ಚಿಕ್ಕಮಗಳೂರು ನಗರದಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಚರಂಡಿಗಳು ತುಂಬಿ ರಸ್ತೆ ಮೇಲೆ ಹರಿದ ನೀರು. 
ಜಿಲ್ಲೆ

ಮಲೆನಾಡು ಭಾಗದಲ್ಲಿ ಭರ್ಜರಿ ವರ್ಷಧಾರೆ

Shivamogga - Desk - Vinayakumar D B

ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಭಾನುವಾರ ಮಧ್ಯಾಹ್ನ ಗುಡುಗು, ಸಿಡಿಲು, ಭಾರಿ ಗಾಳಿ ಸಹಿತ ಧಾರಾಕಾರ ಮಳೆ ಸುರಿದಿದೆ. ಚಿಕ್ಕಮಗಳೂರು ನಗರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಮಧ್ಯಾಹ್ನ 3 ಗಂಟೆಗೆ ಇದ್ದಕ್ಕಿದ್ದಂತೆ ಮೋಡಕವಿದ ವಾತಾವರಣ ಉಂಟಾಗಿ ಭಾರಿ ಗಾಳಿ ಬೀಸತೊಡಗಿತು. ಬಳಿಕ ಕಾದ ಇಳೆಗೆ ಮಳೆ ತಂಪೆರೆಯಿತು.

ಬೆಳಗ್ಗೆ ಬಿರುಬಿಸಿಲಿಗೆ ಜನರು ಮನೆಯಿಂದ ಹೊರಗೆ ಬಾರದ ಸ್ಥಿತಿ ಉಂಟಾಗಿತ್ತು. ಭಾನುವಾರವಾಗಿದ್ದರಿಂದ ನಗರದಲ್ಲಿ ಜನರ ಓಡಾಟ ವಿರಳವಾಗಿತ್ತು. ಮಧ್ಯಾಹ್ನದ ನಂತರ ವಾತಾವರಣ ತಂಪಾಗಿದ್ದರಿಂದ ಜನರ ಓಡಾಟ ಸಾಮಾನ್ಯವಾಗಿತ್ತು.
ಮಲೆನಾಡು ಭಾಗವಾದ ಚಿಕ್ಕಮಗಳೂರು ಸೇರಿದಂತೆ ಶಿರವಾಸೆ, ಮುತ್ತೋಡಿ ಭಾಗ ಹಾಗೂ ಮೂಡಿಗೆರೆ, ಕಳಸ, ಕೊಪ್ಪ, ಶೃಂಗೇರಿ, ಎನ್.ಆರ್.ಪುರದಲ್ಲಿ ಅಲ್ಲಲ್ಲಿ ಸಾಧಾರಣ ಮಳೆಯಾಗಿದೆ. ಬಯಲು ಭಾಗವಾದ ಕಡೂರು, ಅಜ್ಜಂಪುರ ಮತ್ತು ತರೀಕೆರೆ ತಾಲೂಕಿನಲ್ಲಿ ಅಧಿಕ ತಾಪಮಾನ ಕಂಡು ಬರುತ್ತಿದ್ದು ಕೆಲವೇ ಸ್ಥಳಗಳಲ್ಲಿ ಸಾಧಾರಣ ಮಳೆಯಾಗಿದೆ.
ಮಲೆನಾಡಿನಲ್ಲಿ ಈಗಾಗಲೇ ಮರಗಸಿ ಮಾಡಿದ ಸೌಧೆಗಳನ್ನು ಸವರಿಕೊಂಡು ಉರುವಲಿಗೆ ಉಪಯೋಗಿಸಲು ಟ್ರಾೃಕ್ಟರ್ ಮೂಲಕ ಮನೆಗೆ ಸಾಗಿಸಿ ಅವುಗಳನ್ನು ಕೊಟ್ಟಿಗೆಯಲ್ಲಿಡುವ ಕೆಲಸದಲ್ಲಿ ನಿರತವಾಗಿದ್ದಾರೆ. ಮತ್ತೆ ಕೆಲವರು ತೋಟದಲ್ಲಿ ಕಸಿ ತೆಗೆಯುವುದು ಮತ್ತು ಕಾಫಿಗಿಡಗಳಲ್ಲಿ ಔಷಧ ಸಿಂಪಡಣೆ ಕಾರ್ಯ ಆರಂಭಿಸಿದ್ದಾರೆ.
ಉರಿಬಿಸಿಲಿಗೆ ಸುಟ್ಟುಹೋಗಿದ್ದ ಹುಲ್ಲು ಕಳೆದ ವಾರದಿಂದ ಮಳೆ ಸುರಿಯುತ್ತಿರುವುದರಿಂದ ಹಸಿರು ಬಣ್ಣಕ್ಕೆ ತಿರುಗುವ ಮೂಲಕ ಜಾನುವಾರುಗಳು ಹಸಿವು ನೀಗಿಸಿಕೊಳ್ಳಲು ಸಹಕಾರಿಯಾಗಿದೆ. ಇನ್ನೂ ಕೆಲವರು ಭತ್ತದ ಸಸಿಮಡಿಗಳನ್ನು ಮಾಡಿಕೊಳ್ಳಲು ಗದ್ದೆ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ.
ಏಪ್ರಿಲ್‌ನಲ್ಲಿ ಕಾದ ಕಾವಲಿಯಂತಾಗಿದ್ದ ಭೂಮಿ ಇದೀಗ ಸುರಿಯುತ್ತಿರುವ ಮಳೆಯಿಂದ ತಂಪಾಗುತ್ತಿದೆ. ಬಿಸಿಗಾಳಿ ದೂರವಾಗಿ ತಂಪು ವಾತಾವರಣ ಉಂಟಾಗುತ್ತಿದೆ.