ಬೆಂಗಳೂರು: ಎಲ್ಲರನ್ನೂ ಒಳಗೊಂಡ ಅಭಿವೃದ್ಧಿ ಗುರಿಯೊಂದಿಗೆ ಗ್ರಾಮೀಣ ಬದುಕು ಹಸನನಾಗಿಸುವ, ಅಭಿವೃದ್ಧಿಯಲ್ಲಿ ಪ್ರಾದೇಶಿಕ ಅಸಮತೋಲನ ನಿವಾರಣೆ ಜತೆಗೆ ಆಡಳಿತವನ್ನು ಬೆರಳ ತುದಿಯಲ್ಲೇ ಒದಗಿಸುವ ಅದಮ್ಯ ಹಂಬಲವನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬಿಚ್ಚಿಟ್ಟಿದ್ದಾರೆ.
ಹಳ್ಳಿಗರಿಗೆ ಶುದ್ಧ ಕುಡಿವ ನೀರು ಪೂರೈಸಲು ಉದ್ದೇಶಿತ ‘ಮನೆ ಮನೆಗೆ ಗಂಗೆ’, ಗ್ರಾಮೀಣ ರಸ್ತೆಗಳ ಸುಧಾರಣೆಗೆ ‘ಗ್ರಾಮ ಸುಮಾರ್ಗ’, ಪಂಚಾಯತ್ರಾಜ್ ವ್ಯವಸ್ಥೆ ಬಲವರ್ಧನೆಗೆ ಪಂಚಾಯತ್ರಾಜ್ ಆಯುಕ್ತಾಲಯ ಸ್ಥಾಪನೆ, ಕರ್ನಾಟಕ-1, ಬೆಂಗಳೂರು-1 ಮಾದರಿಯಲ್ಲಿ ಗ್ರಾಮ-1 ಹೀಗೆ ಹೊಸ ಯೋಜನೆಗಳ ಸರಣಿಯನ್ನೇ ಸಿಎಂ ಕಟ್ಟಿಕೊಟ್ಟಿದ್ದಾರೆ.
ಪ್ರಾದೇಶಿಕ ಅಸಮತೋಲನ ನಿವಾರಣೆಗೆ ವಿಶೇಷ ಅಭಿವೃದ್ದಿ ಯೋಜನೆ ಮುಂದುವರಿಸಿ, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಗೆ ಎಂದಿನಂತೆ ಅನುದಾನ ಕಾದಿಟ್ಟಿದ್ದಾರೆ. ಅಲ್ಲದೆ, ಬಹು ನಿರೀಕ್ಷೆ ಇಟ್ಟುಕೊಂಡು ಹೊಸದಾಗಿ ಹುಟ್ಟುಹಾಕಿದ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಮತ್ತು ಸಾಂಸ್ಕೃತಿಕ ಸಂಘಕ್ಕೆ 500 ಕೋಟಿ ರೂ. ಅನುದಾನ ಘೋಷಿಸಿದ್ದಾರೆ.
ಮನೆ ಮನೆಗೆ ಗಂಗೆ: ಮನೆಗೆ ನಲ್ಲಿ (ಕೊಳಾಯಿ) ಮೂಲಕ ಶುದ್ಧ ಕುಡಿವ ನೀರು ಪಡೆಯಬೇಕೆಂಬ ಹಳ್ಳಿಗರ ಕನಸು ನನಸಾಗಿಸುವತ್ತ ಬಿಎಸ್ವೈ ಗಮನಹರಿಸಿದ್ದು, ‘ಮನೆ ಮನೆಗೆ ಗಂಗೆ’ ಎಂಬ ನೂತನ ಯೋಜನೆಯಲ್ಲಿ 2020-21ನೇ ಸಾಲಿನಲ್ಲಿ 10 ಲಕ್ಷ ಮನೆಗಳಿಗೆ ನೀರಿನ ಸಂಪರ್ಕ ಕಲ್ಪಿಸಲು ಉದ್ದೇಶಿಸಿದ್ದು, ಕೇಂದ್ರ ಸರ್ಕಾರದ ‘ಜಲ ಜೀವನ್ ಮಿಷನ್’ ಹಾಗೂ ರಾಜ್ಯದ ಸಂಪನ್ಮೂಲಗಳನ್ನು ಬಳಸಿಕೊಂಡು ಪ್ರತಿ ಮನೆಗೆ ಕುಡಿವ ನೀರಿನ ಸಂಪರ್ಕವನ್ನು ಮುಂದಿನ 4 ವರ್ಷಗಳಲ್ಲಿ ಕಲ್ಪಿಸಲಾಗುತ್ತಿದೆ.
ಸಮಗ್ರ ನೀತಿ
ಗ್ರಾಮೀಣ ಹಾಗೂ ನಗರ ಪ್ರದೇಶಗಳಿಗೆ ಶುದ್ಧ ಕುಡಿವ ನೀರು ಸರಬರಾಜಿನ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ, ಸಮಗ್ರ ನೀತಿ ರೂಪಿಸಲು ನಿರ್ಧರಿಸಿದ್ದಾರೆ. ಗ್ರಾಮೀಣ ಮತ್ತು ನಗರ ಪ್ರದೇಶಗಳಿಗೆ ನೀರಿನ ಪೂರೈಕೆ ಸಮನ್ವಯತೆ ಸಾಧಿಸುವುದು ಹಾಗೂ ಸಂಬಂಧಿಸಿದ ಇಲಾಖೆ ಮತ್ತು ಸಂಸ್ಥೆಗಳನ್ನು ಒಂದೇ ಸಚಿವಾಲಯದಡಿ ತರುವುದು ಸಮಗ್ರ ನೀತಿಯ ತಿರುಳಾಗಿದೆ.
ಸಾರ್ವಜನಿಕ ಸೇವೆಗಳಿಗೆ ಬೃಹತ್ ಮೊತ್ತ
ಆಡಳಿತ ಸುಧಾರಣೆ ಮತ್ತು ಸಾರ್ವಜನಿಕ ಸೇವೆ ವಲಯಕ್ಕೆ 10,194 ಕೋಟಿ ರೂ.ಗಳನ್ನು ಬಿಎಸ್ವೈ ಕಾದಿರಿಸಿದ್ದು, ಬೆಂಗಳೂರಿನ ಆಯ್ದ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತಂದಿದ್ದ ‘ಜನ ಸೇವಕ’ ರಾಜ್ಯವ್ಯಾಪಿ ವಿಸ್ತರಿಸಬೇಕೆಂಬ ಒತ್ತಡಗಳಿಗೆ ಸ್ಪಂದಿಸಿ, ರಾಜ್ಯದ ಎಲ್ಲ ಮಹಾನಗರ ಪಾಲಿಕೆಗಳಿಗೆ ಸಾರ್ವಜನಿಕ, ಖಾಸಗಿ ಸಹಭಾಗಿತ್ವ ಮಾದರಿಯ ಸೇವಾ ವೆಚ್ಚದಲ್ಲಿ ‘ಜನ ಸೇವಕ’ ವಿಸ್ತರಿಸಿದ್ದಾರೆ.
ಜ್ಯೋತಿ ಸಂಜೀವಿನಿ ಪರಿಷ್ಕರಣೆ: ಸರ್ಕಾರಿ ನೌಕರರು ಮತ್ತು ಅವಲಂಬಿತರಿಗೆ ಶಸ್ತ್ರಚಿಕಿತ್ಸಾ ವಿಧಾನಗಳಿಗೆ ನಗದುರಹಿತ ಚಿಕಿತ್ಸೆ ಸೌಲಭ್ಯ ಪ್ರಕಟಿಸಿದ್ದು, 22.5 ಲಕ್ಷ ರಾಜ್ಯ ಸರ್ಕಾರಿ ನೌಕರರು ಇದರ ಪ್ರಯೋಜನ ಪಡೆಯಲಿದ್ದು, ವಾರ್ಷಿಕ 50 ಕೋಟಿ ರೂ. ವೆಚ್ಚ ಅಂದಾಜಿಸಲಾಗಿದೆ.