ರಹಿಸಿದ್ದಾರೆ.