ಜಿಲ್ಲೆ

ಹೆಬ್ಬಾಲೆ ಗ್ರಾ.ಪಂ. ಸಾಮಾನ್ಯ ಸಭೆಯಲ್ಲಿ ಸಮಸ್ಯೆಗಳ ಚರ್ಚೆ

ಸುನಿಲ್ ಪೊನ್ನೇಟಿ

ಕುಶಾಲನಗರ:

ಕುಶಾಲನಗರ ತಾಲೂಕು ಹೆಬ್ಬಾಲೆ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆ ಅಧ್ಯಕ್ಷೆ ಎಚ್.ಪಿ. ಅರುಣಕುಮಾರಿ ಅಧ್ಯಕ್ಷತೆಯಲ್ಲಿ ಸೋಮವಾರ ಪಂಚಾಯ್ತಿ ಸಭಾಂಗಣದಲ್ಲಿ ನಡೆಯಿತು. ಆಡಳಿತ ಮಂಡಳಿ ಸಭೆ ಮತ್ತು ವಾರ್ಡ್ ಸದಸ್ಯರ ಗಮನಕ್ಕೆ ತರದೆ ವ್ಯಕ್ತಿಯೊಬ್ಬರಿಗೆ ವ್ಯಾಪಾರ ಪರವಾನಗಿ ನೀಡಿರುವುದರ ಬಗ್ಗೆ ಸಭೆಯಲ್ಲಿ ಸದಸ್ಯ ಮಂಜುನಾಥ್ ಆಕ್ಷೇಪ ವ್ಯಕ್ತಪಡಿಸಿದರು. ಈ ವಿಚಾರ ಸದಸ್ಯರ ನಡುವೆ ಮಾತಿನ ಚಕಮಕಿಗೆ ಕಾರಣವಾಯಿತು. ಇದರಿಂದ ಒಂದು ತಾಸಿಗೂ ಹೆಚ್ಚು ಕಾಲ ಪರಸ್ಪರ ಚರ್ಚೆ ನಡೆದು ಸಭೆ ಗೊಂದಲದ ಗೂಡಾಯಿತು. ಸದಸ್ಯರು ಮಧ್ಯೆ ಪರಸ್ಪರ ನಿಂದನೆ, ಕೋಲಾಹಲಕ್ಕೆ ಕಾರಣವಾಯಿತು.

ಪಂಚಾಯತಿ ವ್ಯಾಪ್ತಿಯಲ್ಲಿ ಪರಾವನಗಿ ನವೀಕರಣ ಮಾಡದೇ ಕಾರ್ಯನಿರ್ವಹಿಸುತ್ತಿರುವ ಶುಂಠಿ ವಾಷಿಂಗ್ ಮೆಷಿನ್‌ಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಸಭೆಯಲ್ಲಿ ಒತ್ತಾಯ ಕೇಳಿಬಂತು. ಕೆಲವು ಶುಂಠಿ ವಾಷಿಂಗ್ ಮೆಷಿನ್‌ಗಳ ದಾಖಲೆಗಳು ಸರಿಯಿಲ್ಲ. ಈ ಬಗ್ಗೆ ನವೀಕರಣ ಮಾಡುವಾಗ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕು. ವಾರ್ಡ್ ಸದಸ್ಯರ ಗಮನಕ್ಕೆ ತರದೆ ವ್ಯಾಪಾರ ಪರವಾನಗಿ ನೀಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.

ಪಂಚಾಯತಿಗೆ ಮಾಸಿಕ ಬಾಡಿಗೆ ಹಣ ಸಂದಾಯ ಮಾಡದ ವಾಣಿಜ್ಯ ಮಳಿಗೆಗಳನ್ನು ಬಂದ್ ಮಾಡಿ ಎಂದು ಸದಸ್ಯರಾದ ಪರಮೇಶ್, ಮಹಾದೇವ, ಮಂಜುನಾಥ್ ಒತ್ತಾಯ ಮಾಡಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಅಧ್ಯಕ್ಷೆ ಅರುಣಾಕುಮಾರಿ ಮೊದಲು ಮಳಿಗೆಗಳಿಗೆ ನೋಟಿಸ್ ನೀಡಿ ನಂತರ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ ಎಂದರು. ನವೆಂಬರ್‌ನಲ್ಲಿ ಗ್ರಾಮ ದೇವತೆ ಹಬ್ಬ ಇರುವುದರಿಂದ ಬೀದಿ ದೀಪಗಳ ಅಳವಡಿಕೆಗೆ ಟೆಂಡರ್ ಕರೆಯಲು ಸೂಕ್ತ ಕ್ರಮ ಕೈಗೊಳ್ಳಬೇಕು. ಒಂದು ವರ್ಷ ನಿರ್ವಹಣೆ ಕೂಡ ಟೆಂಡರ್‌ದಾರರೇ ಮಾಡುವಂತೆ ಸೂಚನೆ ನೀಡಬೇಕು ಎಂದು ಸದಸ್ಯ ಮಂಜುನಾಥ್ ಸಲಹೆ ನೀಡಿದರು.

ಪಂಚಾಯತಿ ವ್ಯಾಪ್ತಿಯಲ್ಲಿ ಮನೆ ಕಂದಾಯ ಹಾಗೂ ನೀರು ಕಂದಾಯ ಬಾಕಿ ಇದ್ದು, ವಸೂಲಾತಿಗೆ ಕ್ರಮ ಕೈಗೊಳ್ಳಬೇಕು ಎನ್ನುವ ಒತ್ತಾಯ ಕೆಳಿಬಂತು. ಗ್ರಾಮದ ಆರೋಗ್ಯ ಕೇಂದ್ರ ಹಾಗೂ ಶಾಲೆಗಳ ಸುತ್ತ ಬೆಳೆದಿರುವ ಗಿಡಗಂಟಿಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದೂ ಸದಸ್ಯರು ಒತ್ತಾಯಿಸಿದರು.

ಗ್ರಾಮದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಸಮುದಾಯಕ್ಕೆ ಶವ ಸಂಸ್ಕಾರಕ್ಕಾಗಿ ಐದು ಸಾವಿರ ರೂ. ಸಹಾಯಧನ ನೀಡಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಬೀದಿ ನಾಯಿಗಳ ಹಾವಳಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯರು ಸಲಹೆ ನೀಡಿದರು. ದುರಸ್ತಿ ಬಂದಿರುವ ಬೋರ್ ವೆಲ್ ದುರಸ್ತಿ ಮಾಡಿಸಲು ಕ್ರಮ ಕೈಗೊಳ್ಳಬೇಕು ಎಂದು ಸದಸ್ಯ ನಾರಾಯಣ ಒತ್ತಾಯಿಸಿದರು. ಕಾರ್ಯದರ್ಶಿ ಸುರೇಶ್ ಹಿಂದಿನ ಸಭೆ ನಡಾವಳಿ ಹಾಗೂ ಲೆಕ್ಕಪತ್ರ ಓದಿ ಅಂಗೀಕಾರ ಪಡೆದರು. ಸಭೆಯಲ್ಲಿ ಉಪಾಧ್ಯಕ್ಷೆ ಲತಾ, ಸದಸ್ಯರಾದ ಶಿವನಂಜಪ್ಪ, ಮಹಾದೇವ್, ಪವಿತ್ರಾ, ಪುಟ್ಟಲಕ್ಷ್ಮಮ್ಮ, ರತ್ನಮ್ಮ, ಯಶಸ್ವಿನಿ ಚಂದ್ರಶೇಖರ್, ಪಿಡಿಒ ಮೇದಪ್ಪ ಇದ್ದರು.