ಬಾಕೆತ್ತಿಮಾರು ಎಂಬಲ್ಲಿ ಚಂದ್ರಶೇಖರ್ ಎಂಬುವರ ಮನೆ ಮೇಲೆ ಮರಬಿದ್ದು ಮನೆ ಹಾನಿಗೊಂಡಿರುವುದು. 
ಜಿಲ್ಲೆ

ಕೆಯ್ಯೂರು, ಅರಿಯಡ್ಕದಲ್ಲಿ ಮನೆಗಳಿಗೆ ಹಾನಿ : ಭಾರಿ ಗಾಳಿ-ಮಳೆ ಅವಾಂತರ

ಸೌಮ್ಯ ಆರ್

ಪುತ್ತೂರು ಗ್ರಾಮಾಂತರ: ಪುತ್ತೂರು ತಾಲೂಕಿನ ಗ್ರಾಮಾಂತರ ವ್ಯಾಪ್ತಿಯ ಕೆಯ್ಯೂರು ಮತ್ತು ಅರಿಯಡ್ಕ ಗ್ರಾಪಂನ ಎರಡು ಕಡೆಗಳಲ್ಲಿ ಮರಗಳು ಉರುಳಿಬಿದ್ದು ಮನೆಗೆ ಹಾನಿ ಸಂಭವಿಸಿದೆ.

ಕೆಯ್ಯೂರು ಗ್ರಾಪಂ ವ್ಯಾಪ್ತಿಯ ದೇವಿನಗರ ಸಮೀಪದ ಬಾಕೆತ್ತಿಮಾರು ಎಂಬಲ್ಲಿ ಚಂದ್ರಶೇಖರ್ ಎಂಬುವರ ಮನೆಯ ಮೇಲೆ ಪಕ್ಕದಲ್ಲಿದ್ದ ಮರವೊಂದು ಮಂಗಳವಾರ ರಾತ್ರಿ ಉರುಳಿಬಿದ್ದಿದೆ. ಹೆಂಚಿನ ಮನೆಯ ಮಾಡು ಹಾನಿಗೊಂಡಿದ್ದು, ಮನೆಮಂದಿ ಮನೆಯೊಳಗಿದ್ದರೂ ಅಪಾಯದಿಂದ ಪಾರಾಗಿದ್ದಾರೆ.

ಘಟನಾ ಸ್ಥಳಕ್ಕೆ ಕೆಯ್ಯೂರು ಗ್ರಾಪಂ ಅಧ್ಯಕ್ಷ ಶರತ್‌ಕುಮಾರ್ ಮಾಡಾವು, ಕಾರ್ಯದರ್ಶಿ ಸುರೇಂದ್ರ ರೈ ಇಳಂತಾಜೆ, ಗ್ರಾಮ ಆಡಳಿತಾಧಿಕಾರಿ ಸ್ವಾತಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಅರಿಯಡ್ಕ ಗ್ರಾಪಂ ವ್ಯಾಪ್ತಿಯ ಅರಿಯಡ್ಕ ಗ್ರಾಮದ ಜಾರತ್ತಾರು ಎಂಬಲ್ಲಿ ಹನೀಫ್ ಎಂಬುವರ ಮನೆಯ ಮೇಲೆ ಮರವೊಂದು ಮಂಗಳವಾರ ಉರುಳಿಬಿದ್ದು ಶೀಟು ಅಳವಡಿಸಿದ್ದ ಹೊರಾಂಗಣ ಭಾಗ ಹಾನಿಗೊಂಡಿದೆ. ಶೀಟುಗಳು ಹುಡಿಯಾಗಿದ್ದು, ಸ್ಕೂಟಿಯೊಂದು ಹಾನಿಗೊಂಡಿದೆ. ಮನೆ ಮಂದಿ ಅಪಾಯದಿಂದ ಪಾರಾಗಿದ್ದಾರೆ.

ಘಟನಾ ಸ್ಥಳಕ್ಕೆ ಬುಧವಾರ ಅರಿಯಡ್ಕ ಗ್ರಾಪಂ ಅಧ್ಯಕ್ಷ ಸಂತೋಷ್ ಮಣಿಯಾಣಿ ಕುತ್ಯಾಡಿ, ಸದಸ್ಯ ಹರೀಶ್ ರೈ ಜಾರತ್ತಾರು, ಪಂಚಾಯಿತಿ ಕಾರ್ಯದರ್ಶಿ ಶಿವರಾಮ್ ಭೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ.

ಜಾರತ್ತಾರು ಎಂಬಲ್ಲಿ ಹನೀಫ್ ಎಂಬುವರ ಮನೆ ಮೇಲೆ ಮರವೊಂದು ಉರುಳಿಬಿದ್ದಿರುವುದು.