ತಿ.ನರಸೀಪುರ ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಮುಂಭಾಗ ಧಾರಾಕಾರವಾಗಿ ಸುರಿದ ಮಳೆ ನೀರು ಚರಂಡಿ, ರಸ್ತೆಯನ್ನು ಒಂದುಗೂಡಿಸಿ ಹರಿಯುತ್ತಿರುವುದು. 10 ತಿ.ನರಸೀಪುರ 2: ತಿ.ನರಸೀಪುರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ರಸ್ತೆಯಲ್ಲಿ ಚರಂಡಿ ನೀರಿನೊಂದಿಗೆ ಹರಿಯುತ್ತಿರುವ ಮಳೆ ನೀರು. 
ಜಿಲ್ಲೆ

ತಿ.ನರಸೀಪುರದಲ್ಲಿ ಧಾರಾಕಾರ ಮಳೆ

ತಿ.ನರಸೀಪುರ: ತಾಲೂಕಿನಾದ್ಯಂತ ಕಳೆದೆರಡು ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು, ಪಟ್ಟಣದಲ್ಲಿ ಭಾನುವಾರ ಮಧ್ಯಾಹ್ನ ಸುರಿದ ಧಾರಾಕಾರ ಮಳೆಗೆ ಚರಂಡಿಗಳಲ್ಲಿ ನೀರು ರಸ್ತೆಗೆ ಹರಿಯಿತು.

ಮಧ್ಯಾಹ್ನ ಮೋಡ ಕವಿದು ಧಾರಾಕಾರ ಮಳೆ ಸುರಿಯಲಾರಂಭಿಸಿತು. ಅನಿರೀಕ್ಷಿತ ಮಳೆಯಿಂದ ಜನರು ಮಳೆ ನೀರಿನಲ್ಲಿ ನೆನೆಯುವದನ್ನು ತಪ್ಪಿಸಿಕೊಳ್ಳಲು ಅಂಗಡಿ, ಮುಂಗಟ್ಟುಗಳ ಬಳಿ ಸೂರಿನಡಿ ಹೋಗಿ ನಿಲ್ಲುತ್ತಿದ್ದ ದೃಶ್ಯ ಕಂಡುಬಂತು.

ಹಲವು ತಾಸುಗಳ ಕಾಲ ಸುರಿದ ಮಳೆಯಿಂದಾಗಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ರಸ್ತೆಯ ಚರಂಡಿ ಭರ್ತಿಯಾಗಿ ಖಾಸಗಿ ಬಸ್ ನಿಲ್ದಾಣ ಬಳಿ ರಸ್ತೆ ಹರಿದ ನೀರು ಪಕ್ಕದ ಚರಂಡಿಯನ್ನು ಸೇರಲಾರಂಭಿಸಿತು. ಕಾಲೇಜು ವೃತ್ತದ ಮೇಲ್ಭಾಗದ ನಂಜನಗೂಡು ರಸ್ತೆಯ ಚರಂಡಿ ವ್ಯವಸ್ಥೆ ಸಂಪೂರ್ಣ ಹಾಳಾಗಿರುವುದರಿಂದ ಚರಂಡಿ ನೀರೆಲ್ಲವೂ ರಸ್ತೆ ತುಂಬ ಆವರಿಸಿತು. ಮಳೆ ನಿಂತ ಬಳಿಕವೂ ಚರಂಡಿ ನೀರು ರಸ್ತೆಯಲ್ಲಿ ಹರಿದಿದ್ದರಿಂದ ನೀರಿನಲ್ಲೇ ವಾಹನ ಸವಾರರು, ಪಾದಚಾರಿಗಳು ಓಡಾಡುವಂತಾಯಿತು.

ವೈಜ್ಞಾನಿಕ ಚರಂಡಿ ಅಗತ್ಯ: ಪಟ್ಟಣ ಪಂಚಾಯಿತಿ ಆಗಿದ್ದ ತಿರುಮಕೂಡಲು ನರಸೀಪುರ ಎರಡು ಗ್ರಾಪಂಗಳನ್ನು ಒಳಗೊಂಡು ಪುರಸಭೆಯಾಗಿ ಪರಿವರ್ತನೆ ಆಗಿರುವುದರಿಂದ ಪಟ್ಟಣದಲ್ಲಿ ಚರಂಡಿ ವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ಈ ಹಿನ್ನೆಲೆಯಲ್ಲಿ ವೈಜ್ಞಾನಿಕ ಚರಂಡಿ ಶೀಘ್ರ ನಿರ್ಮಾಣವಾಗಬೇಕಿದೆ ಎಂದು ಜನರು ಆಗ್ರಹಿಸಿದ್ದಾರೆ.

ಒಳಚರಂಡಿಗಳು ಸಹ ಆಗಾಗ ತುಂಬಿ ಹೋಗಿ ಗಲೀಜು ನೀರು ರಸ್ತೆಗೆ ಹರಿಯುವುದು ಸಾಮಾನ್ಯ ಎನ್ನುವಂತಾಗಿದೆ. ಮಳೆ ಸುರಿದಾಗಲಂತೂ ರಸ್ತೆಗಳೇ ಚರಂಡಿಗಳಾಗಿ ಬಿಡುತ್ತವೆ. ತಾಲೂಕು ಕೇಂದ್ರವಾಗಿ ಬೆಳೆಯುತ್ತಿರುವ ಪಟ್ಟಣದಲ್ಲಿ ವೈಜ್ಞಾನಿಕ ಚರಂಡಿಗಳ ನಿರ್ಮಾಣ ಅಗತ್ಯವಾಗಿದೆ ಎಂದರು.

ಮಳೆಯಿಂದಾಗಿ ಚರಂಡಿಗಳು ತುಂಬಿ ರಸ್ತೆಯಲ್ಲಿ ನೀರು ಹರಿಯುವುದು ಗಮನಕ್ಕೆ ಬಂದ ಕೂಡಲೇ ಸಮಸ್ಯೆಯನ್ನು ನೋಡಿ, ಸರಿಪಡಿಸಲು ಪುರಸಭೆ ಸಿಬ್ಬಂದಿ ಹಾಗೂ ಪೌರಕಾರ್ಮಿಕರನ್ನು ಕಳುಹಿಸಿದ್ದೇವೆ. ಚರಂಡಿಗಳಲ್ಲಿ ಕೊಳಚೆ ನೀರು ನಿಲ್ಲುವುದರಿಂದ ಮಳೆ ಬಂದರೆ ಈ ಸಮಸ್ಯೆ ಆಗುತ್ತಿದೆ. ಮುಂದಿನ ದಿನಗಳಲ್ಲಿ ಈಗಾಗದಂತೆ ಕ್ರಮ ಕೈಗೊಳ್ಳಲಾಗುವುದು.

ತ್ರಿವೇಣಿ, ಪ್ರಭಾರ ಮುಖ್ಯಾಧಿಕಾರಿ, ಪುರಸಭೆ, ತಿ.ನರಸೀಪುರ

ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಮುಂಭಾಗದ ಮಳೆ ನೀರು ಮಂಡಿಯುದ್ದಕ್ಕೆ ನಿಲ್ಲುವುದರಿಂದ ಚರಂಡಿ ಯಾವುದು, ರಸ್ತೆ ಯಾವುದು ಎಂಬುದೇ ಕಾಣುವುದಿಲ್ಲ. ಆಯತಪ್ಪಿ ಆಳದ ಚರಂಡಿಗೆ ಬೀಳುವ ಆತಂಕ ಹೆಚ್ಚಿದೆ. ಆದ್ದರಿಂದ ಸ್ಥಳೀಯ ಪುರಸಭೆ ಆಡಳಿತ ಹಾಗೂ ಈ ಭಾಗದ ಜನಪ್ರತಿನಿಧಿಗಳು ಇತ್ತ ಗಮನ ಹರಿಸಿ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳಬೇಕು.

ರಘುನಂದನ್, ನಾಗರಿಕ, ತಿ.ನರಸೀಪುರ