ಹನೂರು: ತಾಲೂಕಿನ ಪೊನ್ನಾಚಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗುರುವಾರ ರಾತ್ರಿ ಸುರಿದ ಜೋರು ಮಳೆಗೆ ಮರೂರು ಗ್ರಾಮದಲ್ಲಿ ಜಮೀನಿಗೆ ನೀರು ನುಗ್ಗಿ ರಾಗಿ ಫಸಲು ನೆಲ ಕಚ್ಚಿದರೆ, ಬಿತ್ತನೆ ಮಾಡಲಾಗಿದ್ದ ಮುಸುಕಿನ ಜೋಳ ಕೊಚ್ಚಿ ಹೋಗಿದೆ.
ಈ ಭಾಗದಲ್ಲಿ ಹೆಚ್ಚಿನ ರೈತರು ಖುಷ್ಕಿ ಭೂಮಿಯನ್ನು ಹೊಂದಿದ್ದು, ಮಳೆಯನ್ನೇ ಆಶ್ರಯಿಸಿ ಕೃಷಿ ಮಾಡುತ್ತಿದ್ದಾರೆ. ಕಳೆದ ಒಂದೂವರೆ ತಿಂಗಳ ಹಿಂದೆ ಬಿದ್ದ ಸಾಧಾರಣ ಮಳೆಗೆ ಈ ಭಾಗದಲ್ಲಿ ಕೆಲವರು ರಾಗಿ ಹಾಗೂ ಮುಸುಕಿನ ಜೋಳ ಬಿತ್ತನೆ ಮಾಡಿದ್ದು, ಪೈರುಗಳು ತೆನೆ ಕಟ್ಟಿವೆ. ಕೆಲವರು ಇತ್ತೀಚಿಗಷ್ಟೇ ಬಿತ್ತನೆ ಕಾರ್ಯ ಆರಂಭಿಸಿದ್ದರು. ಆದರೆ ರಾತ್ರಿ ಸುರಿದ ಮಳೆಗೆ ಗ್ರಾಮದ ರಾಮಚಂದ್ರು ಅವರ ಜಮೀನಿಗೆ ನೀರು ನುಗ್ಗಿ ರಾಗಿ ಫಸಲು ನೆಲಕ್ಕಚ್ಚಿದ್ದರೆ, ಶಿವಕುಮಾರ್ ಅವರು ಜಮೀನಿನಲ್ಲಿ ಇತ್ತೀಚಿಗಷ್ಟೇ ಬಿತ್ತನೆ ಮಾಡಲಾಗಿದ್ದ ಮುಸುಕಿನ ಜೋಳ ಕೊಚ್ಚಿ ಹೋಗಿದೆ. ಇದರಿಂದ ನಷ್ಟ ಉಂಟಾಗಿದ್ದು, ರೈತರು ಕಂಗಾಲಾಗಿದ್ದಾರೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಗ್ರಾಮದ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲಿಸಿ ಸರ್ಕಾರದಿಂದ ಸೂಕ್ತ ಪರಿಹಾರ ದೊರಕಿಸಿ ಕೊಡುವಂತೆ ರೈತರು ಒತ್ತಾಯಿಸಿದ್ದಾರೆ.
ಹದಗೆಟ್ಟ ಮಣ್ಣಿನ ರಸ್ತೆ: ರಾತ್ರಿ ಜೋರು ಮಳೆ ಸುರಿದ ಪರಿಣಾಮ ಪೊನ್ನಾಚಿಯಿಂದ ಚಿಕ್ಕ ಮರೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮಣ್ಣಿನ ರಸ್ತೆಯಲ್ಲಿ ಗುಂಡಿಗಳು ನಿರ್ಮಾಣವಾಗಿದ್ದು, ನೀರು ನಿಲ್ಲುವಂತಾಗಿದೆ. ಕೆಲವು ಕಡೆಗಳಲ್ಲಿ ತೀರ ಹದಗೆಟ್ಟಿದ್ದು, ಕೆಸರುಮಯವಾಗಿದೆ. ಇದರಿಂದ ಸಾರ್ವಜನಿಕರು ಅದರಲ್ಲೂ ವೃದ್ಧರು, ಮಕ್ಕಳು ಹಾಗೂ ರೋಗಿಗಳು ಓಡಾಡಲು ತೊಂದರೆ ಅನುಭವಿಸುವಂತಾಗಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ರಸ್ತೆಯನ್ನು ಅಭಿವೃದ್ಧಿ ಪಡಿಸುವುದರ ಮೂಲಕ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸುವಂತೆ ಸಾಮಾಜಿಕ ಕಾರ್ಯಕರ್ತ ಪೊನ್ನಾಚಿ ರಾಜು ಒತ್ತಾಯಿಸಿದ್ದಾರೆ.