ಕುಣಿಗಲ್: ಹೇಮಾವತಿ ನೀರು ಹರಿಸಲು ಮಂಜೂರಾಗಿರುವ ಲಿಂಕ್‌ಕೆನಾಲ್ ಯೋಜನೆ ಪೂರ್ಣಗೊಂಡರೆ ಕುಣಿಗಲ್ ತಾಲೂಕಿನಲ್ಲಿ ಹಸಿರು ಕ್ರಾಂತಿಯಾಗಲಿದೆ ಎಂದು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಭರವಸೆ ನೀಡಿದರು.
ಪಟ್ಟಣದಲ್ಲಿ ಬುದವಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಲಿಂಕ್ ಕೆನಾಲ್ ಕಾಮಗಾರಿ ಈಗಾಗಲೇ ಪ್ರಾರಂಭವಾಗಿದ್ದು, ಮುಂದಿನ ಒಂದುವರೆ ವರ್ಷದಲ್ಲಿ ಕಾಮಗಾರಿ ಮುಗಿದು ತಾಲೂಕಿನ ಪಾಲಿನ 3 ಟಿಎಂಸಿ ಹೇಮಾವತಿ ನೀರು ಹರಿಯಲಿದೆ ಎಂದರು.
ಹೇಮಾವತಿ ನೀರಿಗಾಗಿ ಹೋರಾಟ ಮಾಡಿದ ದಿವಂಗತ ವೈ.ಕೆ.ರಾಮಯ್ಯ ಹಾಗೂ ಹುಚ್ಚಮಾಸ್ತಿಗೌಡ ಅವರ ಕನಸ್ಸು ನನಸಾಗಿ ಒಂದುವರೆ ವರ್ಷದಲ್ಲಿ ಕೆನಾಲ್ ಕಾಮಗಾರಿ ಮುಗಿದು ನಮ್ಮ ಪಾಲಿನ ನೀರು ಹರಿಯಲಿದೆ. ಕುಣಿಗಲ್ ತಾಲೂಕಿನ ಎಲ್ಲ ಕರೆಕಟ್ಟಗಳು ತುಂಬಿ ಹಸಿರು ಕ್ರಾಂತಿಯಾಗುವುದು ಸತ ಸಿದ್ದ ಎಂದು ಹೇಳಿದರು.
ಮೂರು ಭಾರಿ ನನಗೆ ಮತ ನೀಡಿ ಸಂಸದನಾಗಿ ಮಾಡಿದ್ದೀರಾ. 10 ವರ್ಷ 8 ತಿಂಗಳು ನಿಮಗೆ ಯಾವುದೇ ಚುತಿ ಬಾರದಂತೆ ನಿಮ್ಮ ಸೇವಕನಾಗಿ ಕೆಲಸ ಮಾಡಿದ್ದೇನೆ ಈ ಬಗ್ಗೆ ನನಗೆ ಅತ್ಮತೃಪ್ತಿ ಇದೆ. ಅಭಿವೃದ್ದಿ ದೃಷ್ಟಿ ಇಟ್ಟುಕೊಂಡು ಕೆಲಸ ಮಾಡಿದ್ದೇನೆ. ಶುದ್ದ ನೀರಿನ ಘಟಕ ಪರಿಕಲ್ಪನೆಯನ್ನು ಮೊದಲ ಭಾರಿಗೆ ನನ್ನ ಲೋಕಸಭಾ ಕ್ಷೇತ್ರದಲ್ಲಿ ಜಾರಿಗೆ ತಂದು ನಂತರ ಈಗ ಇಡೀ ದೇಶದ ಎಲ್ಲ ಕಡೆ ಜಾರಿಗೆ ತರಲಾಗಿದೆ ಎಂದರು.
ಗ್ರಾಪಂ ಮಟ್ಟದಲ್ಲಿ ಅಧಿಕಾರಿಗಳ ತಂಡದೊಂದಿಗೆ ಸಭೆ ನಡೆಸಿ ಜನರ ಸಮಸ್ಯೆ ಕೇಳುವ ಕೆಲಸ ಮಾಡುತ್ತಿದ್ದರೇ ನನ್ನ ವಿರುದ್ದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಜೆಡಿಎಸ್ ಶಾಸಕರಿಂದ ಸ್ಪೀಕರ್‌ಗೆ ದೂರು ಕೊಡಿಸುತ್ತಾರೆ. 4 ವರ್ಷ ಇವರು ಸಂಸದರಾಗಿದ್ದಾಗ ಕ್ಷೇತ್ರಕ್ಕೆ ಎಷ್ಟು ಬಾರಿ ಬಂದಿದ್ದಾರೆ ಎಂಬುದು ಎಲ್ಲರಿಗೂ ಗೊತ್ತು ಎಂದರು.
ಶಾಸಕ ಡಾ.ರಂಗನಾಥ್ ಮಾತನಾಡಿ, ಕುಣಿಗಲ್ ಕೇತ್ರದ ಅಭಿವೃದ್ದಿ ಕೆಲಸಗಳಿಗೆ ಡಿ.ಕೆ.ಸುರೇಶ್ ಅವರು ಸಾಕಷ್ಟು ಪರಿಶ್ರಮ ಹಾಕಿದ್ದಾರೆ. ಕ್ರೀಯಾಶೀಲ ಸಂಸದರನ್ನು ಮತ್ತೇ ಗೆಲ್ಲಿಸಿಕೊಳ್ಳಲು ಕಾಂಗ್ರೇಸ್ ಮುಖಂಡರು ಹಾಗೂ ಕಾರ್ಯಕರ್ತರು ಶ್ರಮಿಸಬೇಕು ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗಣ್ಣಗೌಡ, ಕೆಪಿಸಿಸಿ ಸದಸ್ಯ ಬೇಗೂರು ನಾರಾಯಣ್, ತಾಪಂ ಮಾಜಿ ಸದಸ್ಯ ಐ.ಎ.ವಿಶ್ವನಾಥ್, ಕಾಂಗ್ರೆಸ್ ಮುಖಂಡರಾದ ಬಿ.ಕೆ.ರಾಮಣ್ಣ, ಗಂಗಶಾನಯ್ಯ, ರೇಹಮಾನ್ ಷರೀಫ್, ಗಾಯತ್ರಿರಾಜು, ಮಾಗಡಯ್ಯ, ಕುಮಾರ್, ಪ್ರಚಾರ ಸಮಿತಿ ಅಧ್ಯಕ್ಷ ಶಂಕರ್, ಕೋಘಟ್ಟ ರಾಜಣ್ಣ ಮತ್ತಿತರರು ಇದ್ದರು.