ಶಿರಸಿ: ನಗರಸಭೆ ವ್ಯಾಪ್ತಿಗೊಳಪಡುವ, ಅತಿದೊಡ್ಡ ವಾರ್ಡ್ ಎಂದೇ ಕರೆಯಲ್ಪಡುವ ಮರಾಠಿಕೊಪ್ಪ ಪ್ರದೇಶ ಅಭಿವೃದ್ಧಿ ದೃಷ್ಟಿಯಿಂದ ಹಿಂದುಳಿದಿದೆ. ಮರಾಠಿಕೊಪ್ಪಕ್ಕೆ ಪ್ರವೇಶಿಸುವಾಗಲೇ ರಸ್ತೆಯಲ್ಲಿ ಬಿದ್ದಿರುವ ಹೊಂಡಗಳು ಸ್ವಾಗತ ಕೋರುತ್ತವೆ.
ಮರಾಠಿಕೊಪ್ಪ ವೃತ್ತದಿಂದ ರಾಜಧಾನಿ ಫೈನಾನ್ಸ್ ವರೆಗಿನ ರಸ್ತೆ ಸಂಪೂರ್ಣ ಹೊಂಡಮಯವಾಗಿದೆ. ನಿತ್ಯ ಈ ರಸ್ತೆಯಲ್ಲಿ ಸಂಚಾರ ಮಾಡುವ ಸಾವಿರಾರು ವಾಹನ ಸವಾರರು ನರಕ ದರ್ಶನ ಅನುಭವಿಸುವಂತಾಗಿದೆ. ಈ ರಸ್ತೆಯಲ್ಲಿ ಹೊಂಡಬಿದ್ದು ಎರಡು ಮೂರು ವರ್ಷ ಕಳೆದರೂ ಮುಚ್ಚುವ ಕಾರ್ಯ ಮಾತ್ರ ನಗರಸಭೆಯಿಂದ ಇದುವರೆಗೂ ಆಗದಿರುವುದು ಮರಾಠಿಕೊಪ್ಪ ಭಾಗದ ಜನರ ಆಕ್ರೋಶಕ್ಕೆ ಕಾರಣವಾಗಿದೆ. ವಾರ್ಡ್ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ ಇತ್ತೀಚೆಗೆ ನಗರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ.
ಮರಾಠಿಕೊಪ್ಪ ಭಾಗದಲ್ಲಿ ರಸ್ತೆ ಸಮಸ್ಯೆ ಅಲ್ಲದೆ ಕುಡಿಯುವ ನೀರು, ಚರಂಡಿ, ಮತ್ತಿತರ ಸಮಸ್ಯೆಗಳಿವೆ. ಸರಿಯಾದ ರೀತಿಯಲ್ಲಿ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಮಳೆ ಬಂದರೆ ಮರಾಠಿಕೊಪ್ಪ ರಸ್ತೆ ಕೆರೆಯಂತಾಗುತ್ತದೆ. ಶಾಶ್ವತ ಪರಿಹಾರಕ್ಕಾಗಿ ನಗರಸಭೆಗೆ ಒತ್ತಾಯಿಸಿದರೂ ಒಂದಿಲ್ಲೊಂದು ಕಾರಣ ನೀಡಿ ಅಧಿಕಾರಿಗಳು ಸುಮ್ಮನಾಗುತ್ತಾರೆ ನಿವಾಸಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಮರಾಠಿಕೊಪ್ಪ ರಸ್ತೆಯಲ್ಲಿ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ರಸ್ತೆಯಲ್ಲಿ ಬೈಕ್ ಓಡಾಡಿದರೂ ಪಾದಾಚಾರಿಗಳಿಗೆ ಧೂಳಿನ ಅಭಿಷೇಕ ನಿಶ್ಚಿತವಾಗಿದೆ. ರಸ್ತೆಯ ಪರಿಸ್ಥಿತಿಯಂತೂ ಅಂತಿಮ ಹಂತಕ್ಕೆ ತಲುಪಿದೆ.
ಇತ್ತೀಚೆಗೆ ನೀರಿನ ಪೈಪ್‌ಲೈನ್ ಅಳವಡಿಕೆಗಾಗಿ ರಸ್ತೆಬದಿ ಅಗೆದಿದ್ದು, ಸಮರ್ಪಕವಾಗಿ ಮಣ್ಣು ಮುಚ್ಚಲಾಗಿಲ್ಲ. ಇದರಿಂದಾಗಿ ಧೂಳೆದ್ದು ರಸ್ತೆಯ ಅಕ್ಕಪಕ್ಕದಲ್ಲಿರುವ ಮನೆಗಳಲ್ಲಿ ವಾಸಮಾಡುವುದೇ ಕಷ್ಟವಾಗಿದೆ. ಎರಡು ತಿಂಗಳಲ್ಲಿ ಮಳೆಗಾಲ ಪ್ರಾರಂಭವಾಗಲಿದೆ. ಈ ವರ್ಷದ ಮಳೆಗಾಲದಲ್ಲೂ ಮರಾಠಿಕೊಪ್ಪ ಭಾಗದ ಜನರು ಪರದಾಡುವುದು ತಪ್ಪುವುದಿಲ್ಲ ಎಂದು ಅನ್ನಿಸುತ್ತಿದೆ. ನಗರಸಭೆ ಇನ್ನಾದರೂ ಎಚ್ಚೆತ್ತುಕೊಂಡು ಕನಿಷ್ಠ ಪಕ್ಷ ರಸ್ತೆಯನ್ನಾದರೂ ಸುಧಾರಣೆ ಮಾಡಿಕೊಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಮರಾಠಿಕೊಪ್ಪ ರಸ್ತೆಯ ಮರು ಡಾಂಬರೀಕರಣವನ್ನು ಈಗಾಗಲೇ ನಗರೋತ್ಥಾನ ಯೋಜನೆಯಲ್ಲಿ ಸೇರಿಸಿದ್ದೇವೆ. ಆದರೆ, ಗುತ್ತಿಗೆದಾರರು ಕಾಮಗಾರಿ ಆರಂಭಿಸಲು ವಿಳಂಬ ಮಾಡುತ್ತಿದ್ದು, ಸಾರ್ವಜನಿಕರಿಗೆ ನಾವು ಉತ್ತರಿಸುವುದು ಕಷ್ಟವಾಗಿದೆ. ದೀಪಾ ಮಹಾಲಿಂಗಣ್ಣ, ವಾರ್ಡ್ ಸದಸ್ಯೆ.