ಸಂಸದ ಕೋಟ ಶ್ರೀನಿವಾಸ ಪೂಜಾರಿ ಅಧ್ಯಕ್ಷತೆಯಲ್ಲಿ ಹೆಬ್ರಿ ಗ್ರಾಮ ಪಂಚಾಯಿತಿ ಪ್ರಗತಿ ಪರಿಶೀಲನಾ ಸಭೆ ನಡೆಯಿತು 
ಜಿಲ್ಲೆ

ಗ್ರಾಮದ ಸಮಸ್ಯೆಗಳಿಗೆ ಪರಿಹಾರ

ಇಂದಿರಾ ಎನ್ ಕೆ

ವಿಜಯವಾಣಿ ಸುದ್ದಿಜಾಲ ಹೆಬ್ರಿ

ಸಂಸದ ಕೋಟ ಶ್ರೀನಿವಾಸ ಪೂಜಾರಿ ಅಧ್ಯಕ್ಷತೆಯಲ್ಲಿ ಹೆಬ್ರಿ ಗ್ರಾಮ ಪಂಚಾಯಿತಿ ಪ್ರಗತಿ ಪರಿಶೀಲನಾ ಸಭೆ ಬುಧವಾರ ನಡೆಯಿತು.
ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಸ್ವೀಕರಿಸಿದ ಮನವಿಗಳನ್ನು ಪ್ರಾಮುಖ್ಯತೆ ಆಧಾರದಲ್ಲಿ ಪರಿಗಣಿಸಿ ಕಾರ್ಯ ನಿರ್ವಹಿಸಲಾಗುವುದು. ತಾಲೂಕು ಕೇಂದ್ರಕ್ಕೆ ಅಗ್ನಿಶಾಮಕ ಘಟಕ ಸ್ಥಾಪಿಸಲು ಅಗತ್ಯ ಪ್ರಸ್ತಾವನೆ ಸಲ್ಲಿಸಬೇಕಿದ್ದು, ಮಲತ್ಯಾಜ್ಯ ಘಟಕವನ್ನು ಶೀಘ್ರ ಪೂರ್ಣಗೊಳಿಸುವಿಕೆ, ವಿದ್ಯುತ್‌ರಹಿತ ಕುಟುಂಬಗಳು ಸೌಭಾಗ್ಯ ಯೋಜನೆಯಡಿ ವಿದ್ಯುತ್ ಪಡೆಯಲು ಅರ್ಜಿ ಸಲ್ಲಿಸಬೇಕು. ಹೆಬ್ರಿ ತಾಲೂಕಿನ ನೆಟ್‌ವರ್ಕ್ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಒದಗಿಸಲಾಗುವುದು ಎಂದು ಭರವಸೆ ನೀಡಿದರು.

ಗ್ರಾಪಂ ಅಧ್ಯಕ್ಷ ತಾರಾನಾಥ ಎಸ್ ಬಂಗೇರ ಮಾತನಾಡಿ, ಹೆಬ್ರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 169 ಎ ರಾಷ್ಟ್ರೀಯ ಹೆದ್ದಾರಿಯ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಹೆಬ್ರಿ ಕೆಳಪೇಟೆಯಿಂದ ಕನ್ಯಾನ ಬನಶಂಕರಿವರೆಗೆ ಹಿಂದೆ ಅಸ್ತಿತ್ವದಲ್ಲಿದ್ದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಹೊಸ ಪೈಪ್‌ಲೈನ್ ಅಳವಡಿಸಬೇಕೆಂದು ಸಂಸದರಿಗೆ ಮನವಿ ಮಾಡಿದರು.

ಸಂಸದ ಕೋಟ ಪ್ರತಿಕ್ರಿಯಿಸಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಇಂಜಿನಿಯರ್‌ಗೆ ಸೂಕ್ತ ಕ್ರಮ ಜರುಗಿಸಲು ಸೂಚಿಸಿದರು. ರಾಷ್ಟ್ರೀಯ ಹೆದ್ದಾರಿಯಲ್ಲಿ ಎಸ್.ಆರ್ ಶಾಲೆಯಿಂದ ಕನ್ಯಾನ ಹಿರಿಯ ಪ್ರಾಥಮಿಕ ಶಾಲೆಯ ನಡುವೆ ಡಿವೈಡರ್ ಇಲ್ಲದೇ ತೊಂದರೆಯಾಗುತ್ತಿದ್ದು, ಶೀಘ್ರ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಉಡುಪಿ ಜಿಪಂ ಮುಖ್ಯ ಯೋಜನೆ ಅಧಿಕಾರಿ ಕೆಂಜೂರು ಉದಯ ಶೆಟ್ಟಿ, ಇಒ ಶಶಿಧರ್ ಕೆ ಜಿ, ಪಿಡಿಒ ಸದಾಶಿವ ಎಸ್, ಗ್ರಾಪಂ ಉಪಾಧ್ಯಕ್ಷೆ ಸುಪ್ರೀತಾ, ಸದಸ್ಯರು, ವಿವಿಧ ಇಲಾಖೆ ಅಧಿಕಾರಿಗಳು, ಜನಪ್ರತಿನಿಧಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು. ಸಿಬ್ಬಂದಿ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.

ಅನುದಾನ ಶೀಘ್ರ ಹಸ್ತಾಂತರ

ರಾಷ್ಟ್ರೀಯ ಹೆದ್ದಾರಿ ಅಗಲೀಕರಣದ ಸಮಯದಲ್ಲಿ ರಸ್ತೆಯ ಸಮೀಪದ ಇದ್ದ ಕನ್ಯಾನದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹೆಬ್ರಿ ತಾಲೂಕು ಆಡಳಿತ ಕೇಂದ್ರ ಹಾಗೂ ಹೆಬ್ರಿ ಸಮುದಾಯ ಆರೋಗ್ಯ ಕೇಂದ್ರ, ಅರಣ್ಯ ಇಲಾಖೆಗೆ ಸಂಬಂಧಿಸಿದ ಆವರಣಗೋಡೆಗಳು ಕುಸಿದಿರುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಿಯಿತು. ಈ ಸಂದರ್ಭ ಪ್ರತಿಕ್ರಿಯಿಸಿದ ಅಧಿಕಾರಿಗಳು ಅನುದಾನ ಮಂಜೂರಾಗಿದ್ದು, ಶೀಘ್ರದಲ್ಲಿ ಸಂಬಂಧಪಟ್ಟವರಿಗೆ ಅನುದಾನ ನೀಡುತ್ತೇವೆ ಎಂದು ಭರವಸೆ ನೀಡಿದರು.

ಸಾರ್ವಜನಿಕರಿಂದ ಮನವಿ

ಹೆಬ್ರಿ ಅಂಚೆ ಕಚೇರಿಯ ಕುರಿತು ಸಾರ್ವಜನಿಕರು ಸಂಸದರಿಗೆ ಮನವಿ ಸಲ್ಲಿದ್ದು, ಇಲ್ಲಿನ ಅಂಚೆ ಕಚೇರಿಯು ಬಾಡಿಗೆ ಕೊಠಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದರಿಂದ ಸಾರ್ವಜನಿಕ ತೊಂದರೆಯಾಗಿದ್ದು, ವಯಸ್ಕರಿಗೆ ಹತ್ತಲು ಇಳಿಯಲು ಸಮಸ್ಯೆಯಾಗುತ್ತದೆ ಎಂದು ಸಾರ್ವಜನಿಕರು ಅಲವತ್ತುಕೊಂಡರು.