ಅಣ್ಣೂರು ಮತ್ತು ಮೆಣಸಗೆರೆ ಗ್ರಾಮಗಳ ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಬೆಂಗಳೂರು ಬಸವನಗುಡಿ ರೋಟರಿ ಸಂಸ್ಥೆಯ ವತಿಯಿಂದ ಉಚಿತವಾಗಿ ಶೂಗಳನ್ನು ವಿತರಣೆ ಮಾಡಿದರು.  
ಜಿಲ್ಲೆ

ಸರ್ಕಾರಿ ಶಾಲಾ ಉಳಿವಿಗೆ ಸಂಘ, ಸಂಸ್ಥೆಗಳ ನೆರವು ಅಗತ್ಯ

ಕೆ.ಎಂ.ದೊಡ್ಡಿ: ಸರ್ಕಾರಿ ಶಾಲಾ ಮಕ್ಕಳ ವಿದ್ಯಾಭ್ಯಾಸಕ್ಕೆ ಸರ್ಕಾರ ಜತೆಗೆ ಸಂಘ-ಸಂಸ್ಥೆಗಳ ನೆರವು ಅತ್ಯಗತ್ಯವಾಗಿದೆ ಎಂದು ಬೆಂಗಳೂರು ಬಸವನಗುಡಿ ರೋಟರಿ ಸಂಸ್ಥೆಯ ಅಧ್ಯಕ್ಷೆ ಆಶಾ ರಾಜೇಶ್ ಅಭಿಪ್ರಾಯಪಟ್ಟರು.

ಸಮೀಪದ ಅಣ್ಣೂರು ಮತ್ತು ಮೆಣಸಗೆರೆ ಗ್ರಾಮಗಳ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಬೆಂಗಳೂರು ಬಸವನಗುಡಿ ರೋಟರಿ ಸಂಸ್ಥೆ ವತಿಯಿಂದ ಉಚಿತವಾಗಿ ಶೂಗಳನ್ನು ವಿತರಣೆ ಮಾಡಿ ಮಾತನಾಡಿದರು. ಗ್ರಾಮೀಣ ಪ್ರದೇಶಗಳಲ್ಲಿ ಸರ್ಕಾರಿ ಶಾಲೆಗಳನ್ನು ಉಳಿಸಿ, ಬೆಳೆಸಲು ರೋಟರಿ ಸೇವಾ ಸಂಸ್ಥೆಯೂ ವಿವಿಧ ಕ್ಷೇತ್ರಗಳಲ್ಲಿ ಆರ್ಥಿಕವಾಗಿ ಪ್ರಬಲ ಹೊಂದಿರುವ ದಾನಿಗಳ ಜತೆಗೂಡಿ ಸೇವೆ ನೀಡುತ್ತಿದೇವೆ ಎಂದರು.

ಗ್ರಾಮೀಣ ಭಾಗದಲ್ಲಿ ಶೈಕ್ಷಣಿಕವಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ರೋಟರಿ ಸಂಸ್ಥೆ ವತಿಯಿಂದ ಶಾಲಾ ಮಕ್ಕಳಿಗೆ ಉಚಿತ ಶೂಗಳ ವಿತರಣೆ, ಪರಿಸರ ಕಾಳಜಿಯಿಂದ ಟೊಯೊಟೊ ಸಂಸ್ಥೆಯ ಪ್ರೋಗ್ರಾಮ್ ಲೀಡರ್ ಅಣ್ಣೂರು ಚಂದ್ರೇಶ್ ಪಟೇಲ್ ಅವರ ಜತೆಗೂಡಿ ಸುಮಾರು 200 ಸಸಿಗಳನ್ನು ನೆಡುವ ಕಾರ್ಯಕ್ಕೆ ಚಾಲನೆ ನೀಡಿದ್ದೇವೆ ಎಂದರು.

ಮೊದಲನೆ ಹಂತದಲ್ಲಿ ಎರಡು ಶಾಲೆಗಳಲ್ಲಿ ಶಾಲಾ ಮಕ್ಕಳಿಗೆ ಉಚಿತವಾಗಿ ಶೂಗಳನ್ನು ವಿತರಣೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಶಾಲಾ ಪರಿಕರಗಳು, ಸಾಮಗ್ರಿಗಳನ್ನು ನೀಡಿ ಶಾಲೆಗಳ ಅಭಿವೃದ್ಧಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಲಾಗುವುದು ಎಂದು ತಿಳಿಸಿದರು.

ಬೆಂಗಳೂರು ಬಸವನಗುಡಿ ರೋಟರಿ ಸಂಸ್ಥೆ ಎರೆಮಾಳ(ಬೋರೆ) ಗ್ರಾಮವನ್ನು ದತ್ತು ಪಡೆದು ಗ್ರಾಮಕ್ಕೆ ಅಗತ್ಯವಿರುವ ಸರ್ಕಾರಿ ಅಭಿವೃದ್ಧಿ ಕಾರ್ಯಗಳನ್ನು ಹೊರತುಪಡಿಸಿ ಇನ್ನುಳಿದ ಸೇವಾಗಳಾದ ಆರೋಗ್ಯ, ಸ್ವಚ್ಛತೆ, ಶಿಕ್ಷಣ, ಪರಿಸರ ಸಂರಕ್ಷಣೆಯಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಆರೋಗ್ಯ ತಪಾಸಣಾ ಶಿಬಿರ, ರಕ್ತದಾನ ಶಿಬಿರಗಳನ್ನು ಆಯೋಜಿಸಿ ಆರೋಗ್ಯದ ಬಗ್ಗೆ ಹೆಚ್ಚಿನ ಅರಿವನ್ನು ಮೂಡಿಸಲಾಗುವುದು ಜತೆಗೆ ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಸ್ಥಳೀಯ ಸಂಘ, ಸಂಸ್ಥೆಗಳು ಹಾಗೂ ಜನಪ್ರತಿನಿಧಿಗಳ ಜತೆಗೂಡಿ ಅಭಿವೃದ್ಧಿಪಡಿಸಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರೋಟರಿ ಸಂಸ್ಥೆಯ ಅಸಿಸ್ಟೆಂಟ್ ಪ್ರಾಂತಪಾಲ ಅಣ್ಣೂರು ಚಂದ್ರೇಶ್ ಪಟೇಲ್, ರೋಟರಿ ಕಾರ್ಯದರ್ಶಿ ರಾಜಶೇಖರ್, ಮುಖ್ಯಶಿಕ್ಷಕರಾದ ಸಿದ್ದೇಗೌಡ, ನಂದಿನಿ ಮೆಣಸಗೆರೆ ಗ್ರಾಪಂ ಪಿಡಿಒ ಸತೀಶ್, ಗ್ರಾ.ಪಂ. ಮಾಜಿ ಅಧ್ಯಕ್ಷ ಮಹದೇವು ಸೇರಿದಂತೆ ಹಲವರು ಉಪಸ್ಥಿತರಿದ್ದರು.