ಮಂಡ್ಯ: ಸತ್ತವರನ್ನ ನೆನಸಿಕೊಂಡು ಅಳುವುದು ಬೇಡ. ಬದಲಿಗೆ ಅವರ ಹೆಸರಿನಲ್ಲಿ ಉತ್ತಮ ಕೆಲಸಗಳನ್ನು ಮತ್ತು ಸಮಾಜ ಮೆಚ್ಚುವ ಕಾರ್ಯಗಳನ್ನು ಮಾಡಬೇಕು ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಸಲಹೆ ನೀಡಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಇಂಡುವಾಳು ಎನ್.ಶಂಕರೇಗೌಡ ಚಾರಿಟಬಲ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಗುರುವಂದನೆ, ಅಭಿನಂದನೆ ಹಾಗೂ ಹೆಲ್ಮೆಟ್ ವಿತರಣೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಸಮಾಜಕ್ಕೆ ಸೇವೆ ಮಾಡಬೇಕೆನ್ನುವ ಕಾರ್ಯಕ್ರಮದಲ್ಲಿ ಜನರು ಕಿಕ್ಕಿರಿದು ಶಿಸ್ತಿನಿಂದ ಕುಳಿತಿದ್ದೀರಾ. ಸಾಮಾನ್ಯ ಜ್ಞಾನ ಇರುವ ಯಾವುದೇ ವ್ಯಕ್ತಿಯಾಗಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕೊಡುಗೆ ನೆನಸಿಕೊಳ್ಳುತ್ತಾರೆ. ಅಂತಹ ಕಾರ್ಯಕ್ರಮಗಳಲ್ಲಿ ಇದು ಒಂದಾಗಿದೆ ಎಂದು ಶ್ಲಾಘಿಸಿದರು.
ಇಂಡುವಾಳು ಸಚ್ಚಿದಾನಂದ ಅವರು ಶ್ರೀಮಠಕ್ಕೆ ಸೇವೆಯನ್ನು ನಿರಂತರವಾಗಿ ಮಾಡುತ್ತಿದ್ದಾರೆ. ಹೆಲ್ಮೆಟ್ ಹಾಕದೇ ಹೆಣ್ಣು ಮಗುವಿನ ಜೀವ ಹೋದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ದೊಡ್ಡ ಸೇವೆಯ ನೆಪದಲ್ಲಿ ಸತ್ತ ತಂದೆಯ ಹೆಸರಿನಲ್ಲಿ ಕೆಲಸ ಮಾಡುತ್ತಿರುವುದು ಉತ್ತಮವಾಗಿದೆ ಎಂದು ಹೇಳಿದರು.
ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಮಾತನಾಡಿ, ಸಮಾಜದಲ್ಲಿ ಮಾಡಿರುವ ಒಳ್ಳೆಯ ಕೆಲಸ ಮಾತ್ರ ಉಳಿಯುತ್ತದೆ. ರಾಜಕಾಣರದಲ್ಲಿ ಅಧಿಕಾರ ಸಿಕ್ಕಿದೆ ಎನ್ನುವುದನ್ನ ತಲೆಗೇರಿಸಿಕೊಂಡರೆ ಜನರು ದೋಸೆ ಮಗುಚಿದಾಗೆ ಮಾಡಿ ಅಧಿಕಾರದಿಂದ ಇಳಿಸಿ ಬಿಡುತ್ತಾರೆ. ಇಂಡುವಾಳು ಸಚ್ಚಿದಾನಂದ ಅವರು ಜನಪ್ರಿಯ ಕಾರ್ಯಕ್ರಮಗಳನ್ನು ಅವರ ತಂದೆ ಎನ್.ಶಂಕರೇಗೌಡ ಹೆಸರಿನಲ್ಲಿ ಮಾಡುವ ಮೂಲಕ ಈಗ ಸುಮಾರು ಹತ್ತು ಸಾವಿರ ಹೆಲ್ಮೆಟ್ ನೀಡುತ್ತಿದ್ದಾರೆ. ಇದೇ ರೀತಿ ಕೆಲಸಗಳನ್ನು ಮಾಡಿ ಮುಂದಿನ ದಿನಗಳಲ್ಲಿ ಉತ್ತಮ ನಾಯಕರಾಗಿ ಬೆಳೆದು ಜನಸೇವೆಯಲ್ಲಿ ತೊಡಗಲಿ ಎಂದು ಆರೈಸಿದರು.
ಮಂಡ್ಯ ಜಿಲ್ಲೆಯ ಜನರು ಎಲ್ಲರನ್ನೂ ಒಂದೇ ಸಮನಾಗಿ ನೋಡುತ್ತಾರೆ. ಶಾಸಕರಾಗಿ ಎರಡು ಬಾರಿ ಗೆದ್ದಿರುವವರನ್ನೇ ಚುನಾವಣೆಯಲ್ಲಿ ಸೋಲಿಸಿ ಬಿಡುತ್ತಾರೆ. ಇನ್ನು ಒಂದು ಬಾರಿ ಗೆಲುವು ಪಡೆದ ಮಾತ್ರಕ್ಕೆ ಮುಂದೆನೂ ನಾನೆ ಗೆಲ್ಲುತ್ತೇನೆ ಎನ್ನುವುದನ್ನು ಬಿಟ್ಟು, ಊರು ತುಂಬಾ ನಾನೆ ಎಂದು ಹೋಡಾಡಿಕೊಂಡು ತಿರುಗಾಡದೇ ಜನಪರ ಕೆಲಸಗಳನ್ನು ಮಾಡಿಕೊಂಡು ಹೋಗಬೇಕು ಎಂದು ಸಲಹೆ ನೀಡಿದರು.
ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮನಂದನಾಥ ಸ್ವಾಮೀಜಿ, ಮಾಜಿ ಸಚಿವ ಕೆ.ಸಿ.ನಾರಾಯಣಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಇಂದ್ರೇಶ್, ಎನ್.ಶಂಕರೇಗೌಡ ಚಾರಿಟಬಲ್ ಟ್ರಸ್ಟ್ ಸಂಸ್ಥಾಪಕ ಇಂಡುವಾಳು ಸಚ್ಚಿದಾನಂದ, ಒಕ್ಕಲಿಗರ ಸಂಘದ ನಿರ್ದೇಶಕ ಅಶೋಕ್ ಜಯರಾಂ, ಸಂಗೀತ ನಿರ್ದೇಶಕ ಹರಿಕೃಷ್ಣ, ಮನ್‌ಮುಲ್ ನಿರ್ದೇಶಕ ಎಸ್.ಪಿ.ಸ್ವಾಮಿ, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ.ಸಿದ್ದರಾಮಯ್ಯ, ಯಮದೂರು ಸಿದ್ದರಾಜು, ಶ್ರೀಧರ್, ಅಶೋಕ್, ಪೀಹಳ್ಳಿ ರಮೇಶ್ ಇತರರಿದ್ದರು.
ಹೆಲ್ಮೆಟ್ ಸೇವೆಗೆ ಗಣ್ಯರ ಮೆಚ್ಚುಗೆ
ಮಂಡ್ಯ ನಗರದ ಸ್ವರ್ಣಸಂದ್ರದಲ್ಲಿ ಸಂಭವಿಸಿದ ಅಪಘಾತದಲ್ಲಿ ಮೂರು ವರ್ಷದ ಬಾಲಕಿ ಹೃತೀಕ್ಷಾ ಮೃತಪಟ್ಟಿದ್ದಳು. ಬೈಕ್ ಸವಾರರ ಸುರಕ್ಷತೆ ದೃಷ್ಟಿಯಿಂದ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಜನರಿಗೆ ಉಚಿತವಾಗಿ 10,000 ಹೆಲ್ಮೆಟ್‌ಗಳ ವಿತರಿಸುವ ಇಂಡುವಾಳು ಸಚ್ಚಿದಾನಂದ ಅವರ ಸೇವೆಗೆ ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದರು.
ಸಾರ್ವಜನಿಕರಿಗೆ ವಿತರಿಸಲು ಅತ್ಯುತ್ತಮ ಗುಣಮಟ್ಟ ಹಾಗೂ ಐಎಸ್‌ಐ ಮುದ್ರೆಯುಳ್ಳ ಹೆಲ್ಮೆಟ್ ಸಿದ್ಧಪಡಿಸಲಾಗಿದೆ. ಹೃತೀಕ್ಷಾ ಸುರಕ್ಷಾ ಕಾರ್ಯಕ್ರಮದ ಮೂಲಕ ಸುರಕ್ಷತೆಗಾಗಿ ಘೋಷವಾಕ್ಯದೊಂದಿಗೆ ಹೆಲ್ಮೆಟ್‌ಗಳನ್ನು ಜನರಿಗೆ ನೀಡಲಾಗುತ್ತಿದೆ. ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 250 ಹೆಲ್ಮೆಟ್‌ಗಳನ್ನು ಬಿಜೆಪಿ ಕಾರ್ಯಕರ್ತರು ಮತ್ತು ತಮ್ಮ ಕುಟುಂಬದ ಹಿತೈಷಿಗಳ ಮೂಲಕ ಜನರಿಗೆ ವಿತರಿಸಲು ಕ್ರಮ ವಹಿಸಲಾಗಿದೆ. ಜನರು ವಾಹನ ಚಾಲನಾ ಪರವಾನಗಿ ಪತ್ರದ ಪ್ರತಿಯನ್ನು ಕೊಟ್ಟು ಹೆಲ್ಮೆಟ್ ಪಡೆಯಬಹುದು.