ಶಿರಹಟ್ಟಿ: ತಾಲೂಕಿನ ಖಾನಾಪುರ ಗ್ರಾಮದಲ್ಲಿ ನಿರ್ಮಿಸಿರುವ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನದಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ಮಲ್ಲಮ್ಮನ ಮೂರ್ತಿ ಹಾಗೂ ಕಳಸವನ್ನು ಭಾನುವಾರ ಪಟ್ಟಣದ ಫಕೀರೇಶ್ವರ ಮಠದಿಂದ ಮೆರವಣಿಗೆ ಮೂಲಕ ತರಲಾಯಿತು. ಸಕಲ ವಾದ್ಯಮೇಳ, ಜನಪದ ಕಲಾ ತಂಡ ಹಾಗೂ ಪೂರ್ಣಕುಂಭ ಹೊತ್ತ ಮಹಿಳೆಯರು ಸಡಗರ, ಸಂಭ್ರಮದೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಂಡರು. ಬೆಳಗ್ಗೆ 11ಗಂಟೆಗೆ ಮಠದಿಂದ ಹೊರಟ ಮೆರವಣಿಗೆಯು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಖಾನಾಪುರ ಗ್ರಾಮದ ಪುರ ಪ್ರವೇಶ ಮಾಡಿತು. ಝಾಂಜ್ ಮೇಳ, ನಂದಿಕೋಲು ಕುಣಿತ, ವೀರಭದ್ರೇಶ್ವರ ಜಾನಪದ ಕಲಾತಂಡ, ಕೊಣ್ಣೂರಿನ ಕನಕಶ್ರೀ ಮಹಿಳಾ ಡೊಳ್ಳು ಕುಣಿತ ಪ್ರದರ್ಶನ, ಸಾಲು ಸಾಲಾಗಿ ಹೊರಟ ಕುಂಭಹೊತ್ತ ಮಹಿಳೆಯರು ಜನಮನ ಸೆಳೆದರು. ಶಿವಶರಣೆ ಹೇಮರಡ್ಡಿ ಮಲ್ಲಮ್ಮನ ಆಕರ್ಷಕ ಮೂರ್ತಿ ಮತ್ತು ಕಳಸಕ್ಕೆ ಸಾರ್ವಜನಿಕರು ನಮಿಸಿದರು.
ಮಲ್ಲಿಕಾರ್ಜುನ ರಡ್ಡೇರ, ಚಂದ್ರಪ್ಪ ರಡ್ಡೇರ, ಅಶೋಕ ಮಡಿವಾಳರ, ಬಸವರಾಜ ಹಲಸೂರ, ದೊಡ್ಡದುಂಡಪ್ಪ ಗಾಣಿಗೇರ, ಸುರೇಶ ಅಕ್ಕಿ, ಅಜ್ಜನಗೌಡ ಪಾಟೀಲ, ತಿಮ್ಮರಡ್ಡಿ ಅಳವಂಡಿ, ಈಶ್ವರಪ್ಪ ರಡ್ಡೇರ ಇದ್ದರು. ಶಿರಹಟ್ಟಿ, ಹರಿಪುರ, ಖಾನಾಪುರ, ಬೆಳ್ಳಟ್ಟಿ, ಮಾಗಡಿ, ಯಳವತ್ತಿ ಗ್ರಾಮದ ಸಮಾಜ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.