ಜಿಲ್ಲೆ

ಹೆಬ್ಬೂರು ಠಾಣೆಯ ಎಎಸ್‌ಐ ಸೇರಿ ನಾಲ್ವರು ಪೊಲೀಸರು ಅಮಾನತು

ತುಮಕೂರು: ಠಾಣೆಯಲ್ಲೇ ಕಿತ್ತಾಡಿಕೊಂಡಿದ್ದ ಪೊಲೀಸರ ತಲೆ ದಂಡವಾಗಿದೆ. ಹೆಬ್ಬೂರು ಠಾಣೆಯಲ್ಲಿ ಇಸ್ಪೀಟ್ ಆಡುವಾಗ ಹೊಡೆದಾಡಿಕೊಂಡಿದ್ದು, ಎಎಸ್‌ಐ ಸೇರಿ ನಾಲ್ವರು ಪೊಲೀಸರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಾನತುಗೊಳಿಸಿದ್ದಾರೆ. ಎಎಸ್‌ಐ ರಾಮಚಂದ್ರಪ್ಪ, ಮುಖ್ಯಪೇದೆ ಮಹೇಶ್, ಪೇದೆಗಳಾದ ಸಂತೋಷ್ ಹಾಗೂ ಚಲುವರಾಜು ಅವರನ್ನು ಅಮಾನತುಗೊಂಡವರು.

ಪ್ರತಿಭಟನೆ ಬೆದರಿಕೆ: ಠಾಣೆಯಲ್ಲಿ ಈ ರೀತಿ ಮದ್ಯಪಾನ ಮಾಡಿ ಪೊಲೀಸರು ಜಗಳವಾಡಿಕೊಂಡಿರುವ ಸಂಬಂಧ ಸೂಕ್ತ ಕ್ರಮ ಕೈಗೊಳ್ಳುವಂತೆ ಗುರುವಾರ ಸಂಜೆ ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ಒತ್ತಾಯಿಸಿ ಪ್ರತಿಭಟನೆಗೆ ಮುಂದಾಗಿದ್ದರು. ಅಲ್ಲದೆ, ಕೇಂದ್ರವಲಯ ಐಜಿ ಶರತ್‌ಚಂದ್ರ ಅವರಿಗೂ ದೂರವಾಣಿ ಕರೆ ಮಾಡಿ ಶಿಸ್ತುಕ್ರಮಕ್ಕೆ ಆಗ್ರಹಿಸಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ ಪ್ರಕರಣದ ಸಂಪೂರ್ಣ ವಿವರ ಪಡೆದು ಅಮಾನತುಗೊಳಿಸಿ ಆದೇಶಿಸಿದ್ದು, ಇಲಾಖೆ ತನಿಖೆಗೆ ಸೂಚನೆ ನೀಡಿದ್ದಾರೆ.

ಮಾರಾಮಾರಿ ಪ್ರಕರಣ ದಾಖಲಾಗಿಲ್ಲ ?: ಪೊಲೀಸರ ಮಾರಾಮಾರಿಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಳ್ಳದಿರುವುದು ಅನುಮಾನಕ್ಕೆ ಎಡೆಮಾಡಿದೆ. ಗಲಾಟೆಯಲ್ಲಿ ಪೇದೆಯೋರ್ವನ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದ್ದರೂ ಎಫ್‌ಐಆರ್ ದಾಖಲಿಸದಿರುವುದು ಚರ್ಚೆಗೆ ಗ್ರಾಸವಾಗಿದೆ.

ಹೆಬ್ಬೂರು ಠಾಣೆಯಲ್ಲಿ ಪೊಲೀಸರ ಹೊಡೆದಾಟ ಮೇಲ್ನೋಟಕ್ಕೆ ಸತ್ಯಾಂಶದಿಂದ ಕೂಡಿದ್ದು, ನಾಲ್ವರನ್ನು ಅಮಾನತುಗೊಳಿಸಲಾಗಿದೆ. ಇಲಾಖೆ ತನಿಖೆ ಕೈಗೊಳ್ಳಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ಆಗಿಲ್ಲ. ಡಾ.ಕೆ.ವಂಶಿಕೃಷ್ಣ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ