ಜಿಲ್ಲೆ

ಎಕ್ಸ್‌ಪ್ರೆಸ್ ಕೆನಾಲ್ ಬಳಿ ಜೆಸಿಬಿ ಘರ್ಜನೆ

ಜಗನ್ನಾಥ್ ಕಾಳೇನಹಳ್ಳಿ

ಗುಬ್ಬಿ : ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿ ಸೋಮವಾರ ಬೆಳ್ಳಂಬೆಳಗ್ಗೆ ಜೆಸಿಬಿಗಳ ಘರ್ಜನೆ ಕೇಳಿಬಂತು ! ಭಾನುವಾರ ರಾಮನಗರ ಜಿಲ್ಲೆ ಮಾಗಡಿ ನೀರು ಕೊಂಡೊಯ್ಯುವ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿಗೆ ಬೃಹತ್ ಗಾತ್ರದ ಪೈಪ್‌ಗಳನ್ನು ಹೊತ್ತುತರುತ್ತಿದ್ದ ಲಾರಿಗಳನ್ನು ತಡೆದ ಬೆನ್ನಲ್ಲೇ ಸೋಮವಾರ ಬೆಳಗ್ಗೆ ಏಕಾಏಕಿ ಪೈಪ್ ಅಳವಡಿಸಲು ತೆಗೆದಿದ್ದ ಕಾಲುವೆಗಳನ್ನು ಮಾಜಿ ಸಚಿವ ಸೊಗಡುಶಿವಣ್ಣ, ಜೆಡಿಎಸ್ ಶಾಸಕ ಎಂ.ಟಿ.ಕೃಷ್ಣಪ್ಪ, ಮಾಜಿ ಶಾಸಕ ಮಸಾಲೆ ಜಯರಾಂ ನೇತೃತ್ವದಲ್ಲಿ ನೂರಾರು ರೈತರೇ ಜೆಸಿಬಿ ನೆರವಿನಿಂದ ಮಣ್ಣು ಹಾಕಿ ಮುಚ್ಚಿದರು. ಈ ಸಂದರ್ಭದಲ್ಲಿ ಪೊಲೀಸ್ ಪಡೆ ಕೈಚೆಲ್ಲಿ ನಿಂತಿತ್ತು.

ಎಕ್ಸ್‌ಪ್ರೆಸ್ ಕೆನಾಲ್ ಯೋಜನೆ ಸ್ಥಗಿತಗೊಳಿಸುವಂತೆ ಮೇ 16 ರಂದು ನಡೆದ ಪ್ರತಿಭಟನೆ ವೇಳೆ ಜೂನ್ 5ರವರೆಗೆ ಸರ್ಕಾರಕ್ಕೆ ಗಡುವು ಕೊಡಲಾಗಿತ್ತಾದರೂ ಸೋಮವಾರ ಏಕಾಏಕಿ ಹೋರಾಟಗಾರರು ಹತ್ತಾರು ಜೆಸಿಬಿಗಳನ್ನು ತಂದು ಕಾಲುವೆ ಮುಚ್ಚಲು ಮುಂದಾದಾಗ ಪೊಲೀಸರು ತಡೆಯಲು ಯತ್ನಿಸಿದರು. ಈ ಸಂದರ್ಭದಲ್ಲಿ ರೈತರು, ಪೋಲಿಸರ ನಡುವೆ ಮಾತಿನಚಕಮಕಿ ನಡೆದು ಕೆಲಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು.

ಗುಬ್ಬಿ ತಾಲೂಕಿನ ಸಿ.ಎಸ್.ಪುರ ಹೋಬಳಿ ಹೊಸಹಳ್ಳಿ ಗ್ರಾಮದಲ್ಲಿ ಲಿಂಕ್ ಕೆನಾಲ್ ಕಾಮಗಾರಿಯನ್ನು ರಾತ್ರೋರಾತ್ರಿಯೇ ಪೋಲಿಸ್ ಸರ್ಪಗಾಲಿನಲ್ಲಿ ನಡೆಸುವ ಆತಂಕ ಹಿನ್ನೆಲೆಯಲ್ಲಿ ಸೊಗಡುಶಿವಣ್ಣ , ಎಂ.ಟಿ.ಕೃಷ್ಣಪ್ಪ ನೇತೃತ್ವದಲ್ಲಿ ನೂರಾರು ರೈತರು ಜೆಸಿಬಿ ಯಂತ್ರಗಳ ಮೂಲಕ ಮಣ್ಣು ಹಾಕಿ ಮುಚ್ಚಿಸುವ ಕೆಲಸಕ್ಕೆ ಮುಂದಾದರು.

ನೂರಾರು ಸಂಖ್ಯೆಯಲ್ಲಿ ಸೇರಿದ ರೈತ ಮುಖಂಡರು, ವಿವಿಧ ಸಂಘಟನೆಗಳ ಮುಖಂಡರು ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುವ ಮೂಲಕ ಸಿ.ಎಸ್.ಪುರ ಕೆರೆಯ ಸಮೀಪದಲ್ಲಿ ನಡೆಯುತ್ತಿರುವ ಕಾಮಗಾರಿಗೆ ಮಣ್ಣು ಹಾಕಿಸುವ ಮೂಲಕ ಕಾಮಗಾರಿಯನ್ನು ಕೂಡಲೇ ಸರ್ಕಾರ ಸ್ಥಗಿತಗೊಳಿಸಲು ಮುಂದಾಗಬೇಕು ಎಂದು ಆಕ್ರೋಶವನ್ನು ಹೊರ ಹಾಕಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಎಂ.ಟಿ.ಕೃಷ್ಣಪ್ಪ , ಕಾಂಗ್ರೆಸ್ ಸರ್ಕಾರವು ಅವೈಜ್ಞಾನಿಕವಾಗಿ ಎಕ್ಸ್‌ಪ್ರೆಸ್ ಕೆನಾಲ್ ಕಾಮಗಾರಿ ಮಾಡುತ್ತಿರುವುದು ಸರಿಯಲ್ಲ. ರೈತರ ಜಮೀನುಗಳನ್ನು ಸ್ವಾಧೀನ ಪಡಿಸಿಕೊಂಡು ಸೂಕ್ತ ಪರಿಹಾರ ನೀಡುವ ಜತೆಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿ ಕಾಮಗಾರಿ ಮಾಡಬೇಕು. ಆದರೆ, ಕಾನೂನಾತ್ಮಕವಾಗಿ ಟೆಂಡರ್ ಪ್ರಕ್ರಿಯೆ ಮಾಡದೆ, ಭೂಸ್ವಾಧೀನ ಪ್ರಕ್ರಿಯೆ ಮಾಡದೆ ಬೇಕಾಬಿಟ್ಟಿಯಾಗಿ ಕಾಮಗಾರಿ ಮಾಡಲು ಮುಂದಾಗಿರುವುದು ಈ ಭಾಗದ ರೈತರಿಗೆ ಅನ್ಯಾಯವಾಗಿದೆ ಎಂದರು.

ಇಷ್ಟು ದೊಡ್ಡ ಪ್ರಮಾಣದ ಪೈಪುಗಳ ಮೂಲಕ ನೀರನ್ನು ಬೇರೆ ಜಿಲ್ಲೆಗೆ ಕೊಂಡೊಯ್ಯದರೆ ಈ ಭಾಗದ ರೈತರಿಗೆ ಕಿಂಚಿತ್ತು ಸಹ ನೀರು ದೊರೆಯುವುದಿಲ್ಲ. ಈ ನಿಟ್ಟಿನಲ್ಲಿ ಜಿಲ್ಲೆಯ ಜನತೆಗೆ ಹಾಗೂ ರೈತರಿಗೆ ನಾವು ಅನ್ಯಾಯ ವಾಗಲು ಬಿಡುವುದಿಲ್ಲ. ಜನತೆಗೆ ನಾವುಗಳು ಕೊಟ್ಟ ಮಾತಿನಂತೆ ಕಾಮಗಾರಿಯನ್ನು ಯಾವುದೇ ಕಾರಣಕ್ಕೂ ಮುಂದುವರಿಸಲು ಬಿಡುವುದಿಲ್ಲ. ಯಾವುದೇ ಹೋರಾಟಕ್ಕೂ ನಾವು ಸಿದ್ಧರಿದ್ದೇವೆ ಎಂದು ಎಚ್ಚರಿಸಿದರು.

ರೈತರಿಗಾಗಿ ಹೋರಾಟ: ಈಗಾಗಲೇ ಕಾಮಗಾರಿಯನ್ನು ನಿಲ್ಲಿಸುವ ಕುರಿತು ಸಂಬಂಧ ಪಟ್ಟ ಅಧಿಕಾರಿಗಳು ಹಾಗೂ ಸಚಿವರ ಗಮನಕ್ಕೆ ತರಲಾಗಿದೆ. ಸರ್ಕಾರವಾಗಲಿ, ಅಧಿಕಾರಿಗಳಾಗಲಿ ಸಮರ್ಪಕವಾಗಿ ಸ್ಪಂದಿಸದ ಹಿನ್ನೆಲೆ ರೈತರ ಹಿತಕ್ಕಾಗಿ ನಾವು ಹೋರಾಟಕ್ಕೆ ಇಳಿಯುವುದು ಅನಿವಾರ್ಯವಾಗಿದೆ. ಹಾಗಾಗಿ, ಕಾಮಗಾರಿ ಸ್ಥಗಿತ ಮಾಡುವಂತೆ ನಾಲೆಗೆ ಮಣ್ಣುಹಾಕಿ ಮುಚ್ಚಲು ಮುಂದಾಗಿದ್ದೇವೆ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಹೇಳಿದರು.

ಪೈಪ್ ಅಳವಡಿಸಲು ತೆಗೆದಿರುವ ಕಾಲುವೆಗಳನ್ನು ಸ್ವತಃ ನಾವೇ ಮುಚ್ಚುತ್ತೇವೆ. ಶಿರಾ, ಮಧುಗಿರಿ ಭಾಗದ ರೈತರು ಸಹ ಈ ಹೋರಾಟಕ್ಕೆ ಬರುವುದಾಗಿ ತಿಳಿಸುತ್ತಿದ್ದು ಎಲ್ಲರ ಸಹಕಾರವನ್ನು ಪಡೆದು ಈ ಅವೈಜ್ಞಾನಿಕ ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿ ಸ್ಥಗಿತ ಹೋರಾಟಕ್ಕೆ ಎಂತಹ ತ್ಯಾಗಕ್ಕು ಸಿದ್ಧರಿದ್ದೇವೆ. ಈ ಕೂಡಲೇ ಸರ್ಕಾರ ಎಚ್ಚೆತ್ತುಕೊಂಡು ಯೋಜನೆ ಸ್ಥಗಿತಗೊಳಿಸುವಂತೆ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಎಸ್.ಡಿ.ದಿಲೀಪ್ ಕುಮಾರ್, ರಾಜೀವ್ ಕೃಷ್ಣಪ್ಪ, ವೆಂಕಟೇಶ್‌ಕೃಷ್ಣಪ್ಪ, ನಂಜೇಗೌಡ, ಧನಿಯಾ ಕುಮಾರ್, ಬೊರಪ್ಪನಹಳ್ಳಿ ಕುಮಾರ್, ಜಗದೀಶ್, ಸುರೇಶ್, ತರಕಾರಿ ಮಹೇಶ್, ಕೆ.ಪಿ.ಮಹೇಶ್ ವಿವಿಧ ಸಂಘಟನೆಯ ಮುಖಂಡರುಗಳು, ರೈತರು ಹಾಜರಿದ್ದರು.

ಹೇಮಾವತಿ ನೀರನ್ನು ಕುಣಿಗಲ್ ಭಾಗಕ್ಕೆ ನೈಸರ್ಗಿಕವಾಗಿ ತೆಗೆದುಕೊಂಡು ಹೋಗುವುದಕ್ಕೆ ನಮ್ಮ ಯಾವುದೇ ವಿರೋಧವಿಲ್ಲ . ಆದರೆ, ಜಿಲ್ಲೆಯ ಜನರಿಗೆ ಮರಣಶಾಸನವಾಗಲಿರುವ ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಯೋಜನೆಯನ್ನು ಕಾಂಗ್ರೆಸ್ ಸರ್ಕಾರ ಕೈಗೆತ್ತಿಕೊಂಡಿದೆ. ನಮ್ಮ ರೈತರು ಹಾಗೂ ಜನತೆಗೆ ಅನ್ಯಾಯವಾಗಲು ಬಿಡುವುದಿಲ್ಲ. ಏನಾದರೂ ಕೆಲಸ ಆರಂಭಿಸಿದರೆ ಪರಿಸ್ಥಿತಿ ಕೈಮೀರಲಿದೆ. ಮಸಾಲ ಜಯರಾಂ ಮಾಜಿ ಶಾಸಕ

ಮಾಧುಸ್ವಾಮಿ, ಸೋಮಣ್ಣ ಎಲ್ಲಿ !? ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಹೋರಾಟ ತೀವ್ರಗೊಳ್ಳುತ್ತಿದ್ದರೂ ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ, ಬಿಜೆಪಿ ಎಂಪಿ ಅಭ್ಯರ್ಥಿ ವಿ.ಸೋಮಣ್ಣ ಹೋರಾಟದತ್ತ ಒಮ್ಮೆಯೂ ಸುಳಿಯದೇ ಇರುವ ಬಗ್ಗೆ ರೈತರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಪಕ್ಷಾತೀತ ಹೋರಾಟವಾದರೂ ಕಾಂಗ್ರೆಸ್ಸಿಗರು ಹೋರಾಟದಿಂದ ಅಂತರ ಕಾಯ್ದುಕೊಂಡಿದ್ದಾರೆ. ಬಿಜೆಪಿ-ಜೆಡಿಎಸ್ ಮುಖಂಡರು ನೇತೃತ್ವವಹಿಸಿದ್ದು ಜೆಸಿಎಂ, ಸೋಮಣ್ಣ ಎಲ್ಲಿ ಎಂದು ಸ್ಥಳದಲ್ಲಿದ್ದ ಪ್ರತಿಭಟನಾನಿರತ ರೈತರು ಪ್ರಶ್ನಿಸುತ್ತಿದ್ದು ಕೇಳಿಬಂತು. ಎಎಸ್ಪಿ ಮೌನ... ಮಣ್ಣುಮುಚ್ಚಲು ತರುತ್ತಿದ್ದ ಜೆಸಿಬಿಯನ್ನು ಎಎಸ್‌ಐ ಒಬ್ಬರು ತಡೆಯಲು ಮುಂದಾದರು. ಮೇಲಧಿಕಾರಿಗಳು ಹೇಳಿದ್ದಾರೆ ಯಾವುದೇ ಕಾರಣಕ್ಕು ಜೆಸಿಬಿ ಬಿಡುವುದಿಲ್ಲ. ನನ್ನ ಮೇಲೆ ಬೇಕಾದರೂ ಹರಿಸಿ ಅಂತ ಪಟ್ಟುಹಿಡಿದರು. ಈ ವೇಳೆ ಆಕ್ರೋಶಭರಿತ ಎಂ.ಟಿ.ಕೃಷ್ಣಪ್ಪ, ಸೊಗಡುಶಿವಣ್ಣ ಆತನನ್ನು ನಿಂಗು, ನಿನ್ಮಕ್ಕಳಿಗೂ ಕುಡಿಯಲಿಕ್ಕೆ ನೀರು ಇರುವುದಿಲ್ಲ ಅಂತ ತರಾಟೆಗೆ ತೆಗೆದುಕೊಂಡರು. ಆ ನಂತರ ಸ್ಥಳಕ್ಕೆ ಬಂದ ಎಎಸ್ಪಿ ಮರಿಯಪ್ಪ ಪ್ರತಿಭಟನಾನಿರತರ ಆರ್ಭಟ ಕಂಡು ಮೌನವಹಿಸಿದರು.