ಜಿಲ್ಲೆ

ಹೇಮೆ ಎಕ್ಸ್​ಪ್ರೆಸ್​ ಕೆನಾಲ್​ ಯೋಜನೆ ರದ್ದುಗೊಳಿಸಲು ಸಿಎಂ, ಡಿಸಿಎಂ ಪಾದಕ್ಕೆರಗಿ ಬೇಡುವೆ

ತುಮಕೂರು: ಹೇಮಾವತಿ ಎಕ್ಸ್​ಪ್ರೆಸ್​ ಕೆನಾಲ್​ ಯೋಜನೆ ಬೆಳಗಾವಿ ಅಧಿವೇಶನದಲ್ಲು ಸದ್ದು ಮಾಡಿತು. ಜಿಲ್ಲೆಗೆ ಮರಣಶಾಸನವೆನಿಸಿರುವ ಎಕ್ಸ್​ಪ್ರೆಸ್​ ಕೆನಾಲ್​ ಯೋಜನೆ ರದ್ದುಗೊಳಿಸುವಂತೆ ಸಿಎಂ, ಡಿಸಿಎಂ ಪಾದಕ್ಕೆರಗಿ ಬೇಡುವೆ. ನಮ್ಮಗಳ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡಬೇಡಿ ಎಂದು ಗ್ರಾಮಾಂತರ ಬಿಜೆಪಿ ಶಾಸಕ ಬಿ.ಸುರೇಶಗೌಡ ಆಗ್ರಹಿಸಿದರು.

ಸೋಮವಾರ ರಾತ್ರಿ ವಿಧಾನಸಭೆಯಲ್ಲಿ ಗಮನಸೆಳೆಯುವ ಸೂಚನೆ ಮೇಲೆ ಹೇಮಾವತಿ ಎಕ್ಸ್​ಪ್ರೆಸ್​ ಕೆನಾಲ್​ ಯೋಜನೆಯಿಂದ ಜಿಲ್ಲೆಯ 5&6 ತಾಲೂಕುಗಳಲ್ಲಿ ರೈತರಿಗೆ ನೀರಿನ ಕೊರತೆಯಾಗಿದ್ದು ನಮ್ಮ ಜಿಲ್ಲೆಯ ಪಾಲಿನ ನೀರನ್ನು ರಾಮನಗರಕ್ಕೆ ಪೈಪ್​ಲೇನ್​ ಮೂಲಕ ಕೊಂಡೊಯ್ಯುವ ಕಾನೂನುಬಾಹಿರ ಯೋಜನೆ ಕೈ ಬಿಡಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಜೆಡಿಎಸ್​ ಶಾಸಕ ಎಂ.ಟಿ.ಕೃಷ್ಣಪ್ಪ ಸಹ ಧ್ವನಿಗೂಡಿಸಿ ಬೃಹತ್​ ಪೈಪ್​ಗಳನ್ನು ಅಳವಡಿಸಿ ನಮ್ಮ ನೀರನ್ನು ತಿರುಗಿಸಿದರೆ ಅದನ್ನೇ ಆಶ್ರಯಿಸಿರುವ ರೈತರ ಗತಿಯೇನು. ನೈಸರ್ಗಿಕವಾಗಿ ನೀರು ಹರಿಸಲು ನಮ್ಮ ಅಭ್ಯಂತರ ಇಲ್ಲ. ಪೈಪ್​ ಲೇನ್​ ಮೂಲಕ ಕೊಂಡೊಯ್ಯಲು ತೀವ್ರ ವಿರೋಧವಿದೆ. ಇದಕ್ಕೆ ಯಾವುದೇ ಕಾರಣಕ್ಕು ಅವಕಾಶ ಕೊಡುವುದಿಲ್ಲ ಎಂದು ಗುಡುಗಿದರು.

ಈ ವೇಳೆ ಮಧ್ಯಪ್ರವೇಶಿಸಿದ ಕುಣಿಗಲ್​ ಕಾಂಗ್ರೆಸ್​ ಶಾಸಕ ಡಾ.ಎಚ್​.ಡಿ.ರಂಗನಾಥ್​ ಇದಕ್ಕೆ ಆಕ್ಷೇಪಿಸಿದರಲ್ಲದೆ, ಸುರೇಶಗೌಡ ಪ್ರಸ್ತಾಪ ವೇಳೆ ಏರುಧ್ವನಿಯಲ್ಲಿ ಮಾತನಾಡಿ ಕೋಲಹಾಲ ಎಬ್ಬಿಸುವ ಪ್ರಯತ್ನ ಮಾಡಿದರು. ನಮ್ಮ ಜಿಲ್ಲೆಯ ಜನ, ರೈತರಿಗೆ ಅನ್ಯಾಯ ಮಾಡಿ ರಾಮನಗರ ಜಿಲ್ಲೆಗೆ 0.6 ಟಿಎಂಸಿ ನೀರು ತೆಗೆದುಕೊಂಡು ಹೋಗುವುದು ಕಾನೂನು ಬಾಹಿರ. ಇಂತಹ ಯೋಜನೆಯನ್ನು ದೇಶದಲ್ಲಿ ಎಲ್ಲಿಯು ಮಾಡಿಲ್ಲ. ಇದಕ್ಕೆ ಡಿಸಿಎಂ ಏಕೆ ಇಷ್ಟು ಮುತುವರ್ಜಿ ವಹಿಸಿದ್ದಾರೆಯೋ ತಿಳಿಯದು. ಕಾವೇರಿ ನೀರಾವರಿ ನಿಗಮದ ಅಧ್ಯಕ್ಷರು ಆದ ಸಿಎಂ ಸಿದ್ದರಾಮಯ್ಯ ಈ ರೀತಿಯ ರಾಜಕಾರಣ ಮಾಡಬಾರದು. ಈ ಯೋಜನೆ ಕೈಬಿಡಬೇಕು ಎಂದು ನಾನು ಇಡೀ ಸದನದ ಕೈಮುಗಿದು ಕೇಳಿಕೊಳ್ಳುತ್ತೇನೆ ಎಂದರು.

ಜಲಸಂಪನ್ಮೂಲ ಸಚಿವರ ಪರವಾಗಿ ಉತ್ತರ ನೀಡಿದ ಕಂದಾಯ ಸಚಿವ ಕೃಷ್ಣಬೈರೇಗೌಡ ತುಮಕೂರು ಜಿಲ್ಲೆಗೆ ಅನ್ಯಾಯವಾಗಲು ಬಿಡುವುದಿಲ್ಲ. ಜಿಲ್ಲೆಗೆ ಹಂಚಿಕೆ ಆಗಿರುವ 24 ಟಿಎಂಸಿ ನೀರನ್ನು ಪೂರ್ಣಪ್ರಮಾಣದಲ್ಲಿ ಹರಿಸಲು ಸರ್ಕಾರ ಕ್ರಮವಹಿಸಲಿದೆ ಎಂದು ಉತ್ತರ ನೀಡಿದರು. ಈ ಉತ್ತರದಿಂದ ಸಮಾಧಾನಗೊಳ್ಳದ ಸುರೇಶಗೌಡ, ಈ ಹಿಂದೆ ಬಿ.ಎಸ್​.ಯಡಿಯೂರಪ್ಪ ಸರ್ಕಾರವಿದ್ದಾಗ ಎಕ್ಸ್​ಪ್ರೆಸ್​ ಲಿಂಕ್​ ಕೆನಾಲ್​ ಯೋಜನೆ ಪರಿಷ್ಕರಿಸಿ ತುಮಕೂರು ಶಾಖಾ ನಾಲೆ ಆಧುನೀಕರಣಕ್ಕೆ ಹಣ ನೀಡಿದ್ದರು. ಅದರಿಂದಲೇ ಮೂರು ಟಿಎಂಸಿಯಷ್ಟು ನೀರು ಕುಣಿಗಲ್​ ಭಾಗಕ್ಕೆ ಈಗ ನೈಸರ್ಗಿಕವಾಗಿ ಹರಿಯುತ್ತಿದೆ. ಈ ಸರ್ಕಾರ ಬಂದ ಮೇಲೆ ನಬಾರ್ಡ್​ನಿಂದ 1 ಸಾವಿರ ಕೋಟಿ ರೂಪಾಯಿ ಸಾಲತೆಗೆದುಕೊಂಡು ಮತ್ತೆ ಅದೇ ಯೋಜನೆಯನ್ನು ಪುನರ್​ ವಿನ್ಯಾಸಗೊಳಿಸಲು ಹೊರಟಿದೆ. ಹೀಗೆ ಪುನರ್​ ವಿನ್ಯಾಸಗೊಳಿಸಲು ಆ ವಿಚಾರ ಸಂಪುಟ ಅನುಮೋದನೆ ಪಡೆಯಬೇಕು. ಈಗಿರುವ ನಾಲೆಯಲ್ಲಿ ನೀರು ಪೂರೈಸಲು ನಮ್ಮ ಅಭ್ಯಂತರ ಇಲ್ಲ. ನಮ್ಮ ಹೋರಾಟಕ್ಕು ಬೆಲೆ ಕೊಡದೆ ಯೋಜನೆ ಮುಂದುವರೆಸಿದರೆ ಆರು ವಿಧಾನಸಭಾ ಕ್ಷೇತ್ರಗಳ ಜನರ ಬಾಯಿಗೆ ವಿಷ ಹಾಕಿದಂತೆ ಎಂದು ಹರಿಹಾಯ್ದರು.