ಹೊಳೆನರಸೀಪುರ: ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕಾಗಿ ಉಚಿತ ಪ್ರಾಣಶಕ್ತಿ ಚಿಕಿತ್ಸಾ ಶಿಬಿರವನ್ನು ಡಿ.28ರಂದು ಶನಿವಾರಪೇಟೆ ಮುಖ್ಯ ರಸ್ತೆಯಲ್ಲಿರುವ ಕೊನೇರಿ ಛತ್ರದಲ್ಲಿ ಬೆಳಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ಆಯೋಜಿಸಲಾಗಿದ್ದು, ಸಾರ್ವಜನಿಕರು ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕೆಂದು ಪ್ರಾಣ ಚಿಕಿತ್ಸಾ ತಜ್ಞೆ ಕಾವ್ಯಾ ತಿಳಿಸಿದರು.
ಹೊಳೆನರಸೀಪುರದಲ್ಲಿ ಪ್ರಾಣಶಕ್ತಿ ಚಿಕಿತ್ಸಾ ಶಿಬಿರ ಏರ್ಪಡಿಸಲಾಗಿದೆ. ಜತೆಗೆ ಚಿಕಿತ್ಸಾ ವಿಧಾನಗಳನ್ನು ಕಲಿಯ ಬಯಸುವವರಿಗೆ ಉಚಿತವಾಗಿ ತರಬೇತಿಯನ್ನೂ ನೀಡಲಾಗುತ್ತದೆ. ಬೆಂಗಳೂರಿನಿಂದ 15ಕ್ಕೂ ಹೆಚ್ಚು ಪ್ರಾಣ ಚಿಕಿತ್ಸಾ ತಜ್ಞರು ಆಗಮಿಸಲಿದ್ದು, ಈ ಶಿಬಿರದಲ್ಲಿ ಯಾವುದೇ ಔಷಧವಿಲ್ಲದೆ ಬೆನ್ನು ನೋವು, ಕುತ್ತಿಗೆ ನೋವು, ಸೊಂಟ ನೋವು ಇತ್ಯಾದಿ ನೋವುಗಳಿಗೆ ಚಿಕಿತ್ಸೆ ನೀಡಲಾಗುತ್ತದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ತಲೆ ನೋವು, ಕೆಮ್ಮು, ನೆಗಡಿಯಿಂದ ಮುಕ್ತಿ, ಮೊಣಕಾಲು ನೋವು, ಬಿಗಿತ ನಿವಾರಣೆ ಮತ್ತು ಏಕಾಗ್ರತೆ, ಶಕ್ತಿಯ ಮಟ್ಟದ ವೃದ್ಧಿ, ಮಾನಸಿಕ ನೆಮ್ಮದಿ, ಕೋಪ, ಒತ್ತಡ, ಆತಂಕ ನಿವಾರಣೆ, ಒಳ್ಳೆಯ ನಿದ್ದೆಗಾಗಿ ಪ್ರಾಣಶಕ್ತಿ ಚಿಕಿತ್ಸೆಯನ್ನು ಪರಿಣಾಮಕಾರಿಯಾಗಿ ನೀಡಲಾಗುತ್ತದೆ, ಸಾರ್ವಜನಿಕರು ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಜವಳಿ ಉದ್ಯಮಿ ಎಚ್.ಆರ್.ಅನಂತ್ ಉಪಸ್ಥಿತರಿದ್ದರು.