ಮಂಗಳೂರು: ಕರಾವಳಿಯಲ್ಲಿ ಗುರುವಾರ (ಆಗಸ್ಟ್ 4) ಮತ್ತು ಶುಕ್ರವಾರಕ್ಕೆ (ಆಗಸ್ಟ್ 5) ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದ್ದು, ಮಳೆ ಬಿರುಸಾಗುವ ಸಾಧ್ಯತೆಯಿದೆ. ಸಮುದ್ರದಲ್ಲಿ ಗಾಳಿ ಇರುವುದರಿಂದ ಮೀನುಗಾರರು ಸಮುದ್ರಕ್ಕೆ ತೆರಳದಂತೆ ಎಚ್ಚರಿಕೆ ನೀಡಲಾಗಿದೆ.
ಮಂಗಳೂರಿನಿಂದ ಕಾರವಾರದವರೆಗೆ ಕಡಲು ಪ್ರಕ್ಷುಬ್ಧವಾಗಿದ್ದು, ಬೃಹತ್‌ಗಾತ್ರದ ಅಲೆಗಳು ದಡಕ್ಕೆ ಅಪ್ಪಳಿಸಲಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬುಧವಾರ ಮುಂಜಾನೆ ವೇಳೆ ಬಿರುಸಿನ ಮಳೆಯಾಗುವ ಮುನ್ಸೂಚನೆ ಇತ್ತಾದರೂ ಹೊತ್ತೇರುತ್ತಿದ್ದಂತೆ ಮಳೆ ದೂರವಾಗಿ ಮೋಡ ಕವಿದ ವಾತಾವರಣ ಕಂಡು ಬಂದಿದೆ. ಸಂಜೆ ವೇಳೆಗೆ ಮತ್ತೆ ಅಲ್ಲಲ್ಲಿ ಮಳೆ ಸುರಿದಿದೆ.
ಘಟ್ಟದ ತಪ್ಪಲಿನ ಕೆಲವು ಭಾಗಗಳಲ್ಲಿ ಆಗಾಗ್ಗೆ ಸಾಮಾನ್ಯ ಮಳೆಯಾಗಿದೆ. ಮಂಗಳೂರು, ಬಂಟ್ವಾಳ, ವಿಟ್ಲ, ಸುರತ್ಕಲ್, ಮೂಡುಬಿದಿರೆ ಸೇರಿದಂತೆ ವಿವಿಧೆಡೆ ಬೆಳಗ್ಗೆ ಬಿರುಸಾದ ಮಳೆ ಬಳಿಕ ದೂರವಾಗಿದೆ. ಕರಾವಾಳಿ ಭಾಗದಲ್ಲಿ ಮಳೆಯಾಗದಿದ್ದರೂ, ಘಟ್ಟದ ತಪ್ಪಲಿನ ಮಳೆಯಿಂದಾಗಿ ನದಿಗಳಲ್ಲಿ ನೀರಿನ ಮಟ್ಟದಲ್ಲಿ ಏರಿಕೆಯಾಗಿದೆ. ನದಿಪಾತ್ರದ ಕೃಷಿ ಭೂಮಿಗಳಿಗೆ ಕೆಲವೆಡೆ ನೀರು ನುಗ್ಗಿದೆ.