ಮಾಯಕೊಂಡ: ಸರಳ ಸಾಮೂಹಿಕ ವಿವಾಹಗಲ ಮೂಲಕ ದುಂದು ವೆಚ್ಚ ಹಾಗೂ ಆರ್ಥಿಕ ಹೊರೆ ತಗ್ಗಿಸಿ ಎಂದು ಹೆಬ್ಬಾಳು ವಿರಕ್ತಮಠದ ಮಹಾಂತ ರುದ್ರೇಶ್ವರ ಮಹಾಸ್ವಾಮೀಜಿ ತಿಳಿಸಿದರು.
ಬಸವ ಜಯಂತಿ ಅಂಗವಾಗಿ ದಾವಣಗೆರೆ ತಾಲೂಕಿನ ಹೆಬ್ಬಾಳು ವಿರಕ್ತಮಠದಲ್ಲಿ ಬುಧವಾರ ಆಯೋಜಿಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಸರಕುಗಳ ಬೆಲೆ ಗಗನಕ್ಕೇರಿದೆ. ಅದ್ದೂರಿ ವಿವಾಹ ಮಾಡಲು ಹೋಗಿ ಸಾಲಗಾರರಾಗಿ ನರಳುವುದಕ್ಕಿಂತ ಸರಳ ಸಾಮೂಹಿಕ ವಿವಾಹ ಮಾಡಿ ಖುಷಿಪಡುವುದು ಒಳ್ಳೆಯದು. ಪಾಲಕರು ಮಕ್ಕಳಿಗೆ ಉತ್ತಮ ಸಂಸ್ಕಾರ, ಶಿಕ್ಷಣ ನೀಡಿ ಸಮಾಜದ ಸರ್ವ ಶ್ರೇಷ್ಠ ವ್ಯಕ್ತಿಗಳನ್ನಾಗಿಸಲು ಮುಂದಾಗಬೇಕು ಎಂದರು.
1980ರಲ್ಲಿ ಹೆಬ್ಬಾಳು ವಿರಕ್ತ ಮಠದ ಹಿರಿಯ ಶ್ರೀಗಳು ನಿಧನರಾದರು. ಅದೇ ವರ್ಷ ಬಸವ ಜಯಂತಿ ನಿಮಿತ್ತ ಆಯೋಜಿಸಿದ್ದ ಸಾಮೂಹಿಕ ವಿವಾಹದಲ್ಲಿ 5 ಜೋಡಿಗಳ ವಿವಾಹದೊಂದಿಗೆ ಪ್ರಾರಂಭವಾದ ಕಲ್ಯಾಣ ಕಾರ್ಯ ಇಲ್ಲಿಯವರೆಗೆ 45 ವರ್ಷಗಳ ಕಾಲ ನಡೆದುಕೊಂಡು ಬಂದಿದೆ. ಸುಮಾರು 10 ಸಾವಿರಕ್ಕಿಂತ ಹೆಚ್ಚು ವಿವಾಹಗಳನ್ನು ಮಾಡಲಾಗಿದೆ.
ಶಾಸಕ ಕೆ.ಎಸ್. ಬಸವಂತಪ್ಪ ಮಾತನಾಡಿ, ಹೆಬ್ಬಾಳು ವಿರಕ್ತಮಠದಿಂದ ಸಾಮೂಹಿಕ ವಿವಾಹ ನೆರವೇರಿಸಿಕೊಂಡು ಬಂದಿರುವುದು ಗ್ರಾಮೀಣ ಬಡ ಜನರಿಗೆ ಅನುಕೂಲವಾಗಿದೆ. ಸಾಲ ಮಾಡಿ ಮದುವೆ ಮಾಡುವುದಕ್ಕಿಂತ ಸಾಮೂಹಿಕ ವಿವಾಹ ಮಾಡುವುದು ಸೂಕ್ತ ಎಂದು ತಿಳಿಸಿದರು.
ಇದೇ ವೇಳೆ 17 ಜೋಡಿಗಳು ವೈವಾಹಿಕ ಜೀವನಕ್ಕೆ ಪದಾರ್ಪಣೆ ಮಾಡಿದರು. ಸಾವಿರಾರು ಜನರಿಗೆ ದಾಸೋಹ ವ್ಯವಸ್ಥೆ ಮಾಡಲಾಗಿತ್ತು. ಕಾಂಗ್ರೆಸ್ ಮುಖಂಡರಾದ ಅಣಜಿ ಎಸ್.ಕೆ. ಚಂದ್ರಣ್ಣ, ಹೆಬ್ಬಾಳು ರುದ್ರಮುನಿ, ಬಾಬಣ್ಣ, ಶೇಖರಪ್ಪ, ಶಿವಣ್ಣ, ಪ್ರಶಾಂತ್ ಹಾಗೂ ಮತ್ತಿತರರು ಇದ್ದರು.