ವಿಜಯವಾಣಿ ಸುದ್ದಿಜಾಲ ಗದಗ
ಜಿಲ್ಲೆಯ ವಿವಿಧೆಡೆ ಸೋಮವಾರ ಭಾರಿ ಮಳೆ ಸುರಿಯಿತು. ಭಾನುವಾರ ಬೆಳಗ್ಗೆಯಿಂದಲೇ ಮೋಡ ಮುಸುಕಿದ ವಾತಾವರಣವಿತ್ತು. ಮಧ್ಯಾಹ್ನ ವೇಳೆ ಗುಡುಗು, ಸಿಡಿಲು ಸಮೇತ ಅರ್ಧ ಗಂಟೆಗೂ ಹೆಚ್ಚು ಕಾಲ ಮಳೆಯಾಗಿದೆ. ನಂತರ ಸಂಜೆಯವರೆಗೂ ಕೆಲವೆಡೆ ಜಿಟಿಜಿಟಿ ಮಳೆಯಾದರೆ, ಕೆಲವೆಡೆ ಮೋಡ ಕವಿದ ವಾತಾವರಣವಿತ್ತು. ಗದಗ-ಬೆಟಗೇರಿ ಅವಳಿನಗರದಲ್ಲಿ ಚರಂಡಿಗಳು ತುಂಬಿ ಹರಿದವು.
ಮಳೆಯಿಂದ ನಗರದ ಕೆಲ ಮನೆಗಳಿಗೆ ನೀರು ನುಗ್ಗಿದ್ದರಿಂದ ಜನರು ತೊಂದರೆ ಅನುಭವಿಸಿದರು. ಬೆಟಗೇರಿಯಲ್ಲಿ ರಾಜಕಾಲುವೆ ಒಡೆದು ಸುತ್ತಮುತ್ತಲಿನ ಹೊಲಗಳಿಗೆ ನೀರು ನುಗ್ಗಿತ್ತು.
ಮನೆಗಳಿಗೆ ನುಗ್ಗಿದ ನೀರು: ನರಗುಂದ ಪಟ್ಟಣ ಸೇರಿ ತಾಲೂಕಿನೆಲ್ಲೆಡೆ ಸೋಮವಾರ ಮಧ್ಯಾಹ್ನ ಭಾರಿ ಸಿಡಿಲಿನೊಂದಿಗೆ ಮಳೆಯಾಗಿದೆ. ಬೆಳಗ್ಗೆ ಸ್ವಲ್ಪ ಜಿಟಿಜಿಟಿ ಮಳೆ ಸುರಿದ ಪರಿಣಾಮ ಮೋಡ ಕವಿದ ವಾತಾವರಣ ವಿತ್ತು. ಮಧ್ಯಾಹ್ನ 3 ಗಂಟೆ ಸುಮಾರಿಗೆ ಆರಂಭವಾದ ಮಳೆಯ ಅವಾಂತರಕ್ಕೆ ಪಟ್ಟಣದ ಜನತಾ ಪ್ಲಾಟ್ನ ಕೆಲವು ಮನೆಗಳಿಗೆ ನೀರು ನುಗ್ಗಿತ್ತು. ಬಸವೇಶ್ವರ ದೇವಸ್ಥಾನ ಹಾಗೂ ಹನುಮಂತ ದೇವರ ದೇವಸ್ಥಾನಗಳು ಜಲಾವೃತಗೊಂಡಿದ್ದವು. ಚರಂಡಿಗಳು ತುಂಬಿ ಹರಿದವು. ಬಿರುಗಾಳಿಯ ಹೊಡೆತಕ್ಕೆ ಪಟ್ಟಣದ ಬಾಬಾಸಾಹೇಬ ಭಾವೆ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿರುವ ಎರಡು ಮರದ ಟೊಂಗೆಗಳು ಮುರಿದು ಬಿದ್ದಿವೆ.
ಕೃಷಿ ಚಟುವಟಿಕೆಗೆ ಪೂರಕ: ಮುಂಡರಗಿ ತಾಲೂಕಿನ ಹಮ್ಮಿಗಿ, ಶಿಂಗಟಾಲೂರ, ಬಿದರಹಳ್ಳಿ ಮೊದಲಾದ ಕಡೆ ಸೋಮವಾರ ಉತ್ತಮ ಮಳೆ ಸುರಿದಿದ್ದು, ಪಟ್ಟಣ ಹಾಗೂ ಕೆಲ ಗ್ರಾಮೀಣ ಭಾಗಗಳಲ್ಲಿ ಜಿಟಿಜಿಟಿ ಮಳೆಯಾಗಿದೆ. ಹಮ್ಮಿಗಿ, ಶಿಂಗಟಾಲೂರ ಗ್ರಾಮದಲ್ಲಿ ಅರ್ಧ ಗಂಟೆಗೂ ಹೆಚ್ಚು ಸಮಯ ರಭಸದಿಂದ ಮಳೆ ಸುರಿಯಿತು. ತಾಲೂಕಿನಾದ್ಯಂತ ಮೋಡ ಕವಿದ ವಾತಾವರಣವಿತ್ತು. ಮುಂಗಾರು ಬಿತ್ತನೆ ಕಾರ್ಯಕ್ಕೆ ರೈತರು ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದು, ಈ ಮಳೆ ಪೂರಕವಾಗಿದೆ. ಈಗ ಕೆಲವು ಕಡೆಗಳಲ್ಲಿ ಮಾತ್ರ ಹೆಸರು ಬಿತ್ತನೆ ಮಾಡಲಾಗಿದೆ. ಇನ್ನೊಂದು ಉತ್ತಮ ಮಳೆಯಾದರೆ ರೈತರ ಬಿತ್ತನೆ ಕಾರ್ಯ ಚುರುಕುಗೊಳ್ಳಲಿದೆ.
ರೈತ ಸಮುದಾಯಕ್ಕೆ ಸಂತಸ: ಲಕ್ಷೆ್ಮೕಶ್ವರ ಪಟ್ಟಣದಲ್ಲಿ ಬೆಳಗ್ಗೆ 6ರ ಸುಮಾರಿಗೆ ಪ್ರಾರಂಭವಾದ ಮಳೆ ಅರ್ಧ ಗಂಟೆ ಕಾಲ ಸುರಿಯಿತು. ಮುಂಗಾರಿನ ನಿರೀಕ್ಷೆಯಲ್ಲಿರುವ ರೈತ ಸಮುದಾಯಕ್ಕೆ ಸೋಮವಾರ ಸುರಿದ ಮಳೆ ಸಂತಸ ಉಂಟುಮಾಡಿತು. ಮಧ್ಯಾಹ್ನ 2 ಗಂಟೆಯ ನಂತರ ಕೆಲ ಸಮಯ ಗುಡುಗು ಮಿಶ್ರಿತ ಜಿಟಿಜಿಟಿ ಮಳೆ ಸುರಿಯಿತು. ಮೇ 26ರಂದು ಸುರಿದ ಹದವರ್ತಿ ಮಳೆಗೆ ಶೇಂಗಾ, ಬಿಟಿ ಹತ್ತಿ, ಹೆಸರು ಬಿತ್ತನೆ ಮಾಡಿದ್ದ ರೈತರು ಸೋಮವಾರದ ಮಳೆಗೆ ನಿಟ್ಟುಸಿರು ಬಿಟ್ಟರು. ಸುಡುಬಿಸಿಲು, ಧೂಳುಮಯ ವಾತಾವರಣದಿಂದ ಕಂಗೆಟ್ಟಿದ್ದ ಜನರಿಗೆ ಮಳೆ ತುಸು ನೆಮ್ಮದಿ ತಂದಿತು. ತಗ್ಗು ಗುಂಡಿಗಳಲ್ಲಿ ನೀರು ನಿಂತ ಪರಿಣಾಮ ಗದಗ- ಲಕ್ಷೆ್ಮೕಶ್ವರ ರಸ್ತೆ, ವಿವಿಧೆಡೆ ಸಂಚಾರಕ್ಕೆ ಅಡ್ಡಿಯಾಯಿತು. ಮುಂಗಾರು ಮಳೆ ಸಕಾಲಕ್ಕೆ ಪ್ರಾರಂಭವಾಗಿದ್ದು ಕೃಷಿ ಚಟುವಟಿಕೆಗಳು ಗರಿಗೆದರಿವೆ.