ಸಿದ್ದಾಪುರ: ತಾಲೂಕಿನಲ್ಲಿ ಅತಿಯಾದ ಮಳೆಯಿಂದ ಈಗಾಗಲೇ 80 ರಿಂದ 85 ಹೆಕ್ಟೇರ್ ಪ್ರದೇಶದಲ್ಲಿ ಅಡಕೆ ಕೊಳೆ ಕಾಣಿಕೊಂಡಿದೆ. ಕೊಳೆ ನಿಯಂತ್ರಣ ಔಷಧ ಸಿಂಪಡಿಸಲು ಮಳೆಯಿಂದ ತೊಂದರೆ ಆಗುತ್ತಿದೆ ಎಂದು ತೋಟಗಾರಿಕಾ ಇಲಾಖೆ ಅಧಿಕಾರಿ ಕೀರ್ತಿ ಹೆಗಡೆ ಹೇಳಿದರು.
ಸ್ಥಳೀಯ ತಾಪಂ ಸಭಾಂಗಣದಲ್ಲಿ ಆಡಳಿತಾಧಿಕಾರಿ ಡಿ.ಆರ್. ನಾಯ್ಕ ಅವರ ಅಧ್ಯಕ್ಷತೆಯಲ್ಲಿ ಕರೆದಿದ್ದ ತಾಪಂ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು. ಸದ್ಯ ಎಲೆ ಚುಕ್ಕಿ ರೋಗದ ಆತಂಕ ಇಲ್ಲ ಎಂದರು.
ಕೃಷಿ ಅಧಿಕಾರಿ ಪ್ರಶಾಂತ ಜಿ.ಎಸ್. ಮಾತನಾಡಿ, ಈ ವರ್ಷ ತಾಲೂಕಿನಲ್ಲಿ ಬಿತ್ತನೆ ಕಡಿಮೆ ಆಗಿದೆ. ಅಗೆ ಮಡಿ ಮಾಡುವ ಸಿದ್ಧ್ದತೆಯಲ್ಲಿ ರೈತರು ತೊಡಗಿಕೊಂಡಿದ್ದಾರೆ. ಪ್ರತಿವರ್ಷ ಜುಲೈ ತಿಂಗಳಲ್ಲಿ ಗದ್ದೆ ನಾಟಿ ಕಾರ್ಯ ಶೇ.60ರಷ್ಟು ಆಗುತ್ತಿತ್ತು. ಈ ವರ್ಷ ಆಗಿಲ್ಲ. ತಾಲೂಕಿನಲ್ಲಿ ರಸಗೊಬ್ಬರ ಹಾಗೂ ಭತ್ತದ ಬೀಜ ದಾಸ್ತಾನಿದೆ ಎಂದರು.
ತಾಲೂಕಿನಲ್ಲಿ ವಿದ್ಯುತ್ ತಂತಿ ಹಾದು ಹೋದಲ್ಲಿ ಹಾಗೂ ರಸ್ತೆಗೆ ಅಡ್ಡವಾಗಿರುವ 383 ಮರಗಳನ್ನು ತೆರವುಗೊಳಿಸಬೇಕಾಗಿದೆ. ಅಲ್ಲದೆ 253 ಮರಗಳ ಟೊಂಗೆಗಳನ್ನು ತೆಗೆಯಬೇಕಾಗಿದೆ. ಈ ಕುರಿತು ಈಗಾಗಲೇ ಆರ್‌ಎಫ್‌ಒಗಳಿಗೆ ಮಾಹಿತಿ ನೀಡಲಾಗಿದೆ. ಅಲ್ಲದೆ, ಎಲ್ಲ ಪಿಡಿಒ ಅವರು ಸಹ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ ಎಂದು ತಾಪಂ ಇಒ ದೇವರಾಜ ಹಿತ್ತಲಕೊಪ್ಪ ಹೇಳಿದರು.
ಆಡಳಿತಾಧಿಕಾರಿ ಮಾತನಾಡಿ, ಅರಣ್ಯ ಇಲಾಖೆ ಕೂಡಲೇ ಕ್ರಮಕೈಗೊಳ್ಳಬೇಕು. ಅರಣ್ಯ ಇಲಾಖೆಯವರು ಸಭೆಗೆ ಬಾರದೇ ಇರುವುದರಿಂದ ಅವರಿಗೆ ತಾಪಂ ಇಒ ಮಾಹಿತಿ ನೀಡಬೇಕೆಂದು ತಿಳಿಸಿದರು. ಜತೆಗೆ ತಾಲೂಕಿನಲ್ಲಿ ನಾಯಿಕಡಿತದ ಪ್ರಮಾಣ ಹೆಚ್ಚಾಗುತ್ತಿರುವುದರಿಂದ ಈ ಕುರಿತು ಸಂಬಂಧ ಪಟ್ಟ ಗ್ರಾಪಂ ಹಾಗೂ ಪಟ್ಟಣದಲ್ಲಿ ಪಪಂ ಕ್ರಮಕೈಗೊಳ್ಳಬೇಕೆಂದು ತಿಳಿಸಿದರು.
ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ವಿವೇಕ ಹೆಗಡೆ ಮಾತನಾಡಿ, ತಾಲೂಕಿನಲ್ಲಿ 35,108 ಜಾನುವಾರುಗಳಿಗೆ ಕಾಲು-ಬಾಯಿ ಲಸಿಕೆ ನೀಡಲಾಗಿದೆ. ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಹೆಚ್ಚಿದೆ. ಇದರಿಂದ ನಿತ್ಯದ ವ್ಯವಹಾರಕ್ಕೂ ತೊಂದರೆ ಆಗುತ್ತಿದೆ ಎಂದರು.
ಶಿಕ್ಷಣ, ಜಿಪಂ.ಲೋಕೋಪಯೋಗಿ, ನೀರಾವರಿ, ಸಮಾಜ ಕಲ್ಯಾಣ, ಹಿಂದುಳಿದ ಇಲಾಖೆ, ಸಿಡಿಪಿಒ ಮತ್ತಿತರ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು. ತಾಪಂ ಲೆಕ್ಕಾಧಿಕಾರಿ ಸುಬ್ರಹ್ಮಣ್ಯ ಭಟ್ಟ ಉಪಸ್ಥಿತರಿದ್ದರು.