ಪಡುಬಿದ್ರಿ: ಕರೊನಾ ವೈರಸ್ ಹರಡದಂತೆ ಮುನ್ನೆಚ್ಚರಿಕಾ ಕ್ರಮವಾಗಿ ದೇಶ ಲಾಕ್‌ಡೌನ್ ಆದರೂ, ಗಂಭೀರತೆ ಅರಿಯದೆ ಗುರುವಾರವೂ ವಾಹನಗಳಲ್ಲಿ ತಿರುಗಾಡುತ್ತಿದ್ದವರನ್ನು ಹೆಜಮಾಡಿ ಗಡಿಯಲ್ಲಿ ಪೊಲೀಸರು ಖಡಕ್ ಎಚ್ಚರಿಕೆ ನೀಡಿ ಹಿಂದಕ್ಕೆ ಕಳುಹಿಸಿದ್ದಾರೆ.
ಅಗತ್ಯ ಸೇವೆಗಳ ಹೊರತು ಯಾವುದೇ ವಾಹನ ಹಾಗೂ ಜನರನ್ನು ಉಡುಪಿ ಹಾಗೂ ದಕ್ಷಿಣಕನ್ನಡ ಜಿಲ್ಲೆಗೆ ಸಂಚರಿಸಲು ಗಡಿಯಲ್ಲಿ ತಪಾಸಣೆ ನಡೆಸುವ ಕರ್ತವ್ಯದಲ್ಲಿದ್ದ ಪೊಲೀಸ್, ಆರೋಗ್ಯ ಹಾಗೂ ಕಂದಾಯ ಇಲಾಖೆ ಸಿಬ್ಬಂದಿ ಅವಕಾಶ ನೀಡಲಿಲ್ಲ. ಈ ಮಧ್ಯೆ ಕೆಲ ಜನ ಏನೇನೂ ಸಬೂಬು ಹೇಳಿ ಸಂಚರಿಸಲು ಪ್ರಯತ್ನ ಪಟ್ಟರೂ ಕರ್ತವ್ಯದಲ್ಲಿದ್ದ ಅಧಿಕಾರಿಗಳು ನಿರಾಕರಿಸಿದಾಗ ರಾಜಕೀಯ ಮುಖಂಡರೂ, ಪೊಲೀಸ್ ಇಲಾಖೆ ಉನ್ನತ ಅಧಿಕಾರಿಗಳ ಮೂಲಕ ಪ್ರಭಾವ ಬಳಸಿ ಕರ್ತವ್ಯದಲ್ಲಿದ್ದ ಕೆಳಸ್ತರದ ಅಧಿಕಾರಿಗಳಿಗೆ ಮೊಬೈಲ್ ಕರೆ ಮಾಡಿಸಿ ಸಂಚರಿಸುವ ಪ್ರಯತ್ನ ಮಾಡಿದ್ದರು. ಅದಕ್ಕೆ ಸೊಪ್ಪು ಹಾಕದ ಅಧಿಕಾರಿಗಳು ಅವರನ್ನು ಹಿಂದಕ್ಕೆ ಕಳುಹಿಸಿದ್ದಾರೆ.
ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಎಲ್ಲೆಡೆ ಮನವಿ ಮಾಡುತ್ತಿದ್ದರೂ ಬ್ಯಾಂಕ್ ಹಾಗೂ ಇತರ ಕಚೇರಿಗಳಿಗೆ ತೆರಳುವವರು ಒಂದೊಂದು ವಾಹನದಲ್ಲಿ ಐದಾರು ಮಂದಿ ತೆರಳುವ ಮೂಲಕ ಅದನ್ನು ಮರೆತಂತಿತ್ತು. ಪಡುಬಿದ್ರಿ, ಕಾಪು ಮತ್ತಿತರ ಕಡೆ ಅಗತ್ಯ ವಸ್ತುಗಳ ಮಾರಾಟ ಮಳಿಗೆಗಳಿಗೆ ಖುದ್ದು ವೃತ್ತ ನಿರೀಕ್ಷಕ ಮಹೇಶ್‌ಪ್ರಸಾದ್ ಭೇಟಿ ನೀಡಿ ಸೋಶಿಯಲ್ ಡಿಸ್ಟೆನ್ಸ್ ಕಾಯ್ದುಕೊಳ್ಳುವಂತೆ ಸೂಚನೆ ನೀಡಿದರು. ಅದನ್ನು ಪಾಲಿಸದಿದ್ದಲ್ಲಿ ವ್ಯಾಪಾರ ವಹಿವಾಟನ್ನು ಪೊಲೀಸರೇ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಪಡುಬಿದ್ರಿಯ ಹೂವಿನ ವ್ಯಾಪಾರಿ ಹಾಗೂ ಹೋಟೆಲ್‌ನಲ್ಲಿ ಆಹಾರ ತಯಾರಿಸಿ ಗ್ರಾಹಕರಿಗೆ ಉಣಬಡಿಸುತ್ತಿದ್ದ ಹೋಟೆಲ್ ಮಾಲೀಕನನ್ನು ವೃತ್ತ ನಿರೀಕ್ಷಕರು ಠಾಣೆಗೆ ಕರೆಯಿಸಿ ಎಚ್ಚರಿಕೆ ನೀಡಿ ಕಳುಹಿಸಿದರು.
ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಜಿಲ್ಲಾ ಗಡಿ ಹೆಜಮಾಡಿಗೆ ಆಗಮಿಸಿ ಪರಿಸ್ಥಿತಿ ಅವಲೋಕಿಸಿ, ಅಗತ್ಯ ವಸ್ತುಗಳ ಸಾಗಾಟದ ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ನೀಡುವಂತೆ ಕರ್ತವ್ಯ ನಿರತರಿಗೆ ಸೂಚನೆ ನೀಡಿದರು.
ಅನಗತ್ಯ ವಾಹನ ಸಂಚಾರಕ್ಕೆ ದಂಡ
ಸಮರ್ಪಕ ದಾಖಲೆಗಳಿಲ್ಲದೆ ಅನಗತ್ಯವಾಗಿ ಚಲಿಸುತ್ತಿದ್ದ ಬೈಕ್ ಮತ್ತಿತರ ವಾಹನಗಳಿಗೆ ದಂಡ ವಿಧಿಸಲಾಯಿತು. ಮಂಗಳೂರು ಕಡೆಯಿಂದ ನಡೆದುಕೊಂಡು ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಹೊರಟ ಕೆಲ ಕಾರ್ಮಿಕರನ್ನು ತಡೆದು ಹಿಂದಕ್ಕೆ ಕಳುಹಿಸಲಾಯಿತು. ಕಾಪು, ಉಚ್ಚಿಲ, ಪಡುಬಿದ್ರಿ ಸಹಿತ ಗ್ರಾಮೀಣ ಭಾಗದಲ್ಲಿ ಜನ ಸಂಚರಿಸದಂತೆ ಪೊಲೀಸರು ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಪಡುಬಿದ್ರಿ ಕಡಲ ಕಿನಾರೆ ತೆರಳುವ ಫಿಶರೀಸ್ ರಸ್ತೆಯಲ್ಲಿ ಆ ಭಾಗದ ನಾಗರಿಕರ ಹೊರತು ಇತರರ ಸಂಚಾರ ನಿಷೇಧಿಸಿ ಸೂಚನಾ ಫಲಕ ಅಳವಡಿಸಲಾಗಿದೆ.