ಜಿಲ್ಲೆ

ಶಿರಸಿಯಲ್ಲಿ ಅಬ್ಬರಿಸಿದ ಮಳೆ, ಮನೆಯೊಳಗೆ ನುಗ್ಗಿದ ಚರಂಡಿ ನೀರು

ಶಿರಸಿ: ಶನಿವಾರ ಮಧ್ಯಾಹ್ನ 3.30ರ ವೇಳೆ ನಗರ ಪ್ರದೇಶದಲ್ಲಿ ಅರ್ಧ ಗಂಟೆಯ ಕಾಲ ಭರ್ಜರಿ ಮಳೆ ಸುರಿಯಿತು, ಗುಡುಗು, ಸಿಡಿಲಿನ ಅಬ್ಬರವೂ ಜೋರಾಗಿದ್ದು, ಸಾರ್ವಜನಿಕರು ಮನೆಯಿಂದ ಹೊರ ಬರದ ಸ್ಥಿತಿ ಉಂಟಾಗಿತ್ತು.
ಶನಿವಾರ ಬೆಳಗಿನ ವೇಳೆ ಮಳೆ ಇರದ ಕಾರಣ ಈ ಅನಿರೀಕ್ಷಿತ ಮಳೆ ನಿರೀಕ್ಷೆಯಲ್ಲಿ ಯಾರೂ ಇರಲಿಲ್ಲ. ಒಮ್ಮೆಲೇ ಆರಂಭವಾದ ಮಳೆ ನಗರದ ಅನೇಕ ಕಡೆಗಳಲ್ಲಿ ಮನೆಯೊಳಗೆ ನೀರು ನುಗ್ಗಿ ಸಮಸ್ಯೆ ಉಂಟು ಮಾಡಿತು. ಇಲ್ಲಿಯ ಧುಂಡಶಿ ನಗರದಲ್ಲಿ ಚರಂಡಿಗಳು ಉಕ್ಕಿ ಹರಿದು ಮನೆಯೊಳಗೆ ನೀರು ನುಗ್ಗಿದ್ದರೆ, ಸಾಮ್ರಾಟ್ ಎದುರಿನ ನೆಮ್ಮದಿ ಕುಟೀರದ ಸುತ್ತಮುತ್ತಲಿನ ಪ್ರದೇಶದಲ್ಲಿಯೂ ಇದೇ ಸ್ಥಿತಿ ಉಂಟಾಗಿತ್ತು. ಎಪಿಎಂಸಿ ರಿಂಗ್ ರೋಡ್​ನಲ್ಲಿ ಮನೆಯೊಂದರ ಕಾಂಪೌಂಡ್ ಕುಸಿದು ಹಾನಿಯಾದರೆ, ವೀರಭದ್ರ ಗಲ್ಲಿಯಲ್ಲಿ ರಸ್ತೆ ಕಾಣದ ರೀತಿ ಪ್ರವಾಹ ಹರಿದಿದೆ. ಮರಾಠಿಕೊಪ್ಪದ ಜೋಡು ಕಟ್ಟೆ ಸಮೀಪದಲ್ಲಿ ಧರೆ ಕುಸಿತ ಉಂಟಾಗಿದೆ.

ಇಲ್ಲಿಯ ಖಾಜಿ ಗಲ್ಲಿಯಲ್ಲಿ ಮನೆಯೊಳಗೆ ನೀರು ನುಗ್ಗಿ ಪಾತ್ರೆಗಳು ತೇಲಿಹೋಗಿವೆ. ಎಪಿಎಂಸಿ ಕ್ರಾಸ್ ಬಳಿಯ ತಿಲಕ ನಗರದಲ್ಲಿ ಮನೆಯೊಳಗೆ ನೀರು ನುಗ್ಗಿ ಹಾನಿಯಾಗಿವೆ. ಕೇವಲ ಅರ್ಧ ಗಂಟೆಯ ಮಳೆ ನಗರದ ಅನೇಕ ಕಡೆ ಅನಾಹುತಗಳನ್ನು ಸೃಷ್ಟಿಸಿದೆ.