ಜಿಲ್ಲೆ

ಭಾರಿ ಮಳೆಗೆ ತುಂಬಿ ಹರಿಯುವ ನದಿ

ಸೌಮ್ಯ ಆರ್

ಸುಳ್ಯ: ಸುಳ್ಯ ತಾಲೂಕಿನಲ್ಲಿ ಮಂಗಳವಾರವೂ ಭಾರಿ ಮಳೆ ಮುಂದುವರಿದಿತ್ತು. ರಾತ್ರಿ, ಹಗಲೆನ್ನದೆ ನಾಲ್ಕು ದಿನಗಳ ಕಾಲ ಎಡೆಬಿಡದೆ ಧಾರಾಕಾರ ಮಳೆ ಸುರಿಯಿತು.

ಕುಂಭದ್ರೋಣ ಮಳೆಯಿಂದ ಜನರು ಮನೆಯಿಂದ ಹೊರಗೆ ಬರಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿತ್ತು. ಸೋಮವಾರ ಹಗಲು, ರಾತ್ರಿ ಸುರಿದ ಭರ್ಜರಿ ಮಳೆ ಮಂಗಳವಾರವೂ ಮುಂದುವರಿದಿದ್ದು ಮಧ್ಯಾಹ್ನದವರೆಗೆ ಧಾರಾಕಾರ ಮಳೆಯಾಗಿತ್ತು. ಮಧ್ಯಾಹ್ನದ ಬಳಿಕ ಮಳೆ ಸ್ವಲ್ಪ ಬಿಡುವು ನೀಡಿತ್ತು. ಭಾರಿ ಮಳೆಯಿಂದ ನದಿ, ಹಳ್ಳ ಕೊಳ್ಳ, ತೋಡು ತುಂಬಿ ಹರಿಯುತ್ತಿವೆ. ಪಯಸ್ವಿನಿ ನದಿ, ಕಂದಡ್ಕ ಹೊಳೆ ಮೈದುಂಬಿ ಹರಿಯುತ್ತಿವೆ. ಸೋಮವಾರ ಸಂಜೆಯಿಂದ ಭಾರಿ ಮಳೆಯಾದ ಹಿನ್ನೆಲೆಯಲ್ಲಿ ಮಂಗಳವಾರ ಸುಳ್ಯ ತಾಲೂಕಿನ ಶಾಲೆಗಳಿಗೆ ರಜೆ ಸಾರಲಾಗಿತ್ತು.