ಕೆ.ಆರ್.ಪೇಟೆ: ಕಾಯಕ ತತ್ವದ ಮಹತ್ವವನ್ನು ವಿಶ್ವಕ್ಕೆ ಸಾರುವುದರ ಜತೆಗೆ ವಚನಗಳ ಮೂಲಕ ಸಾಮಾಜಿಕ ಕ್ರಾಂತಿ ಮಾಡಿದ ವಿಶ್ವಜ್ಯೋತಿ ಬಸವಣ್ಣ ಅವರ ಆದರ್ಶಗಳನ್ನು ಯುವಜನರು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು ಎಂದು ವೀರಶೈವ ಮಹಾಸಭಾದ ತಾಲೂಕು ಅಧ್ಯಕ್ಷ ವಿ.ಎಸ್.ಧನಂಜಯಕುಮಾರ್ ಹೇಳಿದರು.
ಪಟ್ಟಣದ ತಾಲೂಕು ಆಡಳಿತ ಕಾರ್ಯಸೌಧದ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ವಿಶ್ವಗುರು ಬಸವಣ್ಣ ಮತ್ತು ಮಹಾ ಸಾಧ್ವಿ ಹೇಮರಡ್ಡಿ ಮಲ್ಲಮ್ಮ ಜಯಂತಿ ಅಂಗವಾಗಿ ಇಬ್ಬರೂ ಮಹನೀಯರ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಸಮ ಸಮಾಜ ನಿರ್ಮಾಣಕ್ಕಾಗಿ ವಚನಗಳ ಮೂಲಕ ಬಸವಣ್ಣ ಕ್ರಾಂತಿ ಮಾಡಿದರು. ಅವರು ನಮಗೆ ನೀಡಿರುವ ಸಂದೇಶ ಸಾರ್ವಕಾಲಿಕ. ಅಲ್ಲದೆ ಮಲ್ಲಮ್ಮ ಅವರು ಸಾಮಾಜಿಕ ಕಟ್ಟು ಪಾಡು ಹಾಗೂ ಮೌಢ್ಯಗಳ ವಿರುದ್ಧ ಹೋರಾಟ ನಡೆಸಿ ಸ್ತ್ರೀ ಸ್ವಾತಂತ್ರೃಕ್ಕೆ ಒತ್ತು ನೀಡಿದರು. ಆ ಮೂಲಕ ಅಕ್ಷರದ ಮಹತ್ವ ಹಾಗೂ ಶಿಕ್ಷಣದ ಶಕ್ತಿಯ ಬಗ್ಗೆ ಜಾಗೃತಿ ಮೂಡಿಸಿದರು ಎಂದು ಸ್ಮರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ತಹಸೀಲ್ದಾರ್ ಲೋಕೇಶ್, ನಾಗರಿಕ ಸಮಾಜದಲ್ಲಿ ಜೀವನ ನಡೆಸುತ್ತಿರುವ ನಾವು ಕಾಯಕಯೋಗಿ ಬಸವಣ್ಣನವರ ಸಂದೇಶಗಳನ್ನು ಕಡ್ಡಾಯವಾಗಿ ಪಾಲಿಸುವ ಮೂಲಕ ಅನ್ಯಾಯ ಅಕ್ರಮಗಳ ವಿರುದ್ಧ ಹೋರಾಟ ನಡೆಸಬೇಕು ಎಂದು ಕರೆ ನೀಡಿದರು.
ವೀರಶೈವ ಮಹಾಸಭಾದ ಮಾಜಿ ತಾಲೂಕು ಅಧ್ಯಕ್ಷ ತೋಟಪ್ಪಶೆಟ್ಟಿ, ಮುಖಂಡರಾದ ಬ್ಯಾಂಕ್ ಪರಮೇಶ್ವರ ಮಾತನಾಡಿದರು. ವೀರಶೈವ ಸಮಾಜದ ಮುಖಂಡರಾದ ಮಾದೇಶ, ವೀರಪ್ಪ, ಸೀಳನೆರೆ ಸತೀಶ್, ಜ್ಞಾನೇಶ್, ರಾಜಶ್ವ ನಿರೀಕ್ಷಕ ಜ್ಞಾನೇಶ್, ಗ್ರಾಮ ಆಡಳಿತಾಧಿಕಾರಿ ಜಗಧೀಶ್, ಪುರಸಭೆಯ ಆರೋಗ್ಯ ಪರಿವೀಕ್ಷಕ ಅಶೋಕ್, ಬಿಸಿಎಂ ಅಧಿಕಾರಿ ವೆಂಕಟೇಶ್ ಇತರರಿದ್ದರು.