ಜಿಲ್ಲೆ

ಸಹಾಯವಾಣಿ ಸಿಬ್ಬಂದಿಗೆ ಸಿಕ್ಕಿಲ್ಲ ವೇತನ, ಹಿರಿಯ ನಾಗರಿಕರಿಗೆ ನೆರವಾಗುವವರಿಗೇ ಕಷ್ಟದ ದಿನಗಳು!

Udupi

ಉಡುಪಿ: ಮಕ್ಕಳಿಂದ ಅನ್ಯಾಯ, ಆಸ್ತಿ ಸಂಬಂಧಿ ಗಲಾಟೆ, ಆರೋಗ್ಯ ಸಮಸ್ಯೆ, ಸರ್ಕಾರದ ಸೌಲಭ್ಯಗಳು ಸೇರಿದಂತೆ ಹಿರಿಯ ನಾಗರಿಕರಿಗೆ ಹಲವು ರೀತಿಯಲ್ಲಿ ನೆರವು ನೀಡುವ ಸಹಾಯವಾಣಿ ಸಿಬ್ಬಂದಿಯೇ ಈಗ ಕಷ್ಟದ ದಿನಗಳನ್ನು ಎದುರಿಸುವಂತಾಗಿದೆ. ಹಿರಿಯರಿಗೆ ನೆರವಾಗುವ ನಿಟ್ಟಿನಲ್ಲಿ ಆರಂಭಿಸಲಾದ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರದಲ್ಲಿ ಕರ್ತವ್ಯದಲ್ಲಿರುವ ಸಿಬ್ಬಂದಿಗೆ ವೇತನವೇ ಬಿಡುಗಡೆಯಾಗಿಲ್ಲ.

ಜಿಲ್ಲಾ ಹಿರಿಯ ನಾಗರಿಕರ ಹಾಗೂ ವಿಕಲಚೇತನರ ಸಬಲೀಕರಣ ಇಲಾಖೆಯಡಿ 2014ರಲ್ಲಿ ಆರಂಭಗೊಡ ಜಿಲ್ಲಾ ಹಿರಿಯ ನಾಗರಿಕರ ಸಹಾಯವಾಣಿ(0820- 2523294)ಯನ್ನು ಜಿಲ್ಲಾ ಮಹಿಳಾ ಮಂಡಳಿಗಳ ಒಕ್ಕೂಟ ನಡೆಸಿಕೊಂಡು ಬರುತ್ತಿದೆ. ತಿಂಗಳಿಗೆ ಸರಾಸರಿ 100- 150 ದೂರುಗಳು ಬರುತ್ತಿದ್ದು, ಸದ್ಯ ಇಲ್ಲಿ ಮೂವರು ಆಪ್ತ ಸಮಾಲೋಚಕರು, ಒಬ್ಬರು ಮೇಲುಸ್ತುವಾರಿ, ಒಬ್ಬರು ಸಂಯೋಜಕರು ಕಾರ್ಯನಿರ್ವಹಿಸುತ್ತಿದ್ದಾರೆ.

622 ಪ್ರಕರಣ ಇತ್ಯರ್ಥ: ಇಲ್ಲಿವರೆಗೆ ಸಹಾಯವಾಣಿಯಲ್ಲಿ ದಾಖಲಾದ 650 ಪ್ರಕರಣಗಳಲ್ಲಿ 622ನ್ನು ಇತ್ಯರ್ಥ ಪಡಿಸಲಾಗಿದೆ. ಒಟ್ಟು 11,000 ಹಿರಿಯ ನಾಗರಿಕರ ದೂರವಾಣಿ ಕರೆ ಸ್ವೀಕರಿಸಿ ಉಚಿತ ಕಾನೂನು ಸಲಹೆ, ಸಮಾಲೋಚನೆ, ವೈದ್ಯಕೀಯ ಸೇವೆಗಳನ್ನು ನೀಡಲಾಗಿದೆ. ಅನಾಥರು ಹಾಗೂ ನಿರ್ಗತಿಕ ಹಿರಿಯರಿಗೆ ವೃದ್ಧಾಶ್ರಮದ ಮೂಲಕ ಅಥವಾ ಮನೆಯವರನ್ನು ಹುಡುಕಿ ಆಶ್ರಯ ಒದಗಿಸಲಾಗಿದೆ.

ಒಂಬತ್ತು ತಿಂಗಳ ವೇತನ ಇಲ್ಲದೆ ಕಷ್ಟ: ಒಂಬತ್ತು ತಿಂಗಳಿಂದ ಸಹಾಯವಾಣಿ ಕೇಂದ್ರದ ಸಿಬ್ಬಂದಿಗೆ ವೇತನ ನೀಡಲು ಅನುದಾನದ ಕೊರತೆ ಇದೆ. ದಿನದ 24 ಗಂಟೆ ಹಿರಿಯರ ಸೇವೆಗಾಗಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೆ ಜೀವನ ನಡೆಸುವುದೇ ಕಷ್ಟ ಎಂಬಂತಾಗಿದೆ. ಲಾಕ್‌ಡೌನ್ ಸಂದರ್ಭದಲ್ಲೂ ಇಲ್ಲಿನ ಸಿಬ್ಬಂದಿ ಕರ್ತವ್ಯ ನಿರ್ವಹಿಸಿ, ಹಿರಿಯ ನಾಗರಿಕರ ಸಮಸ್ಯೆಗೆ ಪರಿಹಾರ ಹಾಗೂ ವಿವಿಧ ಸೌಲಭ್ಯಗಳ ಮಾಹಿತಿ ನೀಡುವ ಕೆಲಸ ಮಾಡಿದ್ದಾರೆ ಎಂದು ಒಕ್ಕೂಟದ ಅಧ್ಯಕ್ಷೆ ಸರಳಾ ಕಾಂಚನ್ ತಿಳಿಸಿದ್ದಾರೆ.

ಹಿರಿಯ ನಾಗರಿಕರ ಸಹಾಯವಾಣಿಗೆ ಮಾರ್ಚ್ ತಿಂಗಳವರೆಗಿನ ಅನುದಾನ ಬಿಡುಗಡೆಯಾಗಿದೆ. ಸಂಬಂಧಪಟ್ಟವರು ಸರಿಯಾದ ದಾಖಲೆ ಸಲ್ಲಿಕೆ ಮಾಡದೆ ಇರುವುದರಿಂದ ಈ ಅನುದಾನ ಹಿಂದಕ್ಕೆ ಹೋಗಿದೆ. ಈ ನಿಟ್ಟಿನಲ್ಲಿ ಅನುದಾನ ವಾಪಸ್ ಪಡೆಯುವ ಪ್ರಯತ್ನ ಮುಂದುವರಿದಿದೆ. - ಚಂದ್ರ ನಾಯ್ಕ, ಅಧಿಕಾರಿ, ಹಿರಿಯ ನಾಗರಿಕರು ಮತ್ತು ವಿಕಲಚೇತನರ ಕಲ್ಯಾಣ ಇಲಾಖೆ