ಹುಬ್ಬಳ್ಳಿ: ಕಳೆದ ಮೂರ್ನಾಲ್ಕು ದಿನದಿಂದ ಸುರಿಯುತ್ತಿರುವ ಮಳೆಗೆ ಮಹಾನಗರದ ಜನತೆ ನಲುಗಿದ್ದಾರೆ. ತೀವ್ರ ಶೀತಗಾಳಿ, ತಂಪು ವಾತಾವರಣದಿಂದ ಮನೆಯಿಂದ ಹೊರಗೆ ಬರದಂತಾಗಿದೆ. ಬಿಟ್ಟೂ ಬಿಡದೇ ಮಳೆ ಸುರಿಯುತ್ತಿರುವುದರಿಂದ ಜನಜೀವನ ಅಸ್ತವ್ಯಸ್ತವಾಗಿದೆ.
ಮಳೆಯು ತೀವ್ರಗೊಂಡ ಹಿನ್ನೆಲೆಯಲ್ಲಿ ಶಾಲೆ, ಕಾಲೇಜುಗಳಿಗೆ ರಜೆ ನೀಡಿರುವುದರಿಂದ ಸಾರ್ವಜನಿಕರು ಒಂದಿಷ್ಟು ನಿಟ್ಟುಸಿರು ಬಿಟ್ಟಿದ್ದಾರೆ. ಮಕ್ಕಳನ್ನು ಮಳೆಯಲ್ಲಿ ಶಾಲೆಗೆ ಕಳಿಸುವುದು ಹೇಗಪ್ಪ ಎಂಬ ಚಿಂತೆಯಲ್ಲಿದ್ದವರಿಗೆ ಉಸಿರು ಬಂದಂತಾಗಿದೆ.
ಹಲವು ಕಡೆಗಳಲ್ಲಿ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿರುವುದರಿಂದ ಬಸ್ ಗಳು ಇಲ್ಲದೇ ಜನರು ಪರದಾಡಿದ್ದಾರೆ.
ನಗರದ ನಾಲಾಗಳು ತುಂಬಿ ಹರಿಯುತ್ತಿವೆ. ಉಣಕಲ್ಲ ಕೆರೆ ಇದೀಗ ಎರಡನೇ ಬಾರಿ ತುಂಬಿದೆ. ನಾಲಾ ಅಕ್ಕಪಕ್ಕದ ಬಡಾವಣೆ ಜನರು ಆತಂಕದಲ್ಲೇ ಜೀವನ ನಡೆಸುವಂತಾಗಿದೆ. ನಗರದ ಅನೇಕ ಕಡೆಗಳಲ್ಲಿ ಮನೆಗಳಿಗೆ ಧಕ್ಕೆಯಾಗಿದೆ. ಭಾಗಶಃ ಗೋಡೆಗಳು ಬಿದ್ದು ಹಾನಿಯಾಗಿದೆ.
ಹುಬ್ಬಳ್ಳಿ ನಗರ ಹಾಗೂ ಗ್ರಾಮೀಣ ಸೇರಿ 13 ಮನೆಗಳಿಗೆ ತೊಂದರೆಯಾಗಿದೆ. ಗ್ರಾಮೀಣ ಭಾಗದಲ್ಲಿ ರೈತರು ಹೊಲಗಳಿಗೆ ಹೋಗದಂತ ಸ್ಥಿತಿ ನಿರ್ಮಾಣವಾಗಿದೆ. ಹೊಲದಲ್ಲೆಲ್ಲ ನೀರು ನಿಂತಿದೆ. ಹೆಸರು, ಸೋಯಾಬೀನ್, ಶೇಂಗಾ, ಅಲಸಂದೆ, ಉದ್ದು, ಗೋವಿನಜೋಳ ಮುಂತಾದ ಬೆಳೆಗಳು ನೀರಲ್ಲಿ ನಿಂತಿವೆ.
ಹೆಸರು ಬೆಳೆ ಇದೀಗ ಕೊಯ್ಲಿಗೆ ಬರುವ ಸಮಯ. ನಿರಂತರ ಮಳೆ ಸುರಿಯುತ್ತಿರುವುದರಿಂದ ಕಾಳುಗಳು ಗಿಡದಲ್ಲಿಯೇ ಮೊಳಕೆಯೊಡೆಯುತ್ತಿವೆ ಎಂದು ರೈತರು ತಿಳಿಸಿದ್ದಾರೆ. ಉಳಿದ ಬೆಳೆಗಳು ಸಹ ಕೀಟ ಭಾದೆಯಿಂದ ನಲುಗಿ ಹೋಗಿವೆ.
ಬೆಳೆ ವಿಮೆಗೆ ಅರ್ಜಿ ಸಲ್ಲಿಸಿ:
2025-26ನೇ ಸಾಲಿನಲ್ಲಿ ಹುಬ್ಬಳ್ಳಿ ತಾಲೂಕಿನಲ್ಲಿ ಮುಂಗಾರು ಹಂಗಾಮಿನ ಪ್ರಮುಖ ಬೆಳೆಯಾದ ಹೆಸರು ಪ್ರಸ್ತುತ ಕಟಾವು ಹಂತದಲ್ಲಿದೆ. ತಾಲೂಕಿನಲ್ಲಿ ಕಳೆದ ಮೂರು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಹೆಸರು ಬೆಳೆ ಕಟಾವು ಕಾರ್ಯ ಕೈಗೊಳ್ಳಲು ಸಾಧ್ಯವಾಗದೇ ಕಾಳುಗಳು ಕಾಯಿಯಲ್ಲಿಯೇ ಮೊಳಕೆ ಒಡೆಯುತ್ತಿವೆ.
ಪ್ರಧಾನಮಂತ್ರಿ ಕರ್ನಾಟಕ ರೈತ ಸುರಕ್ಷಾ ಫಸಲ್ ಬಿಮಾ ಯೋಜನೆಯಡಿ ಹೆಸರು ಬೆಳೆಗೆ ನೊಂದಾಯಿಸಿದ ರೈತರು (ವಿಮೆ ತುಂಬಿದ ರೈತರು) ಸ್ಥಳಿಯ ನಿರ್ದಿಷ್ಟ ಪ್ರಕೃತಿ ವಿಕೋಪಗಳಿಂದ ಆಗುವ ನಷ್ಟ ಪರಿಹಾರಕ್ಕಾಗಿ ಆಗಸ್ಟ್ 22ರೊಳಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರಗಳಲ್ಲಿ ವಿಮಾ ಸಂಸ್ಥೆಯ ಪ್ರತಿನಿಧಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಬೆಳೆವಿಮೆ ನೋಂದಣಿ ಪ್ರತಿ, ಉತಾರ್ ಹಾಗೂ ಬ್ಯಾಂಕ್ ಪಾಸ್ಬುಕ್ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಅಗ್ರಿಕಲ್ಚರ್ ಇನ್ಸುರನ್ಸ್ ಕಂಪನಿ ಅಥವಾ ತಾಲೂಕಿನ ವಿಮಾ ಸಂಸ್ಥೆ ಪ್ರತಿನಿಧಿ ಬಿರೇಶ ವಡ್ಡರ ಅವರನ್ನು ಸಂಪರ್ಕಿಸುವಂತೆ ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕಿ ಮಂಜುಳಾ ತೆಂಬದ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.
ಆಗ್ರಹ: ಧಾರವಾಡ ಜಿಲ್ಲೆಯಾದ್ಯಂತ ಅತಿವೃಷ್ಟಿಯಿಂದ ಮುಂಗಾರು ಬೆಳೆಗಳಾದ ಹೆಸರು, ಸೋಯಾಬಿನ್, ಉದ್ದು ಹಾಗೂ ಗೋವಿನ ಜೋಳ ಪೂರ್ಣ ಪ್ರಮಾಣದಲ್ಲಿ ಹಾನಿ ಆಗಿದ್ದು, ಕೂಡಲೇ ರಾಜ್ಯ ಸರ್ಕಾರ ಒಂದು ಹೆಕ್ಟೇರಿಗೆ ಕನಿಷ್ಠ 25 ಸಾವಿರ ರೂ. ಪರಿಹಾರ ನೀಡಬೇಕೆಂದು ರೈತರು ಆಗ್ರಹಿಸಿದ್ದಾರೆ.