ಕಡೂರು ತಾಲೂಕಿನ ಇತಿಹಾಸ ಪ್ರಸಿದ್ಧ ಹೇಮಗಿರಿ ಮಲ್ಲಿಕಾರ್ಜುನ ಸ್ವಾಮಿ ರಥೋತ್ಸವ ವಿಜೃಂಭಣೆಯಿಂದ ಜರುಗಿತು. 
ಜಿಲ್ಲೆ

ಹೇಮಗಿರಿ ಶ್ರೀಮಲ್ಲಿಕಾರ್ಜುನ ಸ್ವಾಮಿ ವಿಜೃಂಭಣೆ ರಥೋತ್ಸವ

ಕಡೂರು: ತಾಲೂಕಿನ ಇತಿಹಾಸ ಪ್ರಸಿದ್ದ ಹೇಮಗಿರಿ ಶ್ರೀ ಮಲ್ಲಿಕಾರ್ಜುನ ಸ್ವಾಮಿ ರಥೋತ್ಸವ ಬುಧವಾರ ವಿಜೃಂಭಣೆಯಿಂದ ನಡೆಯಿತು. ಬೆಳಗ್ಗೆ ಶ್ರೀ ಸ್ವಾಮಿಯವರಿಗೆ ಅಭಿಷೇಕ ಪೂಜಾ ಕಾರ್ಯಕ್ರಮಗಳು ನೆರವೇರಿತು. ಮಧ್ಯಾಹ್ನ ಮೂಲ ನಕ್ಷತ್ರದ ಸಮಯದಲ್ಲಿ ಸ್ವಾಮಿ ರಥದಲ್ಲಿ ಕೂರಿಸಿ ತಾಲೂಕಿನ 12 ಗ್ರಾಮಗಳ ವಕ್ಕಲುಗಳ ಭಕ್ತಾದಿಗಳು ಹಾಗೂ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ರಥವನ್ನು ಎಳೆಯಲಾಯಿತು.
ಆಗಮಿಕರಾದ ತಿಪಟೂರಿನ ವೇದಮೂರ್ತಿ ಮಹೇಶ್ವರಯ್ಯ ಶಾಸಿಗಳು ಮತ್ತು ಜಗದೀಶ್ ಶಾಸಿಗಳು ಧಾರ್ಮಿಕ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಗುರುವಾರ ಬೆಳಗ್ಗೆ ರಥೋತ್ಸವ ನಡೆಯಲಿದೆ. ಈ ಸಂದರ್ಭದಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು ರಥದ ಸುತ್ತ ಪಾನಕದ ಎತ್ತಿನಗಾಡಿಗಳನ್ನು ಓಡಿಸಿ ಸಂಭ್ರಮಪಟ್ಟರು. ದೇವಾಲಯಯಿಂದ ಭಕ್ತಾದಿಗಳಿಗೆ ದಾಸೋಹದ ವ್ಯವಸ್ಥೆ ಕಲ್ಪಿಸಲಾಯಿತು.
ಶಾಸಕ ಕೆ.ಎಸ್.ಆನಂದ್ ರಥೋತ್ಸವದಲ್ಲಿ ಭಾಗವಹಿಸಿ ವಿಶೇಷ ಪೂಜೆ ಸಲ್ಲಿಸಿದರು. ತಹಸೀಲ್ದಾರ್ ಎಂ.ಪಿ.ಕವಿರಾಜ್, ಉಪ ತಹಸೀಲ್ದಾರ್ ಹೇಮಾವತಿ, ದೇವಾಲಯದ ಕನ್ವಿನಿಯರ್ ಕಪನೇಗೌಡರು ಸೇರಿದಂತೆ ಸಮಿತಿ ಪದಾಧಿಕಾರಿಗಳು ಸುತ್ತಮುತ್ತಲಿನ ಗ್ರಾಮಸ್ಥರು ಭಾಗವಹಿಸಿದ್ದರು. ಜಾತ್ರಾ ಮಹೋತ್ಸವದ ಅಂಗವಾಗಿ ಅಂಚೆಚೋಮನಹಳ್ಳಿಯ ಶ್ರೀ ಧರ್ಮಸ್ಥಳ ಪಾದಯಾತ್ರೆ ಸೇವಾ ಸಮಿತಿಯಿಂದ ರಕ್ತದಾನ ಶಿಬಿರ ನಡೆಸಲಾಯಿತು.