ಬೇಲೂರು: ತಾಲೂಕಿನ ಮಲೆನಾಡು ಭಾಗದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಅರೇಹಳ್ಳಿ ಹೋಬಳಿಯ ನಾರ್ವೆ ಗ್ರಾಮ ಸೇರಿದಂತೆ 15 ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸುಂಡೇಕೆರೆ-ನಾರ್ವೆ(ಬಿಎನ್‌ಎಸ್) ಮುಖ್ಯರಸ್ತೆಯಲ್ಲಿರುವ ಹೆಗ್ಗದ್ದೆ ಹಳ್ಳದ ಸೇತುವೆ ಗುರುವಾರ ಸಂಪೂರ್ಣ ಮುಳುಗಿದೆ. ಇದರಿಂದ ವಾಹನ ಸವಾರರು, ಶಾಲಾ ಕಾಲೇಜು ವಿದ್ಯಾರ್ಥಿಗಳು ಪರದಾಡುವಂತಾಗಿದೆ.
ತಾಲೂಕಿನ ಸುಂಡೇಕೆರೆ-ನಾರ್ವೆ(ಬಿಎನ್‌ಎಸ್)ಮುಖ್ಯರಸ್ತೆ ಮೂಲಕ 15ಕ್ಕೂ ಹೆಚ್ಚು ಗ್ರಾಮಗಳಿಗೆ ಬೇಲೂರು ಹಾಗೂ ಸಕಲೇಶಪುರದಿಂದ ಬಂದು ಹೋಗುವುದಕ್ಕಾಗಿ ಸಾಕಷ್ಟು ವರ್ಷಗಳ ಹಿಂದೆ ಸುಂಡೇಕೆರೆ-ನಾರ್ವೆ ಮುಖ್ಯರಸ್ತೆಯ ಮಧ್ಯದಲ್ಲಿ ಹರಿಯುವ ಹೆಗ್ಗದ್ದೆ ಹಳ್ಳಕ್ಕೆ ಚಿಕ್ಕದಾಗಿ ತಳ ಮಟ್ಟದಲ್ಲಿ ಸೇತುವೆ ನಿರ್ಮಿಸಲಾಗಿತ್ತು. ಮಳೆಗಾಲ ಹೊರತುಪಡಿಸಿದರೆ ದೊಡ್ಡದಾದ ಒಂದು ವಾಹನ ಸೇರಿದಂತೆ ಎಲ್ಲ ವಾಹನಗಳು ಸಂಚರಿಸಲು ಸಾಧ್ಯವಿದೆ. ಮಳೆಗಾಲದಲ್ಲಿ ಹೆಗ್ಗದ್ದೆ ಹಳ್ಳದ ನೀರೆಲ್ಲ ಸೇತುವೆ ಮೇಲೆ ಹರಿಯುವುದರಿಂದ ಸಣ್ಣಪುಟ್ಟ ವಾಹನಗಳ ಸವಾರರು, ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಓಡಾಡಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಮಳೆ ಜೋರಾಗಿ ಬಂದ ಸಂದರ್ಭದಲ್ಲಿ ಬೈಕ್, ಆಟೋಗಳಲ್ಲಿ ಸಂಚರಿಸಲು ಮುಂದಾದರೆ ನೀರಿನಲ್ಲಿ ಕೊಚ್ಚಿಕೊಂಡು ಹೋಗುವ ಸಾಧ್ಯತೆ ಹೆಚ್ಚಿದೆ. ಆದ್ದರಿಂದ ಬೇಸಿಗೆ ಸಂದರ್ಭ ಈ ಸೇತುವೆಯನ್ನು ತೆರವುಗೊಳಿಸಿ ದೊಡ್ಡ ಸೇತುವೆ ನಿರ್ಮಿಸಿದರೆ ಈ ಭಾಗದ ಜನರಿಗೆ ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಶಾಸಕರು ಗಮನಹರಿಸಬೇಕು ಎಂದು ಈ ಭಾಗದ ಗ್ರಾಮಸ್ಥರು ಮನವಿ ಮಾಡಿದ್ದಾರೆ.