ಮದ್ದೂರು : ಗ್ರಾಮೀಣ ಜನರು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಆರ್.ಕೆ. ವಿದ್ಯಾ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ವಿನಯ್ ರಾಮಕೃಷ್ಣ ತಿಳಿಸಿದರು. ತಾಲೂಕಿನ ಕೆ.ಹೊನ್ನಲಗೆರೆ ಗ್ರಾಮದ ಆರ್.ಕೆ. ಸಮೂಹ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ತಮ್ಮ 35 ನೇ ವರ್ಷದ ಹುಟ್ಟು ಹಬ್ಬದ ಅಂಗವಾಗಿ ಶುಕ್ರವಾರ ಬೆಂಗಳೂರು ಸಪ್ತಗಿರಿ ಆಸ್ಪತ್ರೆ ಸಹಯೋಗದಲ್ಲಿ ಆಯೋಜಿಸಿದ್ದ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರಕ್ಕೆ ಅವರು ಚಾಲನೆ ನೀಡಿ ಮಾತನಾಡಿದರು.
ಪ್ರತಿಯೊಬ್ಬರೂ ಸಮಾಜಮುಖಿ ಕಾರ್ಯಗಳನ್ನು ಮಾಡುವ ಮೂಲಕ ಸಮಾಜದ ಸುಧಾರಣೆಗೆ ಶ್ರಮಿಸಬೇಕು. ಯುವಕರಿಗೆ ಸರಿಯಾದ ಮಾರ್ಗದರ್ಶನ ದೊರೆಯದ ಕಾರಣ ಜೀವನದಲ್ಲಿ ಯಾವ ಸಾಧನೆ ಮಾಡಬೇಕು ಎಂಬ ಖಚಿತ ಗುರಿ ಇಂದು ಇಲ್ಲವಾಗಿದೆ. ಹಿರಿಯರ ಮಾರ್ಗದರ್ಶನ ಪಡೆಯುವ ಮೂಲಕ ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಗಡಿಸಿಕೊಳ್ಳ್ಳಬೇಕು ಎಂದರು. ರಕ್ತದಾನ ಮಾಡಿದ ಹಾಗೂ ಪಡೆದ ಇಬ್ಬರಿಗೂ ಆರೋಗ್ಯ ಪ್ರಾಪ್ತಿಯಾಗಬೇಕು. ಹಾಗಾಗಿ ವರ್ಷಕ್ಕೆರಡು ಬಾರಿ ರಕ್ತದಾನ ಶಿಬಿರವನ್ನು ಸಂಘ-ಸಂಸ್ಥೆಗಳು ಸಂಘಟಿಸಬೇಕು. ಪ್ರತಿ ಆರು ತಿಂಗಳಿಗೊಮ್ಮೆ ಆರೋಗ್ಯ ಸ್ಥಿತಿಗತಿಯನ್ನು ತಪಾಸಣೆ ಮಾಡಿಸಿಕೊಳ್ಳಬೇಕು. ಹೃದಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದವರು ಸಲಹೆ ನೀಡಿದರು.
ನೂರಾರು ಜನರು ರಕ್ತದಾನ ಮಾಡಿದರು. ಆರೋಗ್ಯ ತಪಾಸಣೆ ಶಿಬಿರದಲ್ಲಿ ಸ್ತ್ರೀರೋಗ, ಪ್ರಸೂತಿ, ಮೂಳೆ, ಪಿತ್ತಕೋಶದಲ್ಲಿ ಕಲ್ಲು, ಹೃದಯರೋಗ, ಕಣ್ಣು, ಕಿವಿ, ಮೂಗು, ಗಂಟಲು, ಉಬ್ಬಸ, ಮಲಬದ್ಧತೆ ಸೇರಿದಂತೆ ಇತರ ರೋಗಗಳನ್ನು ಪರೀಕ್ಷಿಸಿ, ತಜ್ಞ ವೈದ್ಯರು ಚಿಕಿತ್ಸೆ ನೀಡಿದರು.
ಸಂಸ್ಥೆಯ ಆಡಾಳಿತಾಧಿಕಾರಿ ಮರಿಸ್ವಾಮಿಗೌಡ, ಮುಖ್ಯಸ್ಥರಾದ ಎಂ.ಸಿ. ಸತೀಶ್ ಬಾಬು, ಜಿ.ಎಸ್.ಸುರೇಶ್‌ಕುಮಾರ್, ಸಂಸ್ಥೆಯ ಡಿ.ಕಲ್ಯಾಣಿ, ಪ್ರಭಾವತಿ, ಅಂಬರಹಳ್ಳಿ ಸ್ವಾಮಿ, ಎಂ.ಎನ್.ರಮೇಶ್ ಹಾಗೂ ಸಪ್ತಗಿರಿ ಆಸ್ಪತ್ರೆಯ ವೈದ್ಯರು ಇದ್ದರು.