ಮಡಿಕೇರಿ: ಕೊಡವ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಎಲ್ಲರೂ ಸಹಕರಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಶಾಂತೆಯಂಡ ವೀಣಾ ಅಚ್ಚಯ್ಯ ಮನವಿ ಮಾಡಿದರು.
ಮಕ್ಕಂದೂರು ಕೊಡವ ಸಮಾಜದಲ್ಲಿ ಸೋಮವಾರ ಆಯೋಜಿಸಿದ್ದ ಸಮಾಜದ 2019-20ನೇ ಸಾಲಿನ ಮಹಾಸಭೆ ಮತ್ತು ಪುತ್ತರಿ ಊರೊರ್ಮೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಮುಂದಿನ ಯುವಪೀಳಿಗೆಗಾಗಿ ಕೊಡವ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಅನಿವಾರ್ಯತೆ ಎದುರಾಗಿದೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು.
ಸತತ ನಾಲ್ಕು ಬಾರಿ ಗಟ್ಟಿಮಂದ್ ಪ್ರಶಸ್ತಿ ಹಾಗೂ ಬಾಳುಗೋಡುವಿನಲ್ಲಿ ಆಯೋಜಿಸಿದ್ದ ಕೊಡವ ನಮ್ಮೆಯಲ್ಲಿ ಅಧಿಕ ಬಹುಮಾನ ಪಡೆದ ವ್ಯಾಲಿ ಡ್ಯೂ ಕಲ್ಚರಲ್ ಅಸೋಸಿಯೇಷನ್‌ನ ಸ್ಥಾಪಕ ಅಧ್ಯಕ್ಷ ಹಂಚೆಟ್ಟಿರ ಮನು ಮುದ್ದಪ್ಪ ಹಾಗೂ ಸದಸ್ಯರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು. ನಂತರ ನಡೆದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಗಮನ ಸೆಳೆಯಿತು.
ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆಯಾದ ಕೊಡಗ್‌ರ ಸಿಪಾಯಿ ಚಲನಚಿತ್ರವನ್ನು ಪ್ರದರ್ಶಿಸಲಾಯಿತು. ಕೊಡವ ಸಮಾಜದ ಅಧ್ಯಕ್ಷ ನಾಪಂಡ ರವಿಕಾಳಪ್ಪರವರ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಕ್ಕಂದೂರು ಕೊಡವ ಸಮಾಜದ ಮಾಜಿ ಅಧ್ಯಕ್ಷ ಶಾಂತೆಯಂಡ ಅಚ್ಚಯ್ಯ, ದಾನಿಗಳದ ಪಡಿಎಟ್ಟಿರ ಉತ್ತಯ್ಯ, ಕಾರ್ಯದರ್ಶಿ ವಿಶು ಪೆಮ್ಮಯ್ಯ, ಖಜಾಂಚಿ ತಂಬುಕುತ್ತಿರ ಮನು ಮಂದಣ್ಣ ಹಾಗೂ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.