ಮಹಾಲಿಂಗಪುರ: ಒಂದು ದೇಶ ಮುಂದುವರಿಯಬೇಕಾದರೆ ಔದ್ಯಮೀಕರಣವಾಗಬೇಕು. ಉದ್ದಿಮೆ ಸ್ಥಾಪನೆಯಾದರೆ ಅಲ್ಲಿ ಹೊಸ ವಸ್ತುಗಳು ಉತ್ಪಾದನೆಯಾಗುತ್ತವೆ. ವಸ್ತುಗಳಿಗೆ ಒಳ್ಳೆಯ ಬೆಲೆ, ಉದ್ದೋಗಾವಕಾಶ ದೊರೆಯುವುದರಿಂದ ಜನತೆಯ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ ಎಂದು ಗೋದಾವರಿ ಬಯೋರಿಫೈನರೀಜ್ ಮುಖ್ಯ ತಾಂತ್ರಿಕ ಅಧಿಕಾರಿ ದಿನೇಶ ಶರ್ಮಾ ಹೇಳಿದರು.
ಇಲ್ಲಿಗೆ ಸಮೀಪದ ಸೈದಾಪುರ-ಸಮೀರವಾಡಿಯ ಗೋದಾವರಿ ಬಯೋರಿಫೈನರೀಜ್‌ನಲ್ಲಿ ಗುರುವಾರ ಆಯೋಜಿಸಿದ್ದ ‘ಹೆಲ್ಪ್ ಎ ಚೈಲ್ಡ್ ಟು ಸ್ಟಡಿ ಯೋಜನೆಯಡಿ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಶಿಷ್ಯವೇತನ, ಲ್ಯಾಪಟಾಪ್, ಪಠ್ಯಪುಸ್ತಕ ವಿತರಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗೋದಾವರಿ ಕಾರ್ಖಾನೆ ತಾನು ಬೆಳೆಯುವ ಜೊತೆಗೆ ಸಮಾಜಕ್ಕೆ ತನ್ನದೆ ಆದ ಕೊಡುಗೆ ನೀಡುತ್ತಿದೆ. ಕಾರ್ಖಾನೆ ಮಾಲೀಕರು ಹಾಗೂ ವ್ಯವಸ್ಥಾಪಕ ನಿರ್ದೇಶಕ ಸಮೀರಭಾಯಿ ಸೋಮೈಯಾ ಹಾಗೂ ಅಮೃತಾ ಬೆನ್ ಸೋಮೈಯಾ ಅವರು ತುಂಬ ಆಸಕ್ತಿಯಿಂದ ಈ ಕಾರ್ಯಕ್ರಮ ತಮ್ಮ ಹೃದಯಕ್ಕೆ ಹತ್ತಿರವಾಗಿ ನೋಡುತ್ತಿರುತ್ತಾರೆ. ಅವರು ವಿದ್ಯೆಯ ಪ್ರಾಮುಖ್ಯತೆ ಅರಿತು ಇಲ್ಲಿಗೆ ಭೇಟಿ ನೀಡಿದಾಗ ಮೊದಲು ಕಾರ್ಖಾನೆ ವತಿಯಿಂದ ಸ್ಥಾಪಿಸಲಾದ ಶಾಲೆಗೆ ಭೇಟಿ ನೀಡುತ್ತಾರೆ. 24 ವರ್ಷಗಳ ಹಿಂದೆ ಪ್ರಾರಂಭಿಸಲಾದ ಈ ಯೋಜನೆಯ ಸದುಪಯೋಗಪಡಿಸಿಕೊಂಡು ವಿದ್ಯಾರ್ಥಿಗಳು ಈಗ ದೇಶ ವಿದೇಶದಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದು ಅವರೂ ಈ ಯೋಜನೆಯಡಿ ಮುಂಬರುವ ಫಲಾನುಭವಿಗಳಿಗೆ ಸಹಾಯ ಮಾಡಿ ಇನ್ನೊಬ್ಬರ ಮನೆ ದೀಪ ಹಚ್ಚು ಕೆಲಸ ಮಾಡಲಿ ಎಂದರು.
ಹೆಲ್ಫ್ ಎ ಚೈಲ್ಡ್ ಟು ಸ್ಟಡಿ ಯೋಜನೆಯ ಡಿಜಿಎಂ ವಿಜಯಕುಮಾರ ಕಣವಿ ಮಾತನಾಡಿ, ಇದುವರೆಗೆ 11 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ 8 ಕೋಟಿ ರೂ. ಶಿಷ್ಯವೇತನ ನೀಡಲಾಗಿದೆ. ಈಗ 662 ವಿದ್ಯಾರ್ಥಿಗಳಿಗೆ 54.41 ರೂಗಳಿಗೂ ಅಧಿಕ ಹಣವನ್ನು ಶಿಷ್ಯವೇತನ, ಲ್ಯಾಪ್ ಟಾಪ್ ಹಾಗೂ ಪಠ್ಯಪುಸ್ತಕ ರೂಪದಲ್ಲಿ ವಿತರಿಸಲಾಗುತ್ತದೆಯಲ್ಲದೆ, ವ್ಯಕ್ತಿತ್ವ ವಿಕಸನ ಶಿಬಿರಗಳನ್ನು ನಡೆಸಲಾಗುತ್ತಿದೆ. ನಾವು ಪ್ರತಿವರ್ಷವೂ ಅವರ ವಿದ್ಯಾಭ್ಯಾಸ ಮುಗಿಯುವವರೆಗೆ ಸಹಾಯ ಮಾಡುತ್ತಲೇ ಇರುತ್ತೇವೆ ಎಂದರು.
ಕಾರ್ಖಾನೆಯ ತಾಂತ್ರಿಕ ವಿಭಾಗದ ಜನರಲ್ ಮ್ಯಾನೇಜರ್ ವಿ.ಕೆ. ಕಿಲಾರಿ ಇತರರಿದ್ದರು.
ಕಾರ್ಖಾನೆಯ ವಿವಿಧ ವಿಭಾಗದ ಅಧಿಕಾರಿಗಳಾದ ಎಂ. ಚಾವುಸ್, ಡಾ.ಆರ್.ಎಸ್. ಶೆಟ್ಟರ್, ಸೋಮಶೇಖರ ಪೇಟಿಮನಿ, ಕೃಷ್ಣಾ ಗೌಡರ, ಶ್ವೇತಾ ಜಾಧವ, ರಾಮಚಂದ್ರ ಸೋನವಾಲಕರ, ಆನಂದ ಕೊಟಬಾಗಿ, ಸಂಜು ಬ್ಯಾಳಿ ಇತರರಿದ್ದರು.
ಪೂಜಾ ಗೋರಬಾಳ ಸ್ವಾಗತಿಸಿದರು. ರೇಖಾ ಮಠಪತಿ ವಂದಿಸಿದರು.
ನಾವು ಬಾಡಿಗೆ ಮನೆಯಲ್ಲಿ ಇದ್ದೇವೆ. ನಾನು ಶಾಲೆ ಕಲಿಯುವಷ್ಟು ಆರ್ಥಿಕ ಸ್ಥತಿ ನಮ್ಮ ಕುಟುಂದಲ್ಲಿಲ್ಲ. ಗೋದಾವರಿ ಕಾರ್ಖಾನೆಯವರು ನೀಡುವ ಶಿಷ್ಯವೇತನದಿಂದ ನಾನು ವಿದ್ಯಾಭ್ಯಾಸ ಮುಂದುವರಿಸಿದ್ದೇನೆ. ಇಲ್ಲದಿದ್ದರೆ ವಿದ್ಯೆ ನನಗೆ ಗಗನಕುಸುಮವಾಗುತ್ತಿತ್ತು. ಅದಕ್ಕಾಗಿ ಕಾರ್ಖಾನೆಗೆ ನಾನು ಋಣಿಯಾಗಿರುವೆ.
ಫಲಾನುಭವಿ ವಿದ್ಯಾರ್ಥಿನಿ.