ತುಮಕೂರು: ತುಮಕೂರು ನಗರ ಸೇರಿ ಜಿಲ್ಲೆಯ ಬಹುತೇಕ ಭಾಗದಲ್ಲಿ ಗುರುವಾರ ರಾತ್ರಿ ಭರ್ಜರಿ ಮಳೆ ಸುರಿದಿದೆ. ಒಂದು ರಾತ್ರಿಯ ಮಳೆ ಸ್ಮಾರ್ಟ್‌ಸಿಟಿ ತುಮಕೂರು ನಗರದ ಅವ್ಯವಸ್ಥೆ ತೆರೆದಿಟ್ಟಿದೆ.
ಎಂ.ಜಿ.ರಸ್ತೆಯಿಂದ, ವಿವೇಕಾನಂದ ರಸ್ತೆಯಿಂದ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿ ಇತ್ತೀಚೆಗಷ್ಟೇ ಲಕ್ಷಾಂತರ ರೂ. ವೆಚ್ಚದಲ್ಲಿ ನಿರ್ಮಿಸಿದ್ದ ಯುಜಿಡಿ ಶುಕ್ರವಾರ ಮಧ್ಯಾಹ್ನ ಕುಸಿದುಬಿದ್ದಿದ್ದು ದೊಡ್ಡ ಕಂದಕ ಸೃಷ್ಟಿಯಾಗಿದೆ. ನಡುರಸ್ತೆಯಲ್ಲಿ ಆಳವಾದ ಗುಂಡಿ ಬಿದ್ದಿದ್ದು ಮತ್ತಷ್ಟು ದಿನ ರಸ್ತೆ ಸಂಚಾರಕ್ಕೆ ಇಲ್ಲದಂತಾಗಿದೆ.
ಸುದ್ದಿ ತಿಳಿದು ಕೂಡಲೇ ಅಧಿಕಾರಿಗಳ ಜತೆ ಸ್ಥಳಕ್ಕೆ ಧಾವಿಸಿದ ಪಾಲಿಕೆ ಆಯುಕ್ತೆ ರೇಣುಕಾ ತಕ್ಷಣ ಕಂದಕ ಸರಿಪಡಿಸಿ ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸಲು ಸೂಚಿಸಿದರು ಆದರೆ, ಯುಜಿಡಿ ಕಳಪೆ ಕಾಮಗಾರಿ ಭವಿಷ್ಯದಲ್ಲಿ ಮತ್ತಷ್ಟು ಅನಾಹುತದ ಮುನ್ಸೂಚನೆ ನೀಡಿವೆ. ಮಳೆಯಿಂದ ನಗರದ ಅಮಾನಿಕೆರೆ ರಸ್ತೆ, ಬಿ.ಎಚ್.ರಸ್ತೆಯಲ್ಲಿ ಟಾಟಾ ಶೋರೂಂ ಮುಂಭಾಗದ ತಗ್ಗು ಪ್ರದೇಶದಲ್ಲಿ ಆಳುದ್ದದ ನೀರು ನಿಂತು ಸಂಚಾರಕ್ಕೆ ತೊಂದರೆಯಾಗಿದ್ದು ಜನರಿಗೆ ಆತಂಕ ಮೂಡಿಸಿತ್ತು. ನಗರದ ಬಹುತೇಕ ಭಾಗದಲ್ಲಿ ಮಳೆಯಿಂದ ಅವ್ಯವಸ್ಥೆಯೇ ನಿರ್ಮಾಣವಾಗಿತ್ತು.
ಸ್ಮಾರ್ಟ್‌ಸಿಟಿ ಕಾಮಗಾರಿಗೆ ಜನ ಹೈರಾಣ: ಸಾಕಷ್ಟು ನಿರೀಕ್ಷೆಗಳ ಜತೆ ಆರಂಭವಾದ ತುಮಕೂರು ಸ್ಮಾರ್ಟ್‌ಸಿಟಿ ಕಾಮಗಾರಿಗಳು ನಗರವಾಸಿಗಳ ನೆಮ್ಮದಿಯನ್ನೇ ಕಿತ್ತುಕೊಂಡಿವೆೆ. ಯೋಜನೆಯ ಮೊದಲ ಕಾಮಗಾರಿಯಾಗಿ ಆರಂಭವಾದ ಬಾರ್‌ಲೈನ್ ರಸ್ತೆ ಕಾಮಗಾರಿ ಇನ್ನೂ ಮುಗಿದಿಲ್ಲ, ಶೀಘ್ರದಲ್ಲಿ ಮುಗಿಯುವ ಆಶಾಭಾವನೆ ಜನರಿಗಿಲ್ಲ, ರಾಧಾಕೃಷ್ಣ ರಸ್ತೆ, ಅಶೋಕರಸ್ತೆಗಳ ಕಾಮಗಾರಿ ಆಮೆ ವೇಗದಲ್ಲಿ ನಡೆಯುತ್ತಿದ್ದು ಮಳೆ ಬಂದಾಗ ಸಾಕ್ಷಾತ್ ನರಕದ ದರ್ಶನವನ್ನೇ ಮಾಡಿಸುತ್ತಿವೆ.
ಸುವರ್ಣ ಭವನಕ್ಕೆ ಮಳೆನೀರು : ಅಮಾನಿಕೆರೆ ರಸ್ತೆಯ ಕನ್ನಡ ಭವನ ಕಟ್ಟಡದಲ್ಲಿರುವ ಸುವರ್ಣ ಭವನಕ್ಕೆ ಮಳೆನೀರು ನುಗ್ಗಿ ಪೀಠೋಪಕರಣ ಹಾಗೂ ಹಳೆಯ ಪೇಪರ್ ನೀರಿನಲ್ಲಿ ಮುಳುಗಿ ಹೋಗಿದೆ. ಸಣ್ಣ ಮಳೆಗೂ ಭವನಕ್ಕೆ ನೀರು ನುಗ್ಗುವ ಸಮಸ್ಯೆ ಬಗ್ಗೆ ಪಾಲಿಕೆ ಆಯುಕ್ತರು, ಇಂಜಿನಿಯರ್‌ಗಳಿಗೆ ತಿಳಿಸಿದರೂ ಪ್ರಯೋಜನವಾಗಿಲ್ಲ, ಈ ಸ್ಮಾರ್ಟ್‌ಸಿಟಿ ಕಾಮಗಾರಿಗಳಿಂದ ನಗರವಾಸಿಗಳಿಗೆ ಇಷ್ಟೆಲ್ಲ ತೊಂದರೆಯಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷೆ ಬಾ.ಹ.ರಮಾಕುಮಾರಿ ಅಸಮಾಧಾನ ವ್ಯಕ್ತಪಡಿಸಿದರು. ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿ ಸುವರ್ಣಭವನದಲ್ಲಿ ತುಂಬಿಕೊಂಡಿದ್ದ ನೀರನ್ನು ಹೊರಗೆ ಕಳುಹಿಸಲಾಯಿತು. 2 ಅಗ್ನಿಶಾಮಕ ವಾಹನಗಳ ಜತೆ ಆಗಮಿಸಿದ 10 ಸಿಬ್ಬಂದಿ ನೀರು ಹೊರತೆಗೆದರು.
ಶಾಸಕ ಜ್ಯೋತಿಗಣೇಶ್ ನಗರ ಪ್ರದಕ್ಷಣೆ!: ನಗರದಲ್ಲಿ ಮಳೆಯ ಅವ್ಯವಸ್ಥೆಯ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಶಾಸಕ ಜಿ.ಬಿ.ಜ್ಯೋತಿಗಣೇಶ್, ಪಾಲಿಕೆ ಆಯುಕ್ತೆ ರೇಣುಕಾ ಅಧಿಕಾರಿಗಳ ಜತೆ ಶುಕ್ರವಾರ ಸಿಟಿರೌಂಡ್ಸ ನಡೆಸಿದರು. ಸಿದ್ಧಗಂಗಾ ಬಡಾವಣೆ, ಸೋಮೇಶ್ವರ ದೇವಾಲಯ, ಅಮಾನಿಕೆರೆ ರಸ್ತೆಗಳ ಅವ್ಯವಸ್ಥೆಗಳನ್ನು ವೀಕ್ಷಿಸಿ, ಸೂಕ್ತಕ್ರಮಕ್ಕೆ ಸೂಚಿಸಿದರು.
ಎಂ.ಜಿ. ರಸ್ತೆಯ ವೃತ್ತದಲ್ಲಿ ರಸ್ತೆ ಕುಸಿದಿರುವ ಬಗ್ಗೆ ಸಾಕಷ್ಟು ದೂರುಗಳು ಸ್ಮಾಟ್‌ಸಿಟಿ ಕಚೇರಿಗೆ ಬಂದಿದೆ ಆದರೆ, ಈ ಕಾಮಗಾರಿ ಸ್ಮಾರ್ಟ್ ಸಿಟಿಗೆ ಸಂಬಂಧಪಟ್ಟಿದ್ದಲ್ಲ, ಯುಜಿಡಿ ಕಾಮಗಾರಿ ಪೂರ್ಣಗೊಂಡ ನಂತರ ಸ್ಮಾರ್ಟ್‌ಸಿಟಿ ರಸ್ತೆ ಕಾಮಗಾರಿಗೆ ಅನುಮತಿ ನೀಡಲಿದೆ. ಬಿ.ಟಿ.ರಂಗಸ್ವಾಮಿ ಎಂಡಿ, ಸ್ಮಾರ್ಟ್‌ಸಿಟಿ ಲಿ., ಒಂದು ರಾತ್ರಿಯ ಮಳೆ ತುಮಕೂರು ನಗರದ ಹಣೆಬರಹವನ್ನೇ ತೆರೆದಿಟ್ಟಿದೆ, ಸ್ಮಾರ್ಟ್‌ಸಿಟಿ ಕಾಮಗಾರಿ ವಿಳಂಬವಾದ ಕಾರಣಕ್ಕೆ ಕನ್ನಡ ಭವನಕ್ಕೆ ನೀರು ತುಂಬಿಕೊಳ್ಳುತ್ತಿದೆ, ಶಾಶ್ವತ ಪರಿಹಾರಕ್ಕೆ ಪಾಲಿಕೆಗೆ ಮನವಿ ಮಾಡಿದರೂ ಪ್ರಯೋಜನವಾಗುತ್ತಿಲ್ಲ. ಬಾ.ಹ.ರಮಾಕುಮಾರಿ ಅಧ್ಯಕ್ಷೆ, ಜಿಲ್ಲಾ ಕಸಾಪ