ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಜಿಲ್ಲೆಯಲ್ಲಿ ಬೆಳೆ ಹಾನಿ ಪರಿಹಾರದ ಬಗ್ಗೆ ಎಲ್ಲ ರೈತಾಪಿ ಜನರಿಗೆ ಅಗತ್ಯ ಮಾಹಿತಿ ತಲುಪಿಸುವ ಸಲುವಾಗಿ ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿ ಸಹಾಯವಾಣಿ ಆರಂಭಿಸಿರುವ ಜಿಲ್ಲಾಡಳಿತ ರೈತ ಸ್ನೇಹಿ ಕಾರ್ಯಕ್ರಮ ರೂಪಿಸಿದೆ.
ತಾಲೂಕು ಕೇಂದ್ರಗಳಲ್ಲಿ ಸಹಾಯವಾಣಿ ರೂಪಿಸಿ ಸಿಬ್ಬಂದಿ ನಿಯೋಜಿಸುವ ಮೂಲಕ ರೈತರ ನೆರವಿಗೆ ಜಿಲ್ಲಾಡಳಿತ ದಾವಿಸಿದೆ. 2023ನೇ ಸಾಲಿನ ಮುಂಗಾರಿನ ಹಂಗಾಮಿನ ಬರ ಪರಿಸ್ಥಿತಿಯ ಹಿನ್ನಲೆಯಲ್ಲಿ ರೈತರಿಗೆ ಬೆಳೆ ಪರಿಹಾರದ ಮೊದಲನೇ ಕಂತಾಗಿ ಪ್ರತಿ ರೈತರಿಗೆ 2 ಸಾವಿರ ರೂ. ಪಾವತಿಸಲಾಗಿದೆ. ಇದೀಗ ಅರ್ಹತೆಯಂತೆ ಇನ್ನುಳಿದ ಬಾಕಿ ಬೆಳೆಹಾನಿ ಪರಿಹಾರವನ್ನು ಬಿಡುಗಡೆಗೊಳಿಸಲಾಗಿದೆ. ಈ ಪರಿಹಾರ ಹಣವನ್ನು ಅರ್ಹ ಲಾನುಭವಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ಸಹಾಯವಾಣಿ ಮಹತ್ತರ ಪಾತ್ರ ವಹಿಸಲಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಜಿಲ್ಲೆಯಲ್ಲಿ ಬೆಳೆ ಸಮೀಕ್ಷೆ ದತ್ತಾಂಶದ ಮಾಹಿತಿಯ ಆಧಾರದಲ್ಲಿ ಫ್ರೂಟ್ಸ್ ಐಡಿ ಹೊಂದಿರುವ . ಪಹಣಿ ಜೋಡಣೆಯಾಗಿರುವ ರೈತರಿಗೆ ಪರಿಹಾರ ತಂತ್ರಾಂಶದ ಮೂಲಕ ಪರಿಹಾರ ಪಾವತಿಸಲಾಗುತ್ತಿದೆ. ಇದರಿಂದ ಬೆಳೆ ಪರಿಹಾರದ ಕುರಿತು ರೈತರಿಗೆ ಸರ್ಮಪಕ ಮಾಹಿತಿ ತಲುಪಿಸಲು ಜಿಲ್ಲಾಡಳಿತ ಮುಂದಾಗಿದೆ. ಇದಕ್ಕಾಗಿ ಜಿಲ್ಲೆಯ 4 ತಾಲೂಕುಗಳಲ್ಲಿನ ತಹಸೀಲ್ದಾರ್ ಕಚೇರಿ, ಕೃಷಿ ಇಲಾಖೆಗಳಲ್ಲಿ ಸಹಾಯವಾಣಿ ತೆರೆಯಲಾಗಿದೆ.
ದತ್ತಾಂಶಗಳ ದಾಖಲೆ: ಸಹಾಯವಾಣಿಗೆ ಸಂಪರ್ಕಿಸುವ ರೈತರ ವೈಯಕ್ತಿಕ ಮಾಹಿತಿ ಪಡೆದು ವೆಬ್‌ಸೈಟ್‌ನಲ್ಲಿ ಬರ ಪರಿಹಾರ ನೀಡಿರುವ ಕುರಿತು ಮಾಹಿತಿ ನೀಡುವುದು ಸಹಾಯವಾಣಿ ನಿರ್ವಹಣೆ ಸಿಬ್ಬಂದಿ ಕರ್ತವ್ಯವಾಗಿದೆ. ಸರ್ಕಾರ ಬೆಳೆ ಹಾನಿ ಪರಿಹಾರವನ್ನು ಹಂತ ಹಂತವಾಗಿ ನೀಡುತ್ತಿರುವುದರಿಂದ ಬೆಂಗಳೂರು ಭೂಮಿ ಉಸ್ತುವಾರಿ ಕೋಶದ ಎಕ್ಸೆಲ್ ಶೀಟ್‌ನಲ್ಲಿ ರೈತರಿಗೆ ಹಂತವಾಗಿ ಸಲ್ಲಿಸಿರುವ ಮಾಹಿತಿಯಲ್ಲಿನ ಎಫ್‌ಐಡಿ ನಂಬರ್ ಮೂಲಕನ ಬೆಳೆ ಪರಿಹಾರ ಪಾವತಿಯಾಗಿರುವ ಅಥವಾ ಪಾವತಿಯಾಗದಿರುವ ಬಗ್ಗೆ ಮಾಹಿತಿ ನೀಡಲಿದ್ದಾರೆ.
ಸಹಾಯವಾಣಿ ವಿವರ
ಕಚೇರಿಯ ಹೆಸರು ಸಹಾಯವಾಣಿ ಸಂಖ್ಯೆ
ಜಿಲ್ಲಾಧಿಕಾರಿಗಳ ಕಾರ್ಯಾಲಯ 080- 26676143
ದೇವನಹಳ್ಳಿ ತಹಸೀಲ್ದಾರ್ ಕಚೇರಿ 9916975739
ದೇವನಹಳ್ಳಿ ಸಹಾಯಕ ಕೃಷಿ ನಿರ್ದೇಶಕರ ಕಚೇರಿ 080- 27682383
ದೊಡ್ಡಬಳ್ಳಾಪುರ ತಹಸೀಲ್ದಾರ್ ಕಾರ್ಯಾಲಯ 8867586873
ಹೊಸಕೋಟೆ ತಹಸೀಲ್ದಾರ್ ಕಾರ್ಯಾಲಯ 8861869657
ಹೊಸಕೋಟೆ ಸಹಾಯಕ ಕೃಷಿ ನಿರ್ದೇಶಕರ ಕಚೇರಿ 080- 27931235
ನೆಲಮಂಗಲ ತಹಸೀಲ್ದಾರ್ ಕಾರ್ಯಾಲಯ 973135873
ನೆಲಮಂಗಲ ಸಹಾಯಕ ಕೃಷಿ ನಿರ್ದೇಶಕರ ಕಚೇರಿ 8277934015
ನೋಡಲ್ ಅಧಿಕಾರಿ ನೇಮಕ 2023ರಲ್ಲಿ ಮಳೆ ಕೊರತೆ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಸುಮಾರು 40 ಸಾವಿರ ಹೆಕ್ಟೇರ್ ಪ್ರದೇಶದಷ್ಟು ಬೆಳೆ ಹಾನಿಯಾಗಿರುವ ಬಗ್ಗೆ ಅಂದಾಜಿಸಲಾಗಿತ್ತು. ತಡವಾಗಿಯಾದರೂ ಸರ್ಕಾರ ಅರ್ಹತೆಯ ಮೇರೆಗೆ ಬಾಕಿ ಉಳಿದಿದ್ದ ಪರಿಹಾರ ನೀಡಲು ಮುಂದಾಗಿದೆ. ಅದರಲ್ಲಿ ಸೂಕ್ತ ಪರಿಹಾರ ರೈತರಿಗೆ ಸಿಗುವಂತೆ ಮಾಡಲು ಕ್ರಮವಹಿಸಲಾಗುತ್ತಿದೆ. ಜತೆಗೆ ಇದಕ್ಕಾಗಿ ಸಹಾಯವಾಣಿ ತೆರೆಯಲಾಗುತ್ತಿದ್ದು, ಅದರ ಮೇಲುಸ್ತುವಾರಿ ವಹಿಸಲು ಕೃಷಿ ಇಲಾಖೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಪನಿರ್ದೇಶಕರನ್ನು ನೋಡಲ್ ಅಧಿಕಾರಿಯಾಗಿ ನೇಮಿಸಲಾಗಿದೆ.
ಜಿಲ್ಲಾಡಳಿತ ಎಲ್ಲ ರೀತಿಯಿಂದಲೂ ರೈತರ ಬೆನ್ನಿಗೆ ನಿಲ್ಲಲಿದೆ. ಬೆಳೆಹಾನಿ ಪರಿಹಾರದ ಬಗ್ಗೆ ರೈತರಿಗೆ ಸಮರ್ಪಕ ಮಾಹಿತಿ ದೊರಕಿಸಿಕೊಡುವ ನಿಟ್ಟಿನಲ್ಲಿ ಸಹಾಯವಾಣಿ ಪ್ರಾರಂಭಿಸಿದೆ. ಸಹಾಯವಾಣಿ ನಿರ್ವಹಿಸಲು ಸಂಬಂಧಪಟ್ಟ ಸಿಬ್ಬಂದಿ ನಿಯೋಜಿಸಲಾಗಿದೆ. ರೈತರು ಬೆಳೆ ಹಾನಿ ಪರಿಹಾರಕ್ಕೆ ಸಂಬಂಧಪಟ್ಟಂತೆ ಯಾವುದೇ ಮಾಹಿತಿ ಬೇಕಿದ್ದರೂ ಈ ಮೂಲಕ ಸುಲಭವಾಗಿ ತಿಳಿಯಬಹುದಾಗಿದೆ.
ಡಾ.ಎನ್.ಶಿವಶಂಕರ್, ಜಿಲ್ಲಾಕಾರಿ, ಬೆಂಗಳೂರು ಗ್ರಾಮಾಂತರ.