ಮಂಗಳೂರು/ನೆಲ್ಯಾಡಿ/ಪುತ್ತೂರು
ಕಳೆದ 2 ದಿನದಿಂದ ಪಶ್ಚಿಮಘಟ್ಟ ಘಾಟ್ ಪ್ರದೇಶದಲ್ಲಿ ಭಾರಿ ಮಳೆಯಾಗಿದ್ದರಿಂದ ಶಿರಾಡಿ, ಚಾರ್ಮಾಡಿ, ಸಂಪಾಜೆ ಘಾಟಿಯ ಹಲವೆಡೆ ಲಘು ಭೂಕುಸಿತವಾಗಿದೆ.
ದ.ಕ ಜಿಲ್ಲೆಗೆ ಹೊಂದಿಕೊಂಡಿರುವ ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟ್‌ನ ಹಲವಡೆ ಗುಡ್ಡ ಕುಸಿದರೂ ರಸ್ತೆ ಸಂಚಾರಕ್ಕೆ ಯಾವುದೇ ತೊಂದರೆಯಾಗಿಲ್ಲ. ಆದರೆ ಈ ಹೆದ್ದಾರಿಯ ಸಕಲೇಶಪುರದ ಮಾರನಹಳ್ಳಿ ಸಮೀಪ ಗುಡ್ಡ ಕುಸಿತವಾಗಿದ್ದರಿಂದ ಗುರುವಾರ ಬೆಗ್ಗಿನಿಂದ ಸಂಜೆಯ ವರೆಗೆ ಶಿರಾಡಿ ಘಾಟ್ ಮೂಲಕ ಹಾಸನ, ಸಕಲೇಶಪುರ ಸಂಪರ್ಕ ಕಡಿತವಾಗಿತ್ತು. ಗುಂಡ್ಯದ ಅಡ್ಡಹೊಳೆಯಿಂದ ಕಿಲೋಮಿಟರ್ ವ್ಯಾಪ್ತಿಯ ಹೆದ್ದಾರಿಯಲ್ಲಿ ಟ್ರಕ್, ಲಾರಿ, ಸಂಚಾರಿ ವಾಹನಗಳು ರಸ್ತೆ ಬದಿಯಲ್ಲೇ ಇತ್ತು. ಚಾರ್ಮಾಡಿ ಘಾಟಿಯ ಅಲೆಕಾನ್ ಎಷ್ಟೇಟ್ ಉತ್ತರ ದಿಕ್ಕಿನಲ್ಲಿ ಗುಡ್ಡ ಕುಸಿದಿದೆ, ಮತ್ತು ಘಾಟ್ ಬೆಟ್ಟಗಳಿಂದ ಜಲಪಾತದ ರೀಯಿಯಲ್ಲಿ ನೀರಿನ ಹರಿಯುವಿಕೆ ಹೆಚ್ಚಾಗಿ ಕಂಡುಬಂದಿರುವುದರಿಂದ ಚಾರ್ಮಾಡಿ- ಕೊಟ್ಟಿಗೆಹಾರ ಸಂಚಾರವೂ ಕೆಲವು ಹೊತ್ತು ಅಪಾಯಕಾರಿಯಾಗಿ ಪರಿಣಮಿಸಿತ್ತು. ದ.ಕ ಸಂಪರ್ಕಿಸುವ ಸಂಪಾಜೆ ಘಾಟ್‌ನ ಮದೆನಾಡು ಎಂಬಲ್ಲಿ ಗುಡ್ಡ ಕುಸಿದು ದ.ಕ-ಕೊಡಗು ಸಂಚಾರಕ್ಕೆ ತೊಂದರೆಯಾಗಿದೆ.
*ಮಂಗಳೂರು-ಬೆಂಗಳೂರು ರೈಲು, ವಾಹನ ಸಂಚಾರಕ್ಕೆ ತೊಂದರೆ
ಮಂಗಳೂರು ರೈಲ್ವೆ ಪೊಲೀಸ್ ವಿಭಾಗ ವ್ಯಾಪ್ತಿಯ ಸಕಲೇಶಪುರ ತಾಲೂಕಿನ ಮಾರನಹಳ್ಳಿ ಸಮೀಪದ ದೊಡ್ಡ ತಪ್ಪಲು ರೈಲ್ವೆ ಟ್ರ್ಯಾಕ್‌ಗೆ ಗುಡ್ಡಜರಿದು ಮಣ್ಣು ಬೀಲುತ್ತಿದ್ದು, ಮಂಗಳೂರು-ಬೆಂಗಳೂರು ರೈಲು ಸಂಚಾರಕ್ಕೂ ತೊಂದರೆಯಾಗಿದೆ. ಇದೇ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 75ರ ಮಾರನಹಳ್ಳಿ ಬಳಿ ಬೃಹತ್ ಗುಡ್ಡದ 50 ಅಡಿ ಮೇಲ್ಭಾಗದಿಂದ ಮಣ್ಣು ಕುಸಿದು ಹೆದ್ದಾರಿಗೆ ಬೀಳುತ್ತಿರುವುದರಿಂದ ದ.ಕ ಹಾಗೂ ಹಾಸನ ಸಂಪರ್ಕ 3 ಗಂಟೆ ಸ್ಥಗಿತವಾಗಿತ್ತು. ಸಂಜೆ ನಂತರ ನಿಧಾನ ಗತಿಯಲ್ಲಿ ಎರಡು ಬದಿಯ ವಾಹನಕ್ಕೂ ಸಂಚಾರ ವ್ಯವಸ್ಥೆ ಕಲ್ಪಿಸಲಾಗಿದೆ. ಸಮರ್ಪಕ ರಸ್ತೆ ಸಂಚಾರ ಇರದ ಕಾರಣ ಮಂಗಳೂರಿನಿಂದ ಬೆಂಗಳೂರು ಸೇರಿದಂತೆ ಹೊರಜಿಲ್ಲೆಗೆ ಹೊರಟ ಕಚ್ಚಾವಸ್ತು ತುಂಬಿದ ಟ್ರಕ್, ಲಾರಿಗಳು ಗುಂಡ್ಯದ ಅಡ್ಡ ಹೊಳೆ ಸಮೀಪದ ಗುಡ್ಡ ಪ್ರದೇಶದಲ್ಲಿ ಠಿಕಾಣಿ ಹೂಡಿದೆ. ಶಿರಾಡಿ ಸುತ್ತಮುತ್ತ ಗುಡ್ಡ ಜರಿದು, ಮಣ್ಣುಗಳ ರಾಶಿ ಹೆದ್ದಾರಿ ರಸ್ತೆಗೆ ಬೀಳುವ ಅಪಾಯವಿರುವುದರಿಂದ ವಾಹನ ಸಂಚಾರ ನಿಧಾನಗತಿಯಲ್ಲಿ ಸಾಗುತ್ತಿದೆ.
-------------------------
ಬದಲಿ ಮಾರ್ಗ ಸೂಚಿಸಿದ ದ.ಕ ಜಿಲ್ಲಾಡಳಿತ
ಧಾರಾಕಾರ ಮಳೆಗೆ ಶಿರಾಡಿ ಘಾಟ್ ವ್ಯಾಪ್ತಿಯ ದೋಣಿಗಲ್ ಬಳಿ ಗುಡ್ಡ ಕುಸಿತಗೊಂಡು ಹೆದ್ದಾರಿ ಸಂಚಾರ ಬಂದ್ ಆಗಿದೆ. ಇದರಿಂದಾಗಿ ಮಂಗಳೂರು-ಬೆಂಗಳೂರು ನಡುವೆ ವಾಹನ ಸಂಚಾರ ಸ್ಥಗಿತಗೊಂಡಿದ್ದು, ವಾಹನಗಳು ಸಾಲುಗಟ್ಟಿ ನಿಂತಿದ್ದು, ಮಧ್ಯಾಹ್ನ ವರೆಗೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಬೆಂಗಳೂರಿಗೆ ವಾಹನಗಳನ್ನು ಬದಲಿ ಮಾರ್ಗದಲ್ಲಿ ಸಂಚರಿಸುವಂತೆ ಜಿಲ್ಲಾಡಳಿತ ಸೂಚಿಸಿದೆ. ಈ ಬಗ್ಗೆ ಮಾಣಿ ಜಂಕ್ಷನ್‌ನಲ್ಲಿ ಬ್ಯಾರಿಕೇಡ್ ಅಳವಡಿಸಿ ಬ್ಯಾನರ್‌ನಲ್ಲಿ ಸೂಚನೆ ನೀಡಲಾಗಿದೆ. ಇದರಿಂದಾಗಿ ಮಂಗಳೂರು-ಬೆಂಗಳೂರು ಮಧ್ಯೆ ಸುತ್ತು ಬಳಸಿ ಸಂಚರಿಸುವಂತಾಗಿದೆ.
-------------------
ಅಪಾಯ ಮಟ್ಟದಲ್ಲಿ ನದಿ ಹರಿಯುವಿಕೆ, ತುಂಬೆ ಡ್ಯಾಂನ ಎಲ್ಲ ಗೇಟ್ ಓಪನ್
ಉಪ್ಪಿನಂಗಡಿ ನೇತ್ರಾವತಿ ಮತ್ತು ಕುಮಾರಧಾರ ನದಿ ಸಂಗಮ ಸ್ಥಳದಲ್ಲಿ 28.60 ಮೀಟರ್(ಅಪಾಯ ಮಟ್ಟ 31.5 ಮೀಟ್) ಹಾಗೂ ಬಂಟ್ವಾಳದಲ್ಲಿ ನೇತ್ರಾವತಿ ನದಿ 7.3 ಮೀಟರ್(ಅಪಾಯ ಮಟ್ಟ 8.5 ಮೀಟ್) ನಲ್ಲಿ ಹರಿಯುತ್ತಿದೆ. ಉಪ್ಪಿನಂಗಡಿಯಲ್ಲಿ ನದಿ ನೀರು ಅಪಾಯ ಮಟ್ಟ 29 ಮೀಟರ್ ಮೀರಿ 29.1 ಮೀಟರ್‌ನಷ್ಟು ಎತ್ತರದಲ್ಲಿ ಹರಿದಿದೆ. ನೀರಿನ ಹರಿಯುವಿಕೆ ಹೆಚ್ಚಳವಾಗುತ್ತಿದ್ದಂತೆ ತುಂಬೆ ಡ್ಯಾಂನ ಎಲ್ಲ ಗೇಟ್ ಓಪನ್ ಮಾಡಲಾಗಿದೆ. ತುಂಬೆ, ಪರಂಗಿಪೇಟೆ, ಸಹ್ಯಾದ್ರಿ, ಅಡ್ಯಾರ್ ಸುತ್ತಮುತ್ತ ನೀರಿನ ಮಟ್ಟ ಹೆಚ್ಚಳವಾಗಿದ್ದು, ರಾಷ್ಟ್ರೀಯ ಹೆದ್ದಾರಿವರೆಗೂ ಆಸುಪಾಸಿನಲ್ಲಿತ್ತು. ನೆರೆಗೆ ಬಂಟ್ವಾಳದಲ್ಲಿ 3.576 ಎಕರೆ ಕೃಷಿಭೂಮಿ ಹಾನಿಗೀಡಾಗಿದೆ. ಇದರಿಂದಾಗಿ ಗುರುವಾರ ಬೆಳಗ್ಗೆ ನದಿ ತೀರ ಪ್ರದೇಶದ ನಿವಾಸಿಗಳನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸುವಂತೆ ಸೂಚಿಸಲಾಗಿದ್ದು, ದಿನಪೂರ್ತಿ ಕಂದಾಯ ಇಲಾಖೆ ಸಿಬ್ಬಂದಿ ಸ್ಥಳದಲ್ಲಿ ನಿಗಾ ಇರಿಸುತ್ತಿದ್ದಾರೆ.
------------------
ಮಾಣಿಯಲ್ಲೇ ವಾಹನಗಳಿಗೆ ತಡೆ
ಪುತ್ತೂರು : ಮಂಗಳೂರು-ಬೆಂಗಳೂರು ಹೆದ್ದಾರಿಯ ಶಿರಾಡಿ ಘಾಟಿಯಲ್ಲಿ ಗುಡ್ಡ ಕುಸಿತವಾಗಿ ವಾಹನ ಸಂಚಾರಕ್ಕೆ ಸಮಸ್ಯೆಯಾದ ಕಾರಣದಿಂದ ಮಾಣಿಯಲ್ಲಿ ವಾಹನಗಳನ್ನು ತಡೆದು ಮಾಣಿ-ಮೈಸೂರು ಹೆದ್ದಾರಿಯ ಮೂಲಕ ಬೆಂಗಳೂರು ಸಂಪರ್ಕಿಸುವಂತೆ ಸೂಚನೆ ನೀಡಲಾಗಿತ್ತು. ಅದರಲ್ಲೂ ಭಾರಿ ವಾಹನಗಳನ್ನು ಈ ರಸ್ತೆಯ ಮೂಲಕವೇ ಕಳುಹಿಸಲಾಗಿದೆ. ಈ ಬಗ್ಗೆ ಬಂಟ್ವಾಳ ತಾಲೂಕು ಕಂಟ್ರೋಲ್ ರೂಮ್ ಹಾಗೂ ಬಂಟ್ವಾಳ ಪೊಲೀಸ್ ಹಿರಿಯ ಅಧಿಕಾರಿಯೂ ವಿಜಯವಾಣಿಗೆ ಮಾಹಿತಿ ನೀಡಿದ್ದರು.
*ಆದೇಶದ ಮಾಹಿತಿಯಿಲ್ಲ!
ಮಾಣಿ-ಮೈಸೂರು ಹೆದ್ದಾರಿಯ ಮಡಿಕೇರಿ ಸಮೀಪದ ಮದೆನಾಡು ಎಂಬಲ್ಲಿ ರಸ್ತೆ ಕುಸಿದಿದ್ದು, ತಾತ್ಕಾಲಿಕ ದುರಸ್ತಿ ಕಾರ್ಯ ಮಾಡಲಾಗಿದೆ. ಮಡಿಕೇರಿ ಜಿಲ್ಲಾಡಳಿತ ಕಳೆದ ವಾರವೇ ಕೊಡಗಿನ ಮೂಲಕವಾಗಿ ಭಾರಿ ವಾಹನಗಳು ಯಾವುದೂ ಸಂಚರಿಸುವ ಹಾಗಿಲ್ಲ ಎಂಬ ಆದೇಶವನ್ನು ಹೊರಡಿಸಿದೆ. ರಾತ್ರಿ ಸಮಯ ಕೆಲವೊಂದು ಒಪ್ಪಂದದ ಮೇರೆಗೆ ಭಾರಿ ವಾಹನಗಳನ್ನು ಕೊಡಗು ಮೂಲಕ ಬಿಡುವ ಕಾರ್ಯ ನಡೆಯುತ್ತದೆ ಎಂದು ಸ್ಥಳೀಯರು ತಿಳಿಸಿದರು.