ವಿಜಯವಾಣಿ ಸುದ್ದಿಜಾಲ ಧಾರವಾಡ
ಕೆಲ ದಿನ ಬಿಡುವು ನೀಡಿದ್ದ ಮಳೆ ನಗರದಲ್ಲಿ ಮಂಗಳವಾರ ಮಧ್ಯಾಹ್ನ ಧಾರಾಕಾರವಾಗಿ ಸುರಿಯಿತು. ಇದರಿಂದಾಗಿ ಪ್ರಮುಖ ರಸ್ತೆಗಳು ಜಲಾವೃತವಾಗಿ ವಾಹನ ಸವಾರರು ಪರದಾಡಬೇಕಾಯಿತು.
ಹಳಿಯಾಳ ನಾಕಾ, ಸವದತ್ತಿ ರಸ್ತೆ, ಜಂಬಗಿ ಆಸ್ಪತ್ರೆ ಬಳಿ, ಕೆ.ಸಿ. ಪಾರ್ಕ್ ಬಳಿ ಹಾಗೂ ಗಾಂಧಿ ಶಾಂತಿ ಪ್ರತಿಷ್ಠಾನ ಪಕ್ಕ ರಸ್ತೆಗಳು ಸಂಪೂರ್ಣ ಜಲಾವೃತವಾಗಿದ್ದವು. ಒಂದು ಗಂಟೆಗೂ ಹೆಚ್ಚು ಹೊತ್ತು ಬಿರುಸಿನಿಂದ ಸುರಿದ ಮಳೆಗೆ ಯುಸಿಬಿ ನಗರದ ಹಲವು ಮನೆಗಳಿಗೆ ನೀರು ನುಗ್ಗಿತ್ತು. ಈ ಪ್ರದೇಶದ ಶಿವಪ್ಪ ಕಮಡೊಳ್ಳಿ ಸೇರಿದಂತೆ ಹಲವರ ಮನೆಗಳು ಜಲಾವೃತವಾಗಿ, ಜನ ನೀರು ಹೊರಹಾಕಲು ಪರದಾಡಿದರು.
ತಪ್ಪದ ಬವಣೆ: ಕಳೆದ ವರ್ಷ ನಿರಂತರ ಮಳೆಯಿಂದ ಜಲಾವೃತವಾಗಿದ್ದ ಯುಸಿಬಿ ನಗರ ಬಡಾವಣೆಗೆ ಅಂದಿನ ಜಿಲ್ಲಾಧಿಕಾರಿ ದೀಪಾ ಚೋಳನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಪಾಲಿಕೆ ಅಧಿಕಾರಿಗಳಿಗೆ ಮಳೆಗಾಲ ನಂತರ ಶಾಶ್ವತ ಪರಿಹಾರ ಕೈಗೊಳ್ಳುವಂತೆ ಸೂಚಿಸಿದ್ದರು. ಕಾಟಾಚಾರಕ್ಕೆ ಮುಂದಾಗಿದ್ದ ಪಾಲಿಕೆ ಅಧಿಕಾರಿಗಳು ಸಭೆ ನಡೆಸಿ ಕ್ರಮ ಕೈಕೊಳ್ಳುವ ಭರವಸೆ ನೀಡಿದ್ದರು. ಆದರೆ, ಭರವಸೆ ಈಡೇರಿಲ್ಲ. ಕಳೆದ ವರ್ಷದಂತೆ ಈ ಬಾರಿಯೂ ಜನರಿಗೆ ಜಲಾವೃತದ ಬಿಸಿ ತಟ್ಟಿದೆ. ಮಳೆಗಾಲ ಪ್ರಾರಂಭದಿಂದ ಈವರೆಗೆ 4-5 ಬಾರಿ ಬಡಾವಣೆಗಳು ಜಲಾವೃತವಾಗಿ ನಾಗರಿಕರು ನೀರು ತುಂಬಿದ ಮನೆಗಳಲ್ಲಿ ನಿದ್ದೆಗೆಟ್ಟು ಜೀವನ ನಡೆಸುವಂತಾಗಿದೆ. ಜಿಲ್ಲಾಡಳಿತ, ಪಾಲಿಕೆಯಿಂದ ನಿರ್ಲಕ್ಷ್ಯ ಮುಂದುವರಿದರೆ ಮುಷ್ಕರ ನಡೆಸುವುದಾಗಿ ಸಿ.ಎಂ. ಸೂಡಿ, ಎಸ್.ಎಚ್. ಪಾಟೀಲ, ಅಶೋಕ ನಾಗಸಮುದ್ರ, ಪಿ.ಎಸ್. ರಜಪೂತ, ಮಹೇಶ ಸಾತಿಹಾಳ, ಇತರರು ಎಚ್ಚರಿಕೆ ನೀಡಿದ್ದಾರೆ.
ತಗ್ಗು ಪ್ರದೇಶಗಳಿಗೆ ನುಗ್ಗಿದ ನೀರು: ಹುಬ್ಬಳ್ಳಿ ನಗರದಾದ್ಯಂತ ಮಂಗಳವಾರ ಸಂಜೆ ಸುರಿದ ಧಾರಾಕಾರ ಮಳೆಗೆ ಗಣೇಶ ನಗರ ಸೇರಿದಂತೆ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ, ನಾಗರಿಕರು ತೊಂದರೆಗೀಡಾದರು.
ಬೆಳಗ್ಗೆಯಿಂದ ಬಿಸಿಲಿತ್ತು. ಆಕಾಶ ಸ್ವಚ್ಛವಾಗಿತ್ತು. ಸಂಜೆವೇಳೆ ದಿಢೀರ್ ಎಂಬಂತೆ ಮೋಡಗಳು ಮುಸುಕಿ ಬಂದು ಗುಡುಗು ಸಹಿತ ಜೋರಾಗಿ ಮಳೆ ಸುರಿಯಿತು.
ಅರ್ಧ ತಾಸಿಗಿಂತಲೂ ಹೆಚ್ಚು ಸಮಯ ಸುರಿದ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿತು. ಮಾರುಕಟ್ಟೆಯಲ್ಲಿಯೂ ನೀರು ನುಗ್ಗಿದ್ದರಿಂದ ತರಕಾರಿ, ಹೂವು, ಹಣ್ಣುಗಳು ಮಳೆ ನೀರಿನಲ್ಲಿ ತೇಲಿ ಹೋಗುತ್ತಿದ್ದ ದೃಶ್ಯ ಕಂಡುಬಂತು. ತಗ್ಗು ಪ್ರದೇಶದ ಮನೆಗಳಲ್ಲಿ ನುಗ್ಗಿದ್ದ ನೀರು ಹೊರಹಾಕಲು ಜನರು ಪರದಾಡುತ್ತಿದ್ದರು. ಮಧ್ಯಾಹ್ನದ ನಂತರ ಮೋಡ ಕವಿದ ವಾತಾವರಣ ನಿರ್ವಣಗೊಂಡಿತ್ತು.