ಜಿಲ್ಲೆ

ಉತ್ತರ ಕನ್ನಡದಲ್ಲಿ ಭಾರಿ ಮಳೆ ಮುನ್ನೆಚ್ಚರಿಕೆ

ಕಾರವಾರ: ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, ಅನಾಹುತಗಳ ಸರಣಿಯೇ ನಡೆದಿದೆ. ಜು.20 ರಂದೂ ರೆಡ್ ಅಲರ್ಟ್ ಘೋಷಿಸಲಾಗಿದೆ. ಶಾಲೆ, ಪಿಯು, ಐಟಿಐ ಹಾಗೂ ಡಿಪ್ಲೊಮಾ ಕಾಲೇಜ್‌ಗಳಿಗೆ ಜು.20 ರಂದೂ ರಜೆ ಘೋಷಿಸಿ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಆದೇಶ ಹೊರಡಿಸಿದ್ದಾರೆ. ,ಕಾರವಾರ ತಾಲೂಕಿನ 6 , ಅಂಕೋಲದ 6, ಕುಮಟಾದ 5, ಹೊನ್ನಾವರದ 13 ಸೇರಿದಂತೆ ಒಟ್ಟು 30 ಕಾಳಜಿ ಕೇಂದ್ರಗಳಲ್ಲಿ 2,373 ಮಂದಿ ಆಶ್ರಯ ಒದಗಿಸಲಾಗಿದೆ.


ಸೇತುವೆ ಕೊಚ್ಚಿ ಹೋಗುವ ಆತಂಕ


ಅಂಕೋಲಾ ತಾಲೂಕಿನ ಅಚವೆ ಪಂಚಾಯಿತಿ ವ್ಯಾಪ್ತಿಯ ಕುಂಟಗಣಿ ಹಳ್ಳದ ಸೇತುವೆಯ ಮೇಲೆ ಶುಕ್ರವಾರ ಸಂಜೆ ನೀರು ಹರಿದಿದೆ. ಸೇತುವೆ ಸುಮಾರು 30 ವರ್ಷ ಹಳೆಯದಾಗಿದ್ದು, ಶಿಥಿಲವಾಗಿದೆ. ಹೀಗೆ ಮಳೆ ಮುಂದುವರಿದಲ್ಲಿ ಕೊಚ್ಚಿ ಹೋಗುವ ಸಾಧ್ಯತೆ ಇದೆ. ಲೋಕೋಪಯೋಗಿ ಇಲಾಖೆಯ ಅಽಕಾರಿಗಳು ಪರಿಶೀಲನೆ ನಡೆಸಿ ಕ್ರಮ ವಹಿಸಬೇಕು ಎಂದು ಅಚವೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಾಲಚಂದ್ರ ಶೆಟ್ಟಿ ಮನವಿ ಮಾಡಿದ್ದಾರೆ.

ತೆರವು ಕಾರ್ಯಾಚರಣೆ ಮುಕ್ತಾಯ


ಕಾರವಾರ-ಕೈಗಾ ರಸ್ತೆಯ ಮಂದ್ರಾಳಿ ಸಮೀಪ ಗುಡ್ಡ ಕುಸಿತದಿಂದ ಕಾರವಾರ-ಇಳಕಲ್ ರಾಜ್ಯ ಹೆದ್ದಾರಿಯಲ್ಲಿ ವಾಹನ ಸಂಚಾರವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರು. ಶುಕ್ರವಾರ ಕುಸಿದ ಗುಡ್ಡ ತೆರವು ಮಾಡಲಾಗಿದೆ. ಆದರೆ, ಮತ್ತೆ ಗುಡ್ಡ ಕುಸಿಯುವ ಆತಂಕ ಇರುವುದರಿಂದ ಒಂದು ದಿನ ಪರಿಶೀಲಿಸಿ ನಂತರ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು ಎಂದು ಪಿಡಬ್ಲುಡಿ ಎಇಇ ರಾಮು ಅರ್ಗೇಕರ್ ತಿಳಿಸಿದ್ದಾರೆ.

  • ಮಳೆ ಪ್ರಮಾಣ (ಮಿಮೀಗಳಲ್ಲಿ)
  • (ಜು.19 ರ ಬೆಳಗಿನ ವರದಿಯಂತೆ ಹಿಂದಿನ 24 ಗಂಟೆಗಳಲ್ಲಿ )
  • ಅಂಕೋಲಾ-148
  • ಭಟ್ಕಳ-95.8
  • ದಾಂಡೇಲಿ-94
  • ಹಳಿಯಾಳ-56.2
  • ಹೊನ್ನಾವರ-70.1
  • ಜೊಯಿಡಾ-99.2
  • ಕಾರವಾರ-100.4
  • ಕುಮಟಾ-116.2
  • ಮುಂಡಗೋಡ-26.4
  • ಸಿದ್ದಾಪುರ-150.4
  • ಶಿರಸಿ-148.5
  • ಯಲ್ಲಾಪುರ-76