ಜಿಲ್ಲೆ

ಅಂಬೇಡ್ಕರ್​ನಗರ ನಿವಾಸಿಗಳ ಕಷ್ಟ ಹೇಳತೀರದಷ್ಟು..

ನರಗುಂದ: ಹದಗೆಟ್ಟ ರಸ್ತೆ, ರಸ್ತೆಯಲ್ಲಿ ಹರಿಯುತ್ತಿರುವ ಚರಂಡಿ ನೀರು, ಪಾಳು ಬಿದ್ದ ಶುದ್ಧ ಕುಡಿಯುವ ನೀರಿನ ಘಟಕ...

ಇದು ಪಟ್ಟಣದ ವಾರ್ಡ್ ನಂ. 22ರ ಸ್ಥಿತಿ.

ವಾರ್ಡ್ ವ್ಯಾಪ್ತಿಯ ಅಂಬೇಡ್ಕರ್​ನಗರ, ಸೇವಾಲಾಲ್​ನಗರ, ಚಿಕ್ಕಲಗೇರ, ಅಧ್ಯಾಪಕನಗರ, ಸರಸ್ವತಿನಗರ ಅವ್ಯವಸ್ಥೆಯ ಆಗರವಾಗಿವೆ. ಪುರಸಭೆ ಸದಸ್ಯೆ ರೇಣುಕಾ ಕಲ್ಲಾರಿ ಪ್ರತಿನಿಧಿಸುವ ಈ ವಾರ್ಡ್​ನಲ್ಲಿ ಬಹುತೇಕ ಹಿಂದುಳಿದ ಜನಾಂಗದವರೇ ಇದ್ದಾರೆ. ಕೆಲ ಚರಂಡಿಗಳಲ್ಲಿ ಹೂಳು ತುಂಬಿದ್ದರೆ, ಮತ್ತೆ ಕೆಲವೆಡೆ ಚರಂಡಿಯೇ ನಿರ್ವಣವಾಗಿಲ್ಲ. ಇದರಿಂದ ಮಲಿನ ನೀರು ರಸ್ತೆಯಲ್ಲಿ ನಿಂತು ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗಿದೆ. ಸರಸ್ವತಿನಗರ, ನವೋದಯನಗರದಲ್ಲಿ ಬೀದಿ ದೀಪಗಳಿಲ್ಲದೆ ಕತ್ತಲಲ್ಲಿ ಕಾಲ ಕಳೆಯುವಂತಾಗಿದೆ. ಅಂಬೇಡ್ಕರ್​ನಗರದಲ್ಲಿ 5 ಲಕ್ಷ ರೂ. ವೆಚ್ಚದಲ್ಲಿ ನಿರ್ವಿುಸಿರುವ ಶುದ್ಧ ಕುಡಿಯುವ ಘಟಕ ನಿರುಪಯುಕ್ತವಾಗಿದೆ. ಅಂಗನವಾಡಿಗೆ ಸ್ವಂತ ಕಟ್ಟಡವಿಲ್ಲದ ಕಾರಣ ಅಲ್ಲಿನ ಮಕ್ಕಳಿಗೆ ದೇವಸ್ಥಾನವೇ ಗತಿಯಾಗಿದೆ. ಅಧ್ಯಾಪಕನಗರ, ನವೋದಯ, ಸರಸ್ವತಿನಗರ ಬಡಾವಣೆಗಳ ರಸ್ತೆಗಳಲ್ಲಿ ತಗ್ಗು, ಗುಂಡಿಗಳು ಉಂಟಾಗಿವೆ. ಮಳೆಗಾಲದಲ್ಲಂತೂ ನಿವಾಸಿಗಳ ಕಷ್ಟ ಹೇಳತೀರದಷ್ಟು.

ಪುರಸಭೆ ಅಧಿಕಾರಿಗಳು ಪಟ್ಟಣದ ಸರ್ವಾಂಗೀಣ ಅಭಿವೃದ್ಧಿ, ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುತ್ತಿಲ್ಲ. ಅವೈಜ್ಞಾನಿಕವಾಗಿ ನಿರ್ವಿುಸಿದ ಚರಂಡಿಯಿಂದಾಗಿ ಗಲೀಜು ನೀರು ರಸ್ತೆ ಮೇಲೆಯೇ ಹರಿಯುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಇತ್ತ ಆಸಕ್ತಿ ವಹಿಸಿ ಸ್ವಚ್ಛತೆ ಜತೆಗೆ ಸಾರ್ವಜನಿಕರ ಹಿತ ಕಾಪಾಡಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.

ಪಟ್ಟಣದ ಎಲ್ಲೆಂದರಲ್ಲಿ ಪೈಪ್​ಗಳು ಒಡೆದು ಅಪಾರ ಪ್ರಮಾಣದ ಕುಡಿಯುವ ನೀರು ಪೋಲಾಗುತ್ತಿದೆ. ಪುರಸಭೆ ಅಧಿಕಾರಿ, ಸಿಬ್ಬಂದಿಗೆ ತಿಳಿಸಿದರೂ ಪ್ರಯೋಜನವಾಗುತ್ತಿಲ್ಲ. | ನೇತಾಜಿ ನರಗುಂದ, ಅಂಬೇಡ್ಕರ್​ನಗರ, ನರಗುಂದ
ನರಗುಂದದ 23 ವಾರ್ಡ್​ಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲಾಗುತ್ತಿದೆ. ಕೆಲ ವಾರ್ಡ್​ಗಳಲ್ಲಿ ಇನ್ನೂ ಚರಂಡಿಗಳು ನಿರ್ವಣವಾಗಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಅವರು ವಿವಿಧ ಅಭಿವೃದ್ಧಿ ಕಾಮಗಾರಿಗೆ ಇತ್ತೀಚೆಗೆ ಭೂಮಿ ಪೂಜೆ ನೆರವೇರಿಸಿದ್ದಾರೆ. ಅದರಲ್ಲಿ ಅಂದಾಜು 15 ಲಕ್ಷ ರೂ. ವೆಚ್ಚದಲ್ಲಿ ಅಂಬೇಡ್ಕರ್ ನಗರದಲ್ಲಿ ಚರಂಡಿ ನಿರ್ವಿುಸಲಾಗುವುದು.| ಪ್ರೀತಿ ಗವಿಮಠ, ಪುರಸಭೆ ಆರೋಗ್ಯ ನಿರೀಕ್ಷಕಿ