ಜಿಲ್ಲೆ

ಶಿರಸಿ ತಾಲೂಕಲ್ಲಿ ಭಾರಿ ಮಳೆ, ಉರುಳಿ ಬಿದ್ದ ಅಡಕೆ ಮರಗಳು- ಹಲವೆಡೆ ಮನೆಗಳಿಗೆ ಹಾನಿ

ಶಿರಸಿ: ಗುರುವಾರ ತಡರಾತ್ರಿ ಸುರಿದ ಮಳೆ ಮತ್ತು ಭಾರಿ ಗಾಳಿಯಿಂದಾಗಿ ತಾಲೂಕಿನೆಲ್ಲೆಡೆ ಹಾನಿ ಸಂಭವಿಸಿದೆ. ರಾತ್ರಿ 1 ಗಂಟೆಯ ಸುಮಾರಿಗೆ ಶುರುವಾದ ಗಾಳಿಯಿಂದಾಗಿ ಅನೇಕ ಕಡೆ ಮರಗಳು ಉರುಳಿ ಬಿದ್ದಿವೆ.
ತಾಲೂಕಿನ ನೈಗಾರ ಗ್ರಾಮದಲ್ಲಿ ಹಾಸಣಗಿ ಮಜಿರೆಯ ಹುಲಿಯಾ ಶಿಣ್ಣು ಗೌಡ ಅವರ ವಾಸ್ತವ್ಯದ ಮನೆಯ ಮೇಲ್ಚಾವಣಿ ಶೀಟ್ ಹಾಗೂ ಹೆಂಚು ಮುರಿದು ಬಿದ್ದಿವೆ. ಮಣದೂರು ಗ್ರಾಮದ ಶಿರ್ಲಬೈಲ್ ಗ್ರಾಮದ ಕಮಲಾಕರ ಮರಿಯಾ ಗೌಡ ಅವರ ವಾಸ್ತವ್ಯದ ಮನೆಯ ಛಾವಣಿ ಗಾಳಿಗೆ ಹಾರಿಹೋಗಿದೆ.
ಗಾಳಿ ಮಳೆಯ ಅಬ್ಬರದಿಂದಾಗಿ ತಾಲೂಕಿನ ಸಂಪಖಂಡ ಮತ್ತು ಹುಲೇಕಲ್ ಹೋಬಳಿಯ ಅನೇಕ ಕಡೆಗಳಲ್ಲಿ ತೋಟದಲ್ಲಿ ಅಡಕೆ ಮರಗಳು ಉರುಳಿ ಬಿದ್ದಿವೆ. ಸಂಪಖಂಡ ಹೋಬಳಿಯ ನೇರ್ಲವಳ್ಳಿ ಗ್ರಾಮದ ಸಾಯಿಮನೆಯ ಶ್ರೀ ಧರ ಸುಬ್ರಾಯ ಹೆಗಡೆ ಅವರ ತೋಟದ್ಲಲಿ 50ಕ್ಕೂ ಅಧಿಕ ಮರಗಳು ಮುರಿದಿದ್ದರೆ, ದತ್ತಾತ್ರೇಯ ಹೆಗಡೆ, ಶ್ರೀಪಾದ ಹೆಗಡೆ ಅವರ ತೋಟದಲ್ಲಿಯೂ ಮರಗಳು ಮುರಿದಿವೆ. ಇಲ್ಲಿಯ ನೇರ್ಲದ್ದದ ವಿನಯ ಗಣಪತಿ ಹೆಗಡೆ ಅವರ ತೋಟದಲ್ಲಿಯೂ ಮರಗಳು ಮುರಿದು ಬಿದ್ದು ಹಾನಿಯಾಗಿವೆ. ಗಾಳಿಯಿಂದಾಗಿ ಅಡಕೆ ಮರಗಳು ಒಂದಕ್ಕೊಂದು ಬಡಿದು ಎಳೆ ಕಾಯಿ ನೆಲಕಚ್ಚಿವೆ.
ತಾಲೂಕಿನ ಕುಮಟಾ ರಸ್ತೆಯಿಂದ ಗೋಳಿ ದೇವಾಲಯಕ್ಕೆ ತೆರಳುವ ಮಾರ್ಗದಲ್ಲಿ ರಸ್ತೆ ಅಂಚಿನಲ್ಲಿ ಮಣ್ಣು ಕುಸಿತವಾಗಿದೆ. ಇದರಿಂದಾಗಿ ಇಲ್ಲಿಯ ಸಂಪರ್ಕಕ್ಕೆ ತೊಂದರೆ ಆಗುವ ಆತಂಕವೂ ಉಂಟಾಗಿದೆ.