ಜಿಲ್ಲೆ

ಜಿಲ್ಲೆಯಲ್ಲಿ ಮೇ 28 ರವರೆಗೂ ರೆಡ್‌ ಅಲರ್ಟ್‌

Uttara Kannada - Subash Hegde

ಕಾರವಾರ:ಜಿಲ್ಲೆಯಲ್ಲಿ ಮುಂಗಾರು ಪೂರ್ವ ವರುಣನ ಆರ್ಭಟ ಮುಂದುವರಿದಿದೆ. ಅರಬ್ಬಿ ಸಮುದ್ರದಲ್ಲಿ ವಾಯು ಭಾರ ಕುಸಿತ ಉಂಟಾದ ಪರಿಣಾಮ ಮಳೆ ಮೇ 28 ರವರೆಗೂ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಜೂನ್ 24 ರಂದು ಆರೇಂಜ್ ಅಲರ್ಟ್ ಇದ್ದು, ಜೂನ್ 25 ರಿಂದ 28 ರವರೆಗೂ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದ್ದು, ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.

ಶುಕ್ರವಾರ ಕರಾವಳಿಯ ವಿವಿಧೆಡೆ ಭಾರಿ ಮಳೆಯಾಯಿತು. ಬೆಳಗಿನ ವರದಿಯಂತೆ ಕಾರವಾರದ ವೈಲವಾಡ ಹೋಬಳಿಯಲ್ಲಿ 156.5, ಅಮದಳ್ಳಿಯಲ್ಲಿ 144, ಕಡವಾಡ 119.5, ಗೋಟೆಗಾಳಿ 114, ಅಂಕೋಲಾ ಬೆಳಸೆಯಲ್ಲಿ 102 ಮಿಮೀ ಮಳೆಯಾಗಿದೆ. ಅಂಕೋಲಾ ತಾಲೂಕಿನಲ್ಲಿ ಸರಾಸರಿ -88.8, ಭಟ್ಕಳ-34.6, ಹಳಿಯಾಳ-10.9, ಹೊನ್ನಾವರ-57.9, ಕಾರವಾರ-88.4, ಕುಮಟಾ-62.9, ಮುಂಡಗೋಡ-13.2, ಸಿದ್ದಾಪುರ-36.6, ಶಿರಸಿ-38.3, ಜೊಯಿಡಾ-21.5, ಯಲ್ಲಾಪುರ-19, ದಾಂಡೇಲಿ-17.5 ಮಿಮೀ ಮಳೆಯಾಗಿದೆ.

ಶುಕ್ರವಾರ ಅರಬ್ಬಿ ಸಮುದ್ರದಲ್ಲಿ ಅಬ್ಬರದ ಅಲೆಗಳು ಏಳುತ್ತಿವೆ. ಪರಿಣಾಮ ಸಮುದ್ರ ಕೊರೆತದ ಆತಂಕ ಶುರುವಾಗಿದೆ. ಮೇ 24 ರಂದು ಕಾರವಾರ ಭಾಗದಲ್ಲಿ ಅಲೆಗಳ ಪ್ರಭಾವ ಹೆಚ್ಚಿರಲಿದೆ ಎಂದು ಇನ್ಕೋಯಿಸ್ ಸಂಸ್ಥೆಯ ಹವಾಮಾನ ವರದಿ ಎಚ್ಚರಿಸಿದೆ. ಅಂಕೋಲಾದ ಹಾರವಾಡ, ಕಾರವಾರದ ದೇವಬಾಗ, ಮಾಜಾಳಿ ವಿವಿಧ ತೀರಗಳಲ್ಲಿ ಸಮುದ್ರ ಮುಂದೆ ಬಂದಿದೆ. ಭಾರಿ ಗಾಳಿ ಬೀಸುತ್ತಿರುವ ಪರಿಣಾಮ ಮರಗಳು ವಿದ್ಯುತ್ ಕಂಬಗಳ ಮೇಲೆ ಬೀಳುತ್ತಿದೆ. ಜಿಲ್ಲೆಯ ಎಲ್ಲೆಡೆ ತೀವ್ರ ಸ್ವರೂಪದಲ್ಲಿ ವಿದ್ಯುತ್ ಕಡಿತವಾಗುತ್ತಿದೆ. ಕೆಲವು ಗ್ರಾಮೀಣ ಭಾಗಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡು ಎರಡು ದಿನಗಳು ಕಳೆದಿವೆ. ವಿದ್ಯುತ್ ಸಂಪರ್ಕ ಇಲ್ಲದ ಕಾರಣ ಜಿಲ್ಲೆಯ ಹಲವು ಗ್ರಾಮಗಳಲ್ಲಿ ಬಿಎಸ್‌ಎನ್‌ಎಸ್ ಮೊಬೈಲ್ ನೆಟ್ವರ್ಕ್ ಕೂಡ ಇಲ್ಲವಾಗಿದೆ.