ಕನಕಪುರ: ರಾಮನಗರ ಜಿಲ್ಲಾದ್ಯಂತ ವಿವಿಧ ಗ್ರಾಮಗಳಲ್ಲಿ ಕಾಡಾನೆ ಹಾವಳಿಯಿಂದ ಸಾವು ನೋವು ಸಂಭವಿಸುತ್ತಿದೆ. ಈ ನಿಟ್ಟಿನಲ್ಲಿ ರೈತರಿಗೆ ಅಗತ್ಯ ಮಾಹಿತಿ, ಮಾರ್ಗದರ್ಶನ ನೀಡಿ, ದೂರು ದುಮ್ಮಾನಗಳನ್ನು ಆಲಿಸಲು ಮುಂದಾಗಿರುವ ಸರ್ಕಾರ, ಸಾತನೂರು ಅರಣ್ಯ ಕಚೇರಿಯಲ್ಲಿ ಸಹಾಯವಾಣಿ ಕೇಂದ್ರ ಆರಂಭಿಸಿದೆ ಎಂದು ಆನೆ ಕಾರ್ಯಪಡೆ ವಲಯ ಅರಣ್ಯಾಧಿಕಾರಿ ಎಸ್. ಆಶಾ ತಿಳಿಸಿದ್ದಾರೆ.
ಕನಕಪುರ ಸೇರಿ ಚನ್ನಪಟ್ಟಣ, ರಾಮನಗರ, ಮಾಗಡಿ ಪ್ರಾದೇಶಿಕ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ಕಾಡಾನೆಗಳಿಂದ ರೈತರು ಬೆಳೆದ ಬೆಳೆ ಹಾನಿ, ಆಸ್ತಿನಷ್ಟ ಹಾಗೂ ಆನೆ ಮತ್ತು ಮಾನವನ ನಡುವಿನ ಸಂಘರ್ಷ ಪ್ರಕರಣಗಳು ಹೆಚ್ಚಾಗಿ ಕಂಡುಬಂದ ಹಿನ್ನೆಲೆಯಲ್ಲಿ ಸರ್ಕಾರವು ಇದರ ನಿಯಂತ್ರಣಕ್ಕಾಗಿ ಕ್ರಮ ಕೈಗೊಳ್ಳಲು ನಾಲ್ಕು ತಾಲೂಕುಗಳ ರೈತರ ಸಮಸ್ಯೆ ನಿವಾರಿಸಲು ಸಾತನೂರನ್ನು ಕೇಂದ್ರವನ್ನಾಗಿ ಮಾಡಿ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಂಡಿದೆ.